ಬಜಾಜ್ ಫೈನಾನ್ಸ್ ಕಾರ್ಡ್ ಗ್ರಾಹಕರೇ.. ನಿಮ್ಮ ಕಾರ್ಡ್ ಬಳಸಿ ಶಾಪಿಂಗ್ ಮಾಡೋ ವಂಚಕರಿದ್ದಾರೆ ಎಚ್ಚರ
ನೀವು ಬಜಾಜ್ ಫೈನಾನ್ಸ್ ಕಾರ್ಡ್ ಹೊಂದಿದ್ದೀರಾ? ನಿಮ್ಮ ಕಾರ್ಡ್ ಹಳೆಯದಾಗಿದೆ ಅಂತ ಸುಮ್ಮನಾಗಿದ್ದೀರಾ? ಹಾಗಿದ್ದರೆ ಇರಲಿ ಎಚ್ಚರ...
ಬೆಂಗಳೂರು: ನೀವು ಬಜಾಜ್ ಫೈನಾನ್ಸ್ ಕಾರ್ಡ್ (Bajaj Finance Card) ಹೊಂದಿದ್ದು ಕಾರ್ಡ್ ಹಳೆಯದಾಗಿದೆ ಅಂತ ಸುಮ್ಮಾಗಿದ್ದರೆ ಈ ಸುದ್ದಿಯನ್ನೊಮ್ಮೆ ಸರಿಯಾಗಿ ಓದಿಬಿಡಿ. ಇಲ್ಲವಾದರೆ ನಿಮ್ಮ ಕಾರ್ಡ್ ಅನ್ನು ವಂಚಕರು ದುರ್ಬಳಕೆ ಮಾಡುತ್ತಾರೆ ಇರಲಿ ಎಚ್ಚರ. ಹೌದು, ಬಜಾಜ್ ಫೈನಾನ್ಸ್ ಕಾರ್ಡ್ ಕೆಲಸಗಾರನಿಂದಲೇ ಇಂತಹ ಒಂದು ದೋಖಾ ನಡೆಯುತ್ತಿದೆ. ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನ ಟಾರ್ಗೇಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ನಗರದ ಕೇಂದ್ರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಬಜಾಜ್ ಪೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ವಿಕಾಸ್, ಗ್ರಾಹಕರಿಗೆ ವಂಚನೆ ಎಸಗಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ. ಅದರಂತೆ ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈತ, ಅಂತಹ ಗ್ರಾಹಕರ ದಾಖಲೆ ನೀಡಿ ಹೊಸ ಸಿಮ್ ಖರೀದಿ ಮಾಡಿಕೊಳ್ಳುತ್ತಿದ್ದನು. ಬಳಿಕ ಅದೇ ಸಿಮ್ ಕಾರ್ಡ್ ಬಳಸಿ ಬಜಾಜ್ ಕಾರ್ಡ್ ಖರೀದಿ ಮಾಡುತ್ತಿದ್ದನು.
ಇದನ್ನೂ ಓದಿ: ಕಲಬುರಗಿಯಲ್ಲಿ ಸಿನಿಮಾ ಶೈಲಿಯಲ್ಲಿ ನಡೆಯಿತು ಬಾಲಕನ ಅಪಹರಣ, ಸಿಂಗಂ ಸ್ಟೈಲ್ನಲ್ಲಿ ಪೊಲೀಸರ ಕಾರ್ಯಾಚರಣೆ
ಗ್ರಾಹಕರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಬಜಾಜ್ ಕಂಪನಿಯ ಕಾರ್ಡ್ ಖರೀದಿಸಿದ ನಂತರ ಅಂತಹ ಕಾರ್ಡ್ ಮೂಲಕ ಅಮೇಜಾನ್ನಲ್ಲಿ ಬೆಲೆಬಾಳುವ ಮೊಬೈಲ್ ಖರೀದಿ ಮಾಡುತ್ತಿದ್ದನು. ಹೀಗೆ ಖರೀದಿಸಿದ ಮೊಬೈಲ್ಗಳನ್ನು ಓಎಲ್ಎಕ್ಸ್ನಲ್ಲಿ ಮಾರಾಟ ಮಾಡುತ್ತಿದ್ದನು. ಇದೇ ರೀತಿ ಮೊಬೈಲ್ಗಳನ್ನು ಮಾರಾಟ ಮಾಡಿದ ಆರೋಪಿ ವಿಕಾಸ್, 14 ಲಕ್ಷ ಹಣ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: U.T.Khader: ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚನೆಗೆ ಯತ್ನ: ಸೈಬರ್ ಕ್ರೈಂಗೆ ದೂರು ನೀಡಿದ U.T.ಖಾದರ್
ಸದ್ಯ ಗ್ರಾಹಕರಿಗೆ ಆಗುತ್ತಿದ್ದ ವಂಚನೆ ಬಗ್ಗೆ ಬಜಾಜ್ ಕಂಪನಿಯು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರಿನ ಅನ್ವಯ ತನಿಖೆಗೆ ಇಳಿದ ಪೊಲೀಸರು, ವಿಕಾಸ್ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪುಣೆಯ ವಿಮಂತಲ ಠಾಣೆಯಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ತಿಳಿದುಬಂದಿದೆ. ಅಲ್ಲೂ ಇದೇ ರೀತಿ ವಂಚಿಸಿದ್ದ ಆರೋಪಿ ವಿಕಾಸ್, ಬೆಂಗಳೂರಿನಲ್ಲಿ ಬಜಾಜ್ ಪೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಇಲ್ಲೂ ವಂಚನೆ ಎಸಗುತ್ತಿದ್ದನು. ಸದ್ಯ ಆರೋಪಿಯನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 am, Thu, 5 January 23