AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ವರ್ಷಗಳ ಹಿಂದಿನ ಕೇಸ್ ಬೇಧಿಸಿದ ಪೊಲೀಸ್ರು: ವೃದ್ದೆಯನ್ನ ಕೊಂದು ಗೋಡೆಯಲ್ಲಿ ಹೂತಿಟ್ಟದ್ದ ತಾಯಿ-ಮಗ

ವೃದ್ದೆಯನ್ನು ಕೊಲೆಗೈದು ಮನೆಯಲ್ಲೇ ಶವ ಹೂತಿಟ್ಟ ಪ್ರಕರಣವನ್ನು ಐದು ವರ್ಷಗಳ ಬಳಿಕ ಪೊಲೀಸ್ರು ಬೇಧಿಸಿದ್ದಾರೆ.

5 ವರ್ಷಗಳ ಹಿಂದಿನ ಕೇಸ್ ಬೇಧಿಸಿದ ಪೊಲೀಸ್ರು: ವೃದ್ದೆಯನ್ನ ಕೊಂದು ಗೋಡೆಯಲ್ಲಿ ಹೂತಿಟ್ಟದ್ದ ತಾಯಿ-ಮಗ
ಕೊಲೆ
TV9 Web
| Edited By: |

Updated on: Oct 07, 2022 | 7:01 PM

Share

ಬೆಂಗಳೂರು: ಅದು ಐದು ವರ್ಷಗಳ ಹಿಂದೆ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ ವೃದ್ದೆಯ ಹತ್ಯೆ ಪ್ರಕರಣ. ಕೊನೆಗೂ ಪ್ರಕರಣ ಬೇಧಿಸುವಲ್ಲಿ ಕೆಂಗೇರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಶಾಂತಕುಮಾರಿ (69) ಹತ್ಯೆ ಪ್ರಕರಣದ ಆರೋಪಿಗಳಾದ ತಾಯಿ-ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಬೇಧಿಸುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರು ವಿವಿಧ ತಂಡ ರಚಿಸಿ ತನಿಖೆ ನಡೆಸಿದರೂ ಪ್ರಕರಣದ ಮೂರನೇ ಆರೋಪಿ ಹೊರತುಪಡಿಸಿದರೆ ಮುಖ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು. ತಾರ್ಕಿಕ ಅಂತ್ಯ ಕೊಡದೆ ದೂಳು ಹಿಡಿದಿದ್ದ ಪ್ರಕರಣವನ್ನ ಮತ್ತೆ ಸವಾಲಾಗಿ ಸ್ವೀಕರಿಸಿದ ಕೆಂಗೇರಿ‌ ಠಾಣೆಯ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ ತಾಯಿಯನ್ನೇ ಕೊಲೆಗೈದ ಆರೋಪದಡಿ ಶಶಿಕಲಾ (46) ಮಗ ಸಂಜಯ್ (26) ಎಂಬುವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ಕೇಸ್: ಚಾರ್ಜ್​ಶೀಟ್​ನಲ್ಲಿ ಕೊಲೆಗೆ ಪ್ರಮುಖ ಕಾರಣ ಉಲ್ಲೇಖ

ಐದು ವರ್ಷಗಳ ಹಿಂದೆ ನಡೆದಿದ್ದ ವೃದ್ದೆ ಹತ್ಯೆ

ಕೆಂಗೇರಿ ಸ್ಯಾಟಲೈಟ್ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ‌ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿಸ್ತು ಹಾಗೂ ಮಡಿವಂತಿಕೆಯನ್ನು ಶಾಂತಕುಮಾರಿ ಬೆಳೆಸಿಕೊಂಡಿದ್ದರು. ಶಶಿಕಲಾ ಗೃಹಿಣಿಯಾಗಿದ್ದು‌, ಹಲವು ವರ್ಷಗಳ ಹಿಂದೆ ಗಂಡ ಮೃತರಾಗಿದ್ದರು. ಪುತ್ರ ಸಂಜಯ್ ಖಾಸಗಿ ಕಾಲೇಜಿನಲ್ಲಿ ಏರೊನಾಟಿಕಲ್ ಇಂಜಿನಿಯರ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಓದಿನಲ್ಲಿ ಪ್ರತಿಭಾವಂತನಾಗಿದ್ದ ಸಂಜಯ್ ಎಸ್ಸೆಸ್ಸೆಲಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದಿದ್ದ. ಓದುವ ವಿಷಯದಲ್ಲಿ ಮುಂದಿದ್ದ ಸಂಜಯ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ.

2016 ಆಗಸ್ಟ್ ನಲ್ಲಿ ಕಾಲೇಜು ಮುಗಿಸಿ ಸಂಜಯ್ ಮನೆಗೆ ಬರುವಾಗ ಅಜ್ಜಿಗೆ ಗೋಬಿಮಂಜೂರಿ ತಂದುಕೊಟ್ಟಿದ್ದ. ಹೊರಗಡೆಯ ಆಹಾರ ಬೇಡವೆಂದು ನಿರಾಕರಿಸಿದ್ದ ಶಾಂತಕುಮಾರಿ ಮೊಮ್ಮಗನಿಗೆ ಬೈದು ಆತನ ಮೇಲೆ ಗೋಬಿಮಂಚೂರಿ ಬಿಸಾಕಿದ್ದರು. ಇದರಿಂದ ಅಸಮಾಧಾನಗೊಂಡ ಸಂಜಯ್ ಅಡುಗೆಮನೆಯಲ್ಲಿದ್ದ ಲಟ್ಟಣಿಗೆಯಿಂದ ಶಾಂತಕುಮಾರಿ ತಲೆಗೆ ಹೊಡೆದಿದ್ದ. ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದಳು.

ಶವವನ್ನ ಗೋಡೆಯಲ್ಲಿ ಹೂತಿಟ್ಟದ್ದ ತಾಯಿ-ಮಗ

ತನ್ನ ತಾಯಿಯನ್ನ ಮಗ ಸಂಜಯ್ ಕೊಲೆಗೈದಿರುವುದನ್ನ ಕಂಡ ಶಶಿಕಲಾ ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದಳು. “ಪೊಲೀಸರಿಗೆ ತಿಳಿಸಿದರೆ ನಾನು ಜೈಲಿಗೆ ಹೋಗಬೇಕು, ನಿನ್ನ ಮಗನ ಭವಿಷ್ಯವನ್ನ ನೀನೇ ಹಾಳು ಮಾಡುತ್ತೀಯಾ?” ಎಂದು ಸಂಜಯ್ ತಾಯಿಯ ಮುಂದೆ ಗೋಗರಿದಿದ್ದ. ‌ಇದಕ್ಕೆ ಶಶಿಕಲಾ ಒಪ್ಪಿಕೊಂಡಿದ್ದಳು. ಮನೆಯಿಂದ ಶವ ಹೊರತೆಗೆಯುವುದು ಅಸಾಧ್ಯವೆಂದು ನಿರ್ಧರಿಸಿ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್ ಗೆ ವಿಷಯ ತಿಳಿಸಿ ಮನೆಗೆ ಸಂಜಯ್ ಕರೆಯಿಸಿಕೊಂಡಿದ್ದ. ಮೂವರು ಒಟ್ಟುಗೂಡಿ ಮನೆಯ ಕಬೋರ್ಡ್ ನಲ್ಲಿ ಶವ ಬಚ್ಚಿಟ್ಟಿದ್ದರು. ವಾಸನೆ ಬರದಿರಲು ಕೆಮಿಕಲ್ಸ್ ಹಾಕಿದ್ದರು. ಬಳಿಕ ಮನೆಯೊಳಗಿನ ಕಬೋರ್ಡ್ ಗೋಡೆ ಕೊರೆದು ಶವವಿಟ್ಟು ಸಿಮೆಂಟ್ ನಿಂದ ಪ್ಲಾಸ್ಟರಿಂಗ್ ಮಾಡಿ ಬಣ್ಣ ಬಳಿದಿದ್ದರು‌‌. ಕೆಲ ತಿಂಗಳ ಬಳಿಕ‌ ಊರಿಗೆ ಹೋಗಿಬರುವುದಾಗಿ ಹೇಳಿ ಮನೆ ಮಾಲೀಕರಿಗೆ ತಿಳಿಸಿ ಪರಾರಿಯಾಗಿದ್ದರು.

ಗೋಡೆ ಕೊರೆದಾಗ ವೃದ್ದೆಯ ಕಳೇಬರ ಪತ್ತೆ..!

ಆರು ತಿಂಗಳಾದರೂ ಊರಿಗೆ ಹೋಗಿದ್ದ ಅಮ್ಮ-ಮಗ ಮನೆಗೆ ಬಾರದೆ ಅನುಮಾನಗೊಂಡ ಮನೆ ಮಾಲೀಕರು ಮನೆ ರಿಪೇರಿ ಮಾಡಿಸಲು 2017 ಮೇ 7 ರಂದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಹೂತುಹಾಕಿದ್ದ ಗೋಡೆ ಬಳಿ ರಕ್ತಸಿಕ್ತವಾಗಿದ್ದ ಬಿದ್ದಿದ್ದ ಸೀರೆಯನ್ನು ಗಮನಿಸಿದ್ದಾರೆ. ಮನೆಯಲ್ಲಿ ವಾಸವಾಗಿದ್ದ ವೃದ್ದೆಯೂ ಕಾಣದಿದ್ದಾಗ ಸಂಶಯಗೊಂಡು ಕೂಡಲೇ ಆಗಿನ ಕೆಂಗೇರಿ ಠಾಣಾ ಇನ್ಸ್ಪೆಕ್ಟರ್ ಗಿರಿರಾಜ್ ಅವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ದೌಡಾಯಿಸಿ ಮನೆಯಲ್ಲಿ ಶೋಧಿಸಿದಾಗ ಸಂಜಯ್ ಬಿಟ್ಟುಹೋಗಿದ್ದ ಮೊಬೈಲ್ ಪತ್ತೆಯಾಗಿತ್ತು. ಕರೆ ವಿವರ ಪರಿಶೀಲಿಸಿದಾಗ ನಂದೀಶ್ ಮೊಬೈಲ್ ನಂಬರ್ ತಳಕುಹಾಕಿಕೊಂಡಿತ್ತು‌. ಈತನ ಜಾಡು ಹಿಡಿದ ಹೊರಟ ಪೊಲೀಸ್ ತಂಡ ಮೇ 15 2017ರಂದು ನಂದೀಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವೃದ್ದೆಯನ್ನ ಕೊಲೆ ಮಾಡಿ ಶವವನ್ನ ಗೋಡೆಯಲ್ಲಿ ಅವಿತಿಟ್ಟಿರುವ ಸಂಗತಿ ಬಯಲಾಗಿತ್ತು‌. ಆರೋಪಿ ಹೇಳಿಕೆ ಆಧರಿಸಿ ಗೋಡೆ ಕೊರೆದು ಪರಿಶೀಲಿಸಿದಾಗ ವೃದ್ದೆಯ ಕಳೇಬರ ಪತ್ತೆಯಾಗಿತ್ತು.

ವೃದ್ಧೆಯ ಹತ್ಯೆ ನಂತರ ಬಂಧನ ಭೀತಿಯಿಂದ ತಾಯಿ-ಮಗ ಮಾಲೀಕರ ಬಳಿ‌ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಮನೆ ತೊರೆದಿದ್ದ ಆರೋಪಿಗಳು‌ ಹುಟ್ಟೂರಾದ ಶಿವಮೊಗ್ಗದ ಸಾಗರಕ್ಕೆ ತೆರಳಿದ್ದರು. ನಂತರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದರು. ಸ್ಥಳೀಯ ಹೊಟೇಲ್ ವೊಂದರಲ್ಲಿ ಸಂಜಯ್ ಸಪ್ಲೈಯರ್ ಕೆಲಸ‌ ಹಾಗೂ ತಾಯಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು..

ಇತ್ತ ಕೊಲೆ‌ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ.. ಇತ್ತೀಚೆಗೆ ಇತ್ಯರ್ಥವಾಗದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಕೆಂಗೇರಿ ಪೊಲೀಸರಿಗೆ ತಾಕೀತು ಮಾಡಿದ್ದರು. ಸವಾಲಾಗಿ ಸ್ವೀಕರಿಸಿದ ಕೆಂಗೇರಿ ಪೊಲೀಸರು ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಸಿಕ್ಕ ಸುಳಿವು ಆಧರಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದ್ದ ತಾಯಿ-ಮಗನನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದೆ.

ವರದಿ: ವಿನಯ್ ಕುಮಾರ್