ಬೆಂಗಳೂರು, ಜನವರಿ 19: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸೈಬರ್ ಕ್ರೈಂ (Cyber Crime) ಪ್ರಕರಣಗಳು ದಿನದಿನಕ್ಕೆ ಹೆಚ್ಚುತ್ತಿವೆ. ಸೈಬರ್ ವಂಚಕರು ಹೊಸ ಹೊಸ ಮಾರ್ಗಗಳ ಮುಖಾಂತರ ವಂಚನೆ ಮಾಡುತ್ತಿದ್ದಾರೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್ ಕಳಿಸಿ, ಅದರ ಮೂಲಕ ಸೈಬರ್ ವಂಚಕರು 2.80 ಕೋಟಿ ರೂ. ದೋಚಿದ್ದಾರೆ. ಇದು ಸೈಬರ್ ಕ್ರೈಂ ಖದೀಮರ ಹೊಸ ಪ್ಲಾನ್ ಆಗಿದೆ.
ಬೆಂಗಳೂರಿನ ಟೆಕ್ಕಿಯೊಬ್ಬರ ವಿಳಾಸಕ್ಕೆ ಸೈಬರ್ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಎಂದು ಮೊಬೈಲ್ ಕಳುಹಿಸಿದ್ದರು. ಗಿಫ್ಟ್ ಸ್ವೀಕರಿಸಿದ ಟೆಕ್ಕಿ ಸಿಮ್ನ್ನು ಮೊಬೈಲ್ನಲ್ಲಿ ಹಾಕಿದ್ದಾರೆ. ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಅನ್ನು ಸೈಬರ್ ಖದೀಮರು ತಮ್ಮ ಖಾತೆಗೆ ಜಮಾವಣೆ ಮಡಿಕೊಂಡಿದ್ದಾರೆ.
ಇದನ್ನೂ ಓದಿ: ಸೈಬರ್ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು
ಸೈಬರ್ ವಂಚಕರು ಮೊಬೈಲ್ನಲ್ಲಿ ಮೊದಲೇ ಕೆಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ್ದರು. ಟೆಕ್ಕಿ ಮೊಬೈಲ್ಗೆ ಸಿಮ್ ಹಾಕುತ್ತಿದ್ದಂತೆ, ಹಲವು ಸಂದೇಶಗಳು ಬಂದಿವೆ. ಈ ಮೊಬೈಲ್ಗೆ ಬರುವ ಸಂದೇಶಗಳು ಮತ್ತು ಒಟಿಪಿಗಳು ತಮಗೂ ಬರುವಂತೆ ವಂಚಕರು ಸೆಟ್ ಮಾಡಿದ್ದರು. ಸಂದೇಶಗಳು ಮತ್ತು ಒಟಿಪಿ ಮೂಲಕ ಟೆಕ್ಕಿಯ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದಾರೆ.
ನಂತರ ಟೆಕ್ಕಿಯ ಬ್ಯಾಂಕ್ ಅಕೌಂಟ್ ಸೇರಿ ಎಲ್ಲವನ್ನು ಪರಿಶೀಲಿಸಿದ್ದಾರೆ. ಕೊನೆಗೆ ಬ್ಯಾಂಕ್ ಎಫ್ಡಿಯಲ್ಲಿ ಇಟ್ಟಿದ್ದ 2.80 ರೂ. ಅನ್ನು ಖದೀಮರು ಎಗರಿಸಿದ್ದಾರೆ. ವೈಟ್ಫೀಲ್ಡ್ ಸೆನ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಟೆಕ್ಕಿಗೆ 11 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕರಣ್, ತರುಣ್ ನಟಾನಿ, ಧವಲ್ ಷಾ ಬಂಧಿತರು. ವಂಚಕರು ಟೆಕ್ಕಿ ವಿಜಯ್ ಕುಮಾರ್ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು.
ವಂಚಕರ ಬೆದರಿಕೆಗೆ ಹೆದರಿದ ಟೆಕ್ಕಿ, “ನನ್ನ ಖಾತೆಯಲ್ಲಿ ಕೇವಲ 2 ಲಕ್ಷ ರೂ. ಇದೆ ಕೊಡುತ್ತೇನೆ ಎಂದು ಹೇಳಿದ್ದರು. ಬಳಿಕ ಟೆಕ್ಕಿ, ಸೈಬರ್ ವಂಚಕರು ಹೇಳಿದ್ದ ಅಕೌಂಟ್ಗೆ 2 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಮತ್ತೆ ಮತ್ತೆ ಹಣಕ್ಕಾಗಿ ಟೆಕ್ಕಿ ವಿಜಯ್ ಕುಮಾರ್ಗೆ ವಂಚಕರು ಧಮ್ಕಿ ಹಾಕುತ್ತಿದ್ದರು.
ಬಳಿಕ, ಟೆಕ್ಕಿ ವಿಜಯ್ ಕುಮಾರ್ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಅಮೆರಿಕದಲ್ಲಿನ ಷೇರಿನ ಬಗ್ಗೆ ವಂಚಕರಿಗೆ ಮಾಹಿತಿ ನೀಡಿದ್ದರು. ಬಳಿಕ ವಂಚಕರು ಪೊಲೀಸರು, ಕಸ್ಟಮ್ಸ್ ಅಧಿಕಾರಿಗಳು, ಇಡಿ ಅಧಿಕಾರಿಗಳೆಂದು ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಟೆಕ್ಕಿಗೆ ನಿರಂತರ ಕರೆಮಾಡಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಹೆದರಿದ್ದ ಟೆಕ್ಕಿ ವಿಜಯ್ ಕುಮಾರ್ ಅಕೌಂಟ್ ನಂಬರ್, ಆಧಾರ್, ಪಾನ್ಕಾರ್ಡ್ ನಂಬರ್ ನೀಡಿದ್ದನು. ಬಳಿಕ, ವಂಚಕರು ತಾವು ಕಳಿಸುವ ಸರ್ಕಾರಿ ಅಕೌಂಟ್ಗೆ ಹಣ ಹಾಕುವಂತೆ ಸೂಚಿಸಿದದಾರೆ. ನಾವು ಹೇಳಿದ ಅಕೌಂಟ್ಗೆ ಹಣ ಹಾಕಿದರೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. ಒಟ್ಟು 9 ಖಾತೆಗಳ ನಂಬರ್ ನೀಡಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ತಿಂಗಳ ಕಾಲ ಕಾಡಿದ್ದರು. ಬಳಿಕ ಟೆಕ್ಕಿ ವಿಜಯ್ ಕುಮಾರ್ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಟೆಕ್ಕಿ ಅಕೌಂಟ್ ಜಾಡು ಹಿಡಿದು ತನಿಖೆ ನಡೆಸಿದ ತನಿಖೆಗೆ ಇಳಿದಾಗ, ಅಲಹಾಬಾದ್ನ ಒಂದು ಖಾತೆಗೆ 7.5 ಕೋಟಿ ಹೋಗಿರುವುದು ತಿಳಿದಿದೆ.
ಗುಜರಾತ್ನ ಸೂರತ್ ಚಿನ್ನದ ವ್ಯಾಪಾರಿ ಬಗ್ಗೆ ಮಾಹಿತಿ ಗೊತ್ತಾಗಿದೆ. ಸೂರತ್ಗೆ ತೆರಳಿದ ಪೊಲೀಸರು ಚಿನ್ನ ವ್ಯಾಪಾರಿ ಹತ್ತಿರ ಮಾಹಿತಿ ಸಂಗ್ರಹಿಸಿದ್ದಾರೆ. ವಂಚಿಸಿದ ಕೋಟಿ ಕೋಟಿ ಹಣದಲ್ಲಿ ಸೈಬರ್ ವಂಚಕರು ಚಿನ್ನಾಭರಣ ಖರೀದಿಸಿ ಪರಾರಿಯಾಗಿದ್ದರು. ಕೊನೆಗೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:11 am, Sun, 19 January 25