Bengaluru Gang rape: ಸಂತ್ರಸ್ತೆಯೇ ವೇಶ್ಯಾವಾಟಿಕೆ ದಂಧೆಯ ಕಿಂಗ್ಪಿನ್, ಬಾಂಗ್ಲಾದಿಂದ ಆರೋಪಿಗಳನ್ನು ಕರೆಸಿಕೊಂಡಿದ್ದೇ ಈಕೆ ಎಂಬ ಸಂಶಯ
Bangalore Gangrape: ವಿಪರ್ಯಾಸವೆಂದರೆ ಆರೋಪಿಗಳೆಲ್ಲರನ್ನೂ ಬಾಂಗ್ಲಾದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದೇ ಸಂತ್ರಸ್ತೆ ಎನ್ನಲಾಗುತ್ತಿದ್ದು, ಅವರಿಗೆ ಹಣ ನೀಡದೆ ಸತಾಯಿಸಿದ ಕಾರಣ ಅದು ಗಲಾಟೆಗೆ ತಿರುಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು: ರಾಮಮೂರ್ತಿನಗರದಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಹಣಕ್ಕಾಗಿ ನಡೆದ ವಿಕೃತಿಯ ಮತ್ತೊಂದು ವಿಡಿಯೋ ಬಯಲಾಗಿದ್ದು, ಲೈಂಗಿಕವಾಗಿ ಚಿತ್ರಹಿಂಸೆ ನೀಡಿದ್ದ ಮೊದಲ ವಿಡಿಯೋ ಇದು ಎನ್ನಲಾಗಿದೆ. ಹಣಕ್ಕಾಗಿ ಯುವತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಯುವತಿ ಕಾಲು ಹಿಡಿದು ಬೇಡಿಕೊಂಡರೂ ಬಿಡದ ಗುಂಪು ಮನಸೋ ಇಚ್ಛೆ ಥಳಿಸಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡುವಾಗ ಮತ್ತೊಂದು ಮಹಿಳೆಯೂ ಅಲ್ಲಿದ್ದು, ವಿಕೃತವಾಗಿ ನಡೆದುಕೊಂಡ ಆಕೆ ತಾನು ಮಹಿಳೆ ಅನ್ನೊದನ್ನೂ ಮರೆತು ಹಲ್ಲೆ ಮಾಡಿರುವುದು ಕಂಡುಬಂದಿದೆ. ಆದರೆ, ಈ ಘಟನೆಯ ಮಹತ್ತರ ತಿರುವು ಎಂದರೆ ಇವರೆಲ್ಲರೂ ವೇಶ್ಯಾವಾಟಿಕೆಯ ಉದ್ದೇಶದಿಂದಲೇ ಬೆಂಗಳೂರಿಗೆ ಬಂದಿದ್ದರು ಎನ್ನುವ ಅನುಮಾನ ಕಾಡುತ್ತಿದ್ದು, ಸಂತ್ರಸ್ತ ಯುವತಿಯೇ ವೇಶ್ಯಾವಾಟಿಕೆ ದಂಧೆಯ ಕಿಂಗ್ಪಿನ್ ಆಗಿದ್ದರಾ ಎಂಬ ಸಂಶಯ ಕಾಡಲಾರಂಭಿಸಿದೆ. ಸಂತ್ರಸ್ತೆ ಹಾಗೂ ಯುವತಿ ಇವರೆಲ್ಲರೂ ಒಂದೇ ತಂಡದವರು ಎನ್ನಲಾಗಿದ್ದು, ಬಾಂಗ್ಲಾದಿಂದ ಅಕ್ರಮವಾಗಿ ಬಂದಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭಿಸಿದೆ.
ಇವರ ಬಳಿ ನಕಲಿ ಆಧಾರ್ ಕಾರ್ಡ್ ಕೂಡ ಇದೆ ಎಂಬ ಮಾಹಿತಿ ಸಿಕ್ಕಿದ್ದು, ದುಬೈನಲ್ಲಿ 2 ವರ್ಷ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಯುವತಿ 2 ವರ್ಷದ ಹಿಂದೆ ಹೈದರಾಬಾದ್ಗೆ ಬಂದು ಮಸಾಜ್ ಸೆಂಟರ್ ಅಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ವೇಶ್ಯಾವಾಟಿಕೆ ಜಾಲವನ್ನು ಸಂತ್ರಸ್ತೆಯೇ ನಿರ್ವಹಿಸುತ್ತಿದ್ದು, ಹಣಕಾಸಿನ ವಿಚಾರವಾಗಿ ಸಂಘರ್ಷ ಮೂಡಿದ ಕಾರಣ ಈ ಘಟನೆ ನಡೆದಿದೆ ಎಂದು ಕೆಲ ಮೂಲಗಳು ಮಾಹಿತಿ ನೀಡಿವೆ. ವಿಪರ್ಯಾಸವೆಂದರೆ ಆರೋಪಿಗಳೆಲ್ಲರನ್ನೂ ಬಾಂಗ್ಲಾದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದೇ ಸಂತ್ರಸ್ತೆ ಎನ್ನಲಾಗುತ್ತಿದ್ದು, ಅವರಿಗೆ ಹಣ ನೀಡದೆ ಸತಾಯಿಸಿದ ಕಾರಣ ಅದು ಗಲಾಟೆಗೆ ತಿರುಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕೇರಳದ ಕ್ಯಾಲಿಕಟ್ನಲ್ಲಿ ಸ್ಪಾ ತೆರೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಯುವತಿ ನಂತರ ಕೆಲ ಯುವತಿಯರನ್ನೂ ಅಲ್ಲಿಗೆ ಕರೆಸಿಕೊಂಡಿದ್ದರು. ಇದು ಗುಂಪಿನಲ್ಲಿ ಬಿರುಕು ಮೂಡಲು ಕಾರಣವಾಗಿದ್ದು ಬೆಂಗಳೂರಿನಲ್ಲಿದ್ದ ಯುವಕರಿಗೆ ಸಿಟ್ಟು ತರಿಸಿತ್ತು. ಅದಾದ ಮೇಲೆ ಮೇ 19ರ ಸುಮಾರಿಗೆ ಆಕೆಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಗ್ಯಾಂಗ್ ರೇಪ್ ವಿಡಿಯೋವನ್ನು ಹೈದರಾಬಾದ್ನ ಸ್ನೇಹಿತರಿಗೆ ಕಳಿಸಿದ ನಂತರ ಸಂತ್ರಸ್ತ ಯುವತಿ ಪ್ರಕರಣ ದಾಖಲಿಸುವುದಾಗಿ ಆರೋಪಿಗಳಿಗೆ ಬೆದರಿಕೆ ಹಾಕಿದ್ದರು. ಅಲ್ಲದೇ 7 ಲಕ್ಷ ರೂ. ನೀಡಿದರೆ ಮಾತ್ರ ಪ್ರಕರಣ ದಾಖಲಿಸುವುದಿಲ್ಲ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೇ 19ರಂದು ಚಿತ್ರೀಕರಿಸಿದ್ದ ಈ ವಿಡಿಯೋ ಬಗ್ಗೆ ಆರಂಭದಲ್ಲಿ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಯುವತಿ, ನಂತರ 10 ಲಕ್ಷ ಕೇಳಿ ಕೊನೆಯಲ್ಲಿ 7ಲಕ್ಷಕ್ಕೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆ ಮೂಲಕ ಯುವತಿಯಿಂದ ಹಣ ಕೀಳಲು ಹೋದ ಯುವಕರೇ ತಪ್ಪೆಸಗಿ ಹಣ ಕಳೆದುಕೊಂಡರು ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಘಟನೆಯ ನಂತರ ಬಾಂಗ್ಲಾ ಯುವಕರ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು ಮಾರತ್ತಹಳ್ಳಿಯ ಬಾಂಗ್ಲಾ ನಿವಾಸಿಗಳಿಗೆ ವಿಷಯ ತಿಳಿದಾಗ ಸುಮಾರು 40 ಜನರ ಗುಂಪು ಆರೋಪಿಗಳ ಮೇಲೆ ಹಲ್ಲೆ ನಡೆದಿರುವುದು ತಿಳಿದುಬಂದಿದೆ.
ಸದ್ಯ ಸಂತ್ರಸ್ತ ಯುವತಿಯನ್ನ ಬೆಂಗಳೂರು ಪೊಲೀಸರು ಪತ್ತೆಹಚ್ಚಿ ಕೇರಳದ ಕಲ್ಲಿಕೋಟೆಯಿಂದ ಸಂತ್ರಸ್ತೆಯನ್ನು ಕರೆತರುತ್ತಿದ್ದಾರೆ ಸ್ನೇಹಿತ ಲಕ್ಷ್ಮೀಲಾಲ್ ಎಂಬುವವರ ಮನೆಯಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೂಲಕ ಅತ್ಯಾಚಾರ ಪ್ರಕರಣಕ್ಕೆ ಮಹತ್ತರ ತಿರುವು ಸಿಗುವ ಸಾಧ್ಯತೆ ಇದ್ದು, ಬೆಂಗಳೂರಿನಿಂದ ಕೇರಳಕ್ಕೆ ತೆರಳಿರುವ ಪೊಲೀಸರ ತಂಡ ಸಂತ್ರಸ್ತ ಯುವತಿಯನ್ನು ಕರೆದುಕೊಂಡು ಬಂದು ತನಿಖೆ ಮುಂದುವರೆಸಲಿದ್ದಾರೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಆರು ಆರೋಪಿಗಳನ್ನು A1: ರಿದಾಯ್ ಬಾಬು, A2: ರಕಿಬುಲ್ ಇಸ್ಲಾಂ ಸಾಗರ್, A3: ಮಹಮದ್ ಬಾಬು ಶೇಶ್, A4: ಅಕಿಲ್, A5: ಕಾಜಲ್ (ಮಹಿಳೆ), A6: ನಸ್ರತ್ (ಮಹಿಳೆ) ಎಂದು ಗುರುತಿಸಲಾಗಿದೆ. ಈ 6 ಆರೋಪಿಗಳ ಪೈಕಿ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಸಂತ್ರಸ್ತೆ ಹಾಗೂ ಆರೋಪಿಗಳೆಲ್ಲರೂ ಪರಿಚಯಸ್ಥರು ಎನ್ನುವ ಅಂಶವೂ ಈ ವೇಳೆ ತಿಳಿದುಬಂದಿದ್ದು, ಇವರೆಲ್ಲರೂ ಒಟ್ಟಾಗಿ ಪಾರ್ಟಿ ಮಾಡುತ್ತಿದ್ದರು. ಆದರೆ, ಹಣಕಾಸಿನ ವಿಚಾರವಾಗಿ ಗಲಾಟೆಯಾಗಿದ್ದ ಕಾರಣ, ಕೇರಳಕ್ಕೆ ತೆರಳಿದ್ದ ಯುವತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗುತ್ತಿದೆ.
ಘಟನೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಕೇಸ್ನಲ್ಲಿ ಶಾಮೀಲಾದವರೆಲ್ಲ ಬಾಂಗ್ಲಾ ದೇಶದ ಮೂಲದವರು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಇಷ್ಟು ದಿನ ಗುಟ್ಟಾಗಿ ವೇಶ್ಯಾವಾಟಿಕೆ ಮಾಡಿಕೊಂಡು ಹಣ ಮಾಡುತ್ತಿದ್ದ ಸ್ನೇಹಿತರು ಕಳೆದ 10 ದಿನಗಳ ಹಿಂದೆ ಬಾಂಗ್ಲಾ ಮೂಲದ ಯುವತಿ ಮೇಲೆ ಎರಗಿದ್ದಾರೆ. ಇಬ್ಬರು ಯುವಕರು ಯುವತಿಯ ಕೈ, ಬಾಯಿ ಗಟ್ಟಿಯಾಗಿ ಮುಚ್ಚಿಕೊಂಡಿದ್ದರೆ, ಉಳಿದವರು ಅಟ್ಟಹಾಸ ಮೆರೆದಿದ್ದಾರೆ. ಎಲ್ಲವನ್ನೂ ಮೊಬೈಲ್ನಲ್ಲಿ ಸೆರೆ ಹಿಡಿದು, ವೈರಲ್ ಮಾಡಿದ್ದಾರೆ.
ಬಾಂಗ್ಲಾ ಸೇರಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ದೃಶ್ಯ ವೈರಲ್ ಮನೆಯೊಳಗೆ ನಡೆದಿದ್ದ ಈ ಪೈಶಾಚಿಕ ಕೃತ್ಯದ ದೃಶ್ಯವನ್ನ ಆರೋಪಿಗಳೇ ವೈರಲ್ ಮಾಡಿದರೋ ಅಥವಾ ಬೇರೆ ಯಾರದರೂ ವೈರಲ್ ಮಾಡಿದರೋ ಗೊತ್ತಾಗಿಲ್ಲ. ಆದರೆ, ಬಾಂಗ್ಲಾ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಘಟನೆಯ ದೃಶ್ಯ ಹರಿದಾಡಲಾರಂಭಿಸಿದೆ. ಈ ಬಗ್ಗೆ ತಿಳಿದ ಅಸ್ಸಾಂ ರಾಜ್ಯದ ಪೊಲೀಸರು ವಿಡಿಯೋ ಮೂಲ ಕೆದಕಲು ಮುಂದಾಗಿದ್ದು, ಆಗ ಬಾಂಗ್ಲಾ ದೇಶದ ಪ್ರಜೆಗಳು ಕೃತ್ಯದಲ್ಲಿ ಭಾಗಿಯಾರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಾಂಗ್ಲಾ ದೇಶದ ಪೊಲೀಸರಿಗೂ ಮಾಹಿತಿ ರವಾನಿಸಿದ್ದ ಅಸ್ಸಾಂ ಪೊಲೀಸರು ಕಾಮುಕರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದರು. ಬಳಿಕ ಸಂತ್ರಸ್ಥೆ ಕುಟುಂಬದ ಸದಸ್ಯರನ್ನ ಪತ್ತೆ ಮಾಡಿದ್ದ ಬಾಂಗ್ಲಾ ಪೊಲೀಸರು ಕೃತ್ಯವೆಸಗಿದ ಸ್ಥಳ ಆಧರಿಸಿ ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.