ನಿಮಗೂ ಈ ರೀತಿ ಕರೆ ಬರಬಹುದು ಎಚ್ಚರ.. ಬೆಂಗಳೂರಿನ ಮಹಿಳೆಗೆ 5 ಲಕ್ಷ ವಂಚಿಸಿದ ಸೈಬರ್ ಚೋರರು
ಬೆಂಗಳೂರಿನಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದು, ವರ್ಷದ ಮೊದಲ ತಿಂಗಳಲ್ಲೇ (ಜನವರಿ) ಬೆಂಗಳೂರಿನಲ್ಲಿ ಸೈಬರ್ ಖದೀಮರು ಹೆಚ್ಚು ಕೈಚಳಕ ತೋರಿಸಿದ್ದರು. ಇದೀಗ ಮತ್ತೆ ಸೈಬರ್ ಚೋರರ ವಂಚನೆ ಮುಂದುವರಿದಿದೆ.
ಬೆಂಗಳೂರು: ದೆಹಲಿ ಪೊಲೀಸರ ಹೆಸರಿನಲ್ಲಿ ಬೆಂಗಳೂರು ಮಹಿಳೆಯೊಬ್ಬರಿಗೆ ವಂಚನೆ (Fraud) ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿಮ್ಮ ಹೆಸರಿನಲ್ಲಿ ಡ್ರಗ್ಸ್, ಅವಧಿ ಮೀರಿದ ಪಾಸ್‌ಪೋರ್ಟ್ ಹಾಗೂ ಲ್ಯಾಪ್‌ಟಾಪ್ ಪಾರ್ಸಲ್ ಹೋಗುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ನಂಬಿಸಿ ಮಹಿಳೆಯ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ವಂಚಿಸಿದ್ದಾರೆ. ಸದ್ಯ ವಂಚನೆಗೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರಿಯರ್ ಸಂಬಂಧ ಮುಂಬೈನಿಂದ ಕರೆ ಮಾಡುತ್ತಿರುವುದಾಗಿ ಮಹಿಳೆಗೆ ದೂರವಾಣಿ ಮೂಲಕ ನಂಬಿಸಿದ ಸೈಬರ್ ಚೋರರು, ನಿಮ್ಮ ಹೆಸರಿನಲ್ಲಿ ವ್ಯಕ್ತಿಯೊಬ್ಬ ಡ್ರಗ್ಸ್, ಅವಧಿ ಮೀರಿದ ಪಾಸ್‌ಪೋರ್ಟ್ ಹಾಗೂ ಲ್ಯಾಪ್‌ಟಾಪ್ ಪಾರ್ಸಲ್ ಹೋಗುತ್ತಿದೆ, ನಿಮ್ಮ ಬ್ಯಾಂಕ್ ಖಾತೆ ಉಪಯೋಗಿಸಿ ಹಣ ವರ್ಗಾವಣೆ ಮಾಡುತ್ತಿದ್ದಾನೆ. ನಿಮ್ಮ ಖಾತೆಯಲ್ಲಿರುವ ಹಣ ಕೂಡಲೇ ನಮಗೆ ವರ್ಗಾಯಿಸಬೇಕು. ನೀವು ಆರೋಪಿ ಸ್ಥಾನದಲ್ಲಿದ್ದೀರಿ. ಈ ಬಗ್ಗೆ ತನಿಖೆ ಮಾಡಬೇಕಿದೆ ಎಂದು ಮಹಿಳೆಗೆ ನಂಬಿಸಿದ್ದಾರೆ.
ಇದನ್ನೂ ಓದಿ: Karnataka Cyber Crime: 2022ರಲ್ಲಿ ಸೈಬರ್ ಅಪರಾಧಗಳಿಂದ ಕರ್ನಾಟಕವು ನಿತ್ಯ 1 ಕೋಟಿ ರೂ.ಗಳನ್ನು ಕಳೆದುಕೊಂಡಿದೆ: ಗೃಹ ಇಲಾಖೆ
ಇನ್ನು ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದಲ್ಲದೆ, ಮಹಿಳೆಯನ್ನು ನಂಬಿಸಲು ನಕಲಿ ಐಡಿ ಕಾರ್ಡ್ ಕಳುಹಿಸಿದ್ದಾರೆ. ಇದನ್ನು ನಂಬಿದ ಮಹಿಳೆ, ತನಿಖೆಗೆ ಸಹಕರಿಸುವುದಾಗಿ ಹೇಳಿ, 5.5 ಲಕ್ಷ ಹಣವನ್ನು ಹಂತ ಹಂತವಾಗಿ ಕರೆ ಮಾಡಿದವರು ನೀಡಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದು ತಿಳಿದುಬಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಈಶಾನ್ಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2022ರಲ್ಲಿ ವಂಚಕರು ಜನರಿಂದ ನಿತ್ಯ ಸರಾಸರಿ 1 ಕೋಟಿ ರೂ.ಗಳನ್ನು ಲೂಟಿ ಮಾಡಿದ್ದಾರೆ. ಇಂಟರ್ನೆಟ್ ಅಪರಾಧಗಳಲ್ಲಿ ಕಳೆದುಹೋದ ಹಣದಲ್ಲಿ ಶೇಕಡಾ 150 ರಷ್ಟು ಏರಿಕೆಯಾಗಿದೆ ಎಂದು ರಾಜ್ಯ ಗೃಹ ಇಲಾಖೆ ಹೇಳಿದೆ. ಕರ್ನಾಟಕವು 2022 ರಲ್ಲಿ 363 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಮತ್ತು 2019 ರಿಂದ 722 ಕೋಟಿ ರೂಪಾಯಿಗಳನ್ನು ವಂಚಕರು ಸುಲಿಗೆ ಮಾಡಿದ್ದಾರೆ. ಕರ್ನಾಟಕವು 363,11,54,443 ರೂ.ಗಳನ್ನು ಕಳೆದುಕೊಂಡಿದೆ, ಆದರೆ ಅಧಿಕಾರಿಗಳು ಕೂಡ ಮೊತ್ತದ 12 ಪ್ರತಿಶತವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಧಾನಪರಿಷತ್ನಲ್ಲಿ ಗೃಹಇಲಾಖೆ ಉತ್ತರಿಸಿದೆ.
2023ರಲ್ಲಿಯೂ ಇಂತಹ ಅಪರಾಧಗಳಿಗೆ ಕಡಿವಾಣ ಬಿದ್ದಿಲ್ಲ, ಏಕೆಂದರೆ ರಾಜ್ಯದಲ್ಲಿ ಜನವರಿಯಲ್ಲಿಯೇ 1,325 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ, ಅಧಿಕೃತ ಅಂಕಿಅಂಶಗಳ ಪ್ರಕಾರ, ಸಂತ್ರಸ್ತರು 266,70,35, 040 ರೂ ಕಳೆದುಕೊಂಡು ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಮೈಸೂರು ನಗರ ಎರಡನೇ ಸ್ಥಾನದಲ್ಲಿದೆ (ರೂ 14,07,03,467) ಮತ್ತು ಮಂಡ್ಯ ಜಿಲ್ಲೆ ಮೂರನೇ ಸ್ಥಾನದಲ್ಲಿದೆ (ರೂ 13,82, 22,366).
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Fri, 24 February 23