ಚೀನಿ ಲೋನ್ ಆ್ಯಪ್​ಗಳ ಮೇಲೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: 100 ಕೋಟಿ ಮುಟ್ಟುಗೋಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 07, 2022 | 11:08 AM

ಒಂದು ವರ್ಷದ ಅವಧಿಯಲ್ಲಿ ಇಂಥ ಕಂಪನಿಗಳಿಂದ ಸುಮಾರು 100 ಕೋಟಿ ರೂಪಾಯಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಚೀನಿ ಲೋನ್ ಆ್ಯಪ್​ಗಳ ಮೇಲೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: 100 ಕೋಟಿ ಮುಟ್ಟುಗೋಲು
ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆ
Follow us on

ಬೆಂಗಳೂರು: ಚೀನಾ ಮೂಲದ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 100 ಕೋಟಿ ರೂಪಾಯಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಪೈಕಿ ಸಿಸಿಬಿಯಿಂದ ₹ 60 ಕೋಟಿ ಹಾಗೂ ನಗರದ ಸೈಬರ್ ಪೊಲೀಸರು ₹ 40 ಕೋಟಿ ಮುಟ್ಟುಗೋಲು ಹಾಕಿದ್ದಾರೆ. ಸುಲಭವಾಗಿ ಸಾಲ ಸಿಗಲಿದೆ ಎಂದು ಮನವೊಲಿಸಿ ಜನರಿಗೆ ಸಾಲ ಕೊಡುತ್ತಿದ್ದ ಈ ಆ್ಯಪ್​ಗಳು ನಂತರ ಅವರ ಖಾಸಗಿ ಫೋಟೊಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದವು. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ನಂತರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಮುಟ್ಟುಗೋಲು ಹಾಕಿಕೊಂಡಿರುವ ಹಣದ ಬಗ್ಗೆ ನಗರ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮಾಹಿತಿ ನೀಡಿದ್ದಾರೆ. ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಬಗ್ಗೆ ಇಡಿ ತನಿಖೆ ಆರಂಭಿಸಿದೆ.

ಮತ್ತೊಂದು ಚೀನಿ ಕಂಪನಿಯ ಮೇಲೆ ಇಡಿ ದಾಳಿ

ಉದ್ಯೋಗದ ಭರವಸೆ ಕೊಟ್ಟು ಯುವಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಚೀನಾ ಮೂಲದ ‘ಕೀಪ್​ಶೇರ್’ ಆ್ಯಪ್​ಗೆ ಸೇರಿದ 12 ಕೇಂದ್ರಗಳ ಮೇಲೆ ಇಡಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ₹ 5.88 ಕೋಟಿ ನಗದು ಹಾಗೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಆ್ಯಪ್​ ವಿರುದ್ಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಾರ್ಟ್​ಟೈಮ್ ಕೆಲಸ ಕೊಡುವುದಾಗಿ ಯುವಕರನ್ನು ಆಕರ್ಷಿಸುತ್ತಿದ್ದ ‘ಕೀಪ್​ಶೇರ್’ ಆ್ಯಪ್, ಸಾಕಷ್ಟು ಜನರನ್ನು ವಂಚಿಸಿತ್ತು. ಚೀನಾ ಮೂಲದ ವ್ಯಕ್ತಿಗಳು ಭಾರತೀಯರನ್ನೇ ನಿರ್ದೇಶಕರನ್ನಾಗಿಸಿ ಭಾರತದ ವಿವಿಧೆಡೆ ಒಂದಿಷ್ಟು ಕಚೇರಿಗಳನ್ನು ತೆರೆದಿದ್ದರು. ಈ ಕಚೇರಿಗಳ ಟೆಲಿಕಾಲರ್​ಗಳು ಯುವಕರಿಗೆ ಗಾಳ ಹಾಕಿ ಅವರ ಮಾಹಿತಿ ಸಂಗ್ರಹಿಸಿ, ಉದ್ಯೋಗಕ್ಕಾಗಿ ಹಣದ ಬೇಡಿಕೆ ಇಡುತ್ತಿದ್ದರು. ಸಾಕಷ್ಟು ಮೊತ್ತ ಸಂಗ್ರಹವಾಗುತ್ತಿದ್ದಂತೆ ಕಂಪನಿಯೇ ನಾಪತ್ತೆಯಾಗುತ್ತಿತ್ತು. ಇದರ ಜೊತೆಗೆ ಹೂಡಿಕೆ ಆ್ಯಪ್​ಗಳ ಹೆಸರಿನಲ್ಲಿಯೂ ಸಾರ್ವಜನಿಕರಿಂದ ದಾಖಲೆಗಳು ಹಾಗೂ ಹಣ ಸಂಗ್ರಹಿಸಿರುವ ಬಗ್ಗೆಯೂ ತನಿಖೆ ವೇಳೆ ತಿಳಿದುಬಂದಿತ್ತು.