ಬೆಂಗಳೂರು: ರಸ್ತೆಯಲ್ಲಿ ತನಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ಬೈಕ್ ಸವಾರನ ಮೇಲೆ ಲ್ಯಾಂಡ್ ರೋವರ್ ಕಾರು ಚಾಲಕ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಬುಧವಾರ ರಾತ್ರಿ ರಸ್ತೆಯಲ್ಲಿ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಶೂಟ್ ಮಾಡಿದ್ದು, ಬೈಕ್ ಸವಾರ ಪರಾರಿಯಾಗಿದ್ದಾರೆ.
ಬುಧವಾರ ರಾತ್ರಿ 9.30ರ ವೇಳೆಗೆ ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ಬಳಿ ಗುಂಡಿನ ದಾಳಿ ನಡೆಸಲಾಗಿದೆ. ದ್ವಿಚಕ್ರ ವಾಹನದಲ್ಲಿದ್ದ ಅನಿಲ್ ಯಾವುದೇ ಅಪಾಯವಿಲ್ಲದೆ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ತೆರಳಿದ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಲ್ಯಾಂಡ್ ರೋವರ್ ಚಾಲಕನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ರವೀಶ್ ಗೌಡ ಎಂದು ಗುರುತಿಸಲಾಗಿದೆ. ಆತ ಐಷಾರಾಮಿ ಲ್ಯಾಂಡ್ ರೋವರ್ ಎಸ್‌ಯುವಿಯನ್ನು ಓಡಿಸುತ್ತಿದ್ದ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದಾರೆ. ಆತನನ್ನು ಗುರುವಾರ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಿರಿದಾದ ರಸ್ತೆಯಲ್ಲಿ ಹಿಂದೆ ಬರುತ್ತಿದ್ದ ಲ್ಯಾಂಡ್ ರೋವರ್ ಕಾರಿಗೆ ಬೈಕ್ ಸವಾರ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಮೊದಲು ಜಗಳ ಆರಂಭವಾಯಿತು. ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದ ನಂತರ ಆರೋಪಿ ರವೀಶ್ ಗೌಡ ತನ್ನ ಬಂದೂಕನ್ನು ತೆಗೆದು ಶೂಟ್ ಮಾಡಿದ್ದಾರೆ. ಅಷ್ಟರಲ್ಲಿ ಬೈಕ್ ಸವಾರ ಪರಾರಿಯಾಗಿದ್ದರಿಂದ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಗನ್ಗೆ ಲೈಸೆನ್ಸ್ ಇತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ವಿರುದ್ಧ ಕೊಲೆ ಪ್ರಯತ್ನದ ಆರೋಪದಲ್ಲಿ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ವಾಲಿದ 3 ಅಂತಸ್ತಿನ ಕಟ್ಟಡ; ಹಲವು ಕುಟುಂಬಗಳ ಸ್ಥಳಾಂತರ