ಬೆಂಗಳೂರು, ಏಪ್ರಿಲ್ 24: ಬಾಡಿಗೆ ಮನೆ (Rented house) ನೋಡಲು ಹೋಗಿದ್ದ ವಿದ್ಯಾರ್ಥಿಗಳನ್ನು (Students) ಕೂಡಿ ಹಾಕಿ ಹಲ್ಲೆ ಮಾಡಿದ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿಗಳಾದ ಕೃಷ್ಣ ಬಾಜಪೇಯಿ ಮತ್ತು ಯುವರಾಜ್ ಮೇಲೆ ಹಲ್ಲೆ ಮಾಡಲಾಗಿದೆ.
ಇಬ್ಬರೂ ರಾಜಾನುಕುಂಟೆಯ ಖಾಸಗಿ ಕಾಲೇಜಿನ ವ್ಯಾಸಾಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಬಾಡಿಗೆ ಮನೆ ನೋಡಲು ಹೋಗಿದ್ದಾಗ, ಗುಂಪೊಂದು, ಇಬ್ಬರನ್ನೂ ಅಪಹರಿಸಿದೆ. ಬಳಿಕ ಒಂದು ಕೋಣೆಯಲ್ಲಿ ಕೂಡಿಹಾಕಿ ಇಬ್ಬರ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಸಿಗರೇಟ್ನಿಂದ ಸುಟ್ಟಿದೆ. ಮತ್ತೊಂದು ವಿದ್ಯಾರ್ಥಿಗಳ ಗುಂಪು ಕೃಷ್ಣರ ಮೇಲೆ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿದೆ. ಅಲ್ಲದೆ 50 ಸಾವಿರಕ್ಕೂ ಹೆಚ್ಚು ಹಣ ವರ್ಗಾವಣೆ ಮಾಡಿಸಿಕೊಂಡಿದೆ.
15 ದಿನಗಳ ಹಿಂದೆ ಕಾಲೇಜಿನಲ್ಲಿ ಎರಡು ಗ್ಯಾಂಗ್ ನಡುವೆ ಗಲಾಟೆ ಆಗಿತ್ತು. ಇದೇ ವಿಚಾರಕ್ಕೆ ಒಂದು ಗ್ಯಾಂಗ್ ಈ ಇಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 7 ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದವರು, ಕೃತ್ಯ ಎಸಗಿದವರು ಹೊರರಾಜ್ಯದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಆರೋಪಿಗಳು 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಾಹಿತಿ ಬಹಿರಂಗವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ