ಬೆಂಗಳೂರು: ರಾಜ್ಯದಲ್ಲಿ ಶಾಸಕರ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಹನಿಟ್ರ್ಯಾಪ್ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಈವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಎಷ್ಟು ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕರಾವಳಿ ಮೂಲದ ಶಾಸಕರ ಖಾಸಗಿ ವಿಡಿಯೋಗಳನ್ನು ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ರಾಘವೇಂದ್ರ ಅಂಡ್ ಟೀಂ ಸಿಸಿಬಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸಿಸಿಬಿ ಪೊಲೀಸರು ಬಂಧಿತ ಆರೋಪಿ ರಾಘವೇಂದ್ರ ಮನೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಸಕರ ವಿಡಿಯೋಗಳಿದ್ದ ಮೆಮೊರಿ ಕಾರ್ಡ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿದೆ.
ಪೊಲೀಸರ ದಾಳಿ ವೇಳೆ ರಾಘವೇಂದ್ರ ತಾಯಿ ಪೆನ್ ಡ್ರೈವ್ ಬಚ್ಚಿಟ್ಟುಕೊಂಡರು ಎನ್ನಲಾಗಿದೆ. ಆ ಪೆನ್ಡ್ರೈವ್ನಲ್ಲಿ ಪುಷ್ಪಾಳ ಜೊತೆ ಕರಾವಳಿ ಶಾಸಕನ ವಿಡಿಯೋ ಇತ್ತು ಎನ್ನಲಾಗಿದೆ. ಒಟ್ಟು ಐವರು ಜನಪ್ರತಿನಿಧಿಗಳನ್ನು ಹನಿಟ್ರ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದ್ದು, ಐದೂ ಪ್ರಕರಣಗಳಲ್ಲಿ ಸಾಕ್ಷ್ಯ ಸಹಿತ ದಾಖಲೆಗಳು ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.