ಮಟನ್ ಗ್ರೇವಿಗಾಗಿ ಗಂಡ-ಹೆಂಡತಿ ಮಧ್ಯೆ ಜಗಳ: ನಡುವೆ ನುಸುಳಿದ ವ್ಯಕ್ತಿ ಹತ್ಯೆಗೀಡಾದ!

| Updated By: ಸಾಧು ಶ್ರೀನಾಥ್​

Updated on: Oct 22, 2022 | 1:15 PM

ಇವರಿಬ್ಬರ ಜಗಳ ಪಕ್ಕದ ಮನೆಯಲ್ಲಿದ್ದ ಬಿಲ್ಲು ಎಂಬಾತನ ಕಣ್ಣಿಗೆ ಬಿದ್ದಿದೆ. ಗಂಡ ಹೆಂಡತಿಯನ್ನು ತಿದ್ದಲು, ಅವರ ಮಧ್ಯೆ ತಿಳಿವಾತಾವರಣ ಮೂಡಿಸಲು ಮುಂದಾಗಿದ್ದಾನೆ. ಇದರಿಂದ ತೀವ್ರ ಅವಮಾನಕ್ಕೊಳಗಾದ ಗಂಡ ಪಪ್ಪು, ಬಿಲ್ಲುನನ್ನು ಕೋಲಿನಿಂದ ಬಡಿದು ಕೊಂದಿದ್ದಾನೆ.

ಮಟನ್ ಗ್ರೇವಿಗಾಗಿ ಗಂಡ-ಹೆಂಡತಿ ಮಧ್ಯೆ ಜಗಳ: ನಡುವೆ ನುಸುಳಿದ ವ್ಯಕ್ತಿ ಹತ್ಯೆಗೀಡಾದ!
ಮಟನ್ ಗ್ರೇವಿಗಾಗಿ ಗಂಡ-ಹೆಂಡತಿ ಮಧ್ಯೆ ಜಗಳ: ನಡುವೆ ನುಸುಳಿದ ವ್ಯಕ್ತಿ ಹತ್ಯೆಗೀಡಾದ!
Follow us on

ಪತಿ-ಪತ್ನಿ ಜಗಳ ಆಡುವಾಗ ಮೂರನೇ ವ್ಯಕ್ತಿ ಅಪ್ಪಿತಪ್ಪಿಯೂ ಆ ಕಡೆ ನುಸುಳಬಾರದು, ಆ ಜಗಳಕ್ಕೆ ಅಡ್ಡಿಪಡಿಸಬಾರದು ಎಂಬ ತಿಳಿವಳಿಕೆಯನ್ನು ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಅದನ್ನು ನಿರ್ಲಕ್ಷಿಸಿಯೂ ಮಧ್ಯೆ ಹೋದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾದೀತು. ಇಂತಹ ಘಟನೆ ಮಧ್ಯಪ್ರದೇಶದ ರಾಜಧಾನಿಯಲ್ಲಿ ನಡೆದಿದೆ.

ಕೆಲವರಿಗೆ ಮಾಂಸ ಎಂದರೆ ಯಮ ಪ್ರೀತಿ. ಮಾಂಸವನ್ನು ತುಂಬಾ ಇಷ್ಟಪಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ಮನೆಗೆ ಕುರಿ ಮಾಂಸ ತಂದಿದ್ದ. ಆದರೆ ಹೆಂಡತಿ ಮಾಂಸದ ಅಡುಗೆ ಮಾಡಲು ನಿರಾಕರಿಸಿದಳು. ಮಂಗಳವಾರದ ದಿನ ಮನೆಯಲ್ಲಿ ಮಟನ್ ಅಡುಗೆ ಮಾಡಬಾರದು, ಆಗೋದಿಲ್ಲವೆಂದು ಪತಿಗೆ ದಿಟವಾಗಿ ಹೇಳಿದ್ದಾಳೆ. ಇದು ಅವರಿಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಪತಿ-ಪತ್ನಿಯ ನಡುವಿನ ಜಗಳ ಬಿಡಿಸಲು ಮೂರನೆಯ ವ್ಯಕ್ತಿ ಬಂದಿದ್ದಾನೆ. ಆದರೆ ಆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪತಿ-ಪತ್ನಿಯರ ನಡುವೆ ಜಗಳವಾದಾಗ ಮೂರನೇ ವ್ಯಕ್ತಿ ಮೂಗುತೂರಿಸಬಾರದು ಎಂಬ ಹಿರಿಯರ ಸಲಹೆಯನ್ನು ನಿರ್ಲಕ್ಷಿಸಿ ಪ್ರಾಣ ಕಳೆದುಕೊಂಡಿದ್ದಾನೆ.

ಈ ಘಟನೆ ಮಧ್ಯ ಪ್ರದೇಶದ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಪಪ್ಪು ಅಹಿರ್ವಾರ್ ಎಂಬ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಭೋಪಾಲ್‌ನಲ್ಲಿ ವಾಸವಿದ್ದಾನೆ. ಆತ ತನ್ನ ನೆಚ್ಚಿನ ಕುರಿ ಮರಿಯೊಂದನ್ನು ಮನೆಗೆ ತಂದಿದ್ದಾನೆ. ಅವನು ತನ್ನ ಹೆಂಡತಿಗೆ ಅಡುಗೆ ಮಾಡಲು ಆದೇಶಿಸಿದ್ದಾನೆ. ಆದರೆ ಮಂಗಳವಾರ ಹನುಮಂತನಿಗೆ ಪೂಜೆ ನಡೆಯಲಿರುವ ಕಾರಣ ಮಟನ್ ಅಡುಗೆ ಮಾಡದಿರಲು ಹೆಂಡತಿ ನಿರ್ಧರಿಸಿದ್ದಾಳೆ. ಅಸಲಿಗೆ ಮನೆಗೆ ಕುರಿ ಮರಿ ಏಕೆ ತಂದಿರಿ ಎಂದು ಪ್ರಶ್ನಿಸಿದ್ದಾಳೆ. ಆದರೆ ಪತಿರಾಯನೇ ಮಾಂಸದ ಅಡುಗೆ ಮಾಡಲು ಸಿದ್ಧನಾಗಿದ್ದಾನೆ. ಈ ಸಂದರ್ಭದಲ್ಲಿ ಪತಿ-ಪತ್ನಿಯ ನಡುವೆ ತೀವ್ರ ವಾಗ್ವಾದ ನಡೆದಿದೆ.

ಇವರಿಬ್ಬರ ಜಗಳ ಪಕ್ಕದ ಮನೆಯಲ್ಲಿದ್ದ ಬಿಲ್ಲು ಎಂಬಾತನ ಕಣ್ಣಿಗೆ ಬಿದ್ದಿದೆ. ಗಂಡ ಹೆಂಡತಿಯನ್ನು ತಿದ್ದಲು, ಅವರ ಮಧ್ಯೆ ತಿಳಿವಾತಾವರಣ ಮೂಡಿಸಲು ಮುಂದಾಗಿದ್ದಾನೆ. ಇದರಿಂದ ತೀವ್ರ ಅವಮಾನಕ್ಕೊಳಗಾದ ಪಪ್ಪು, ಬಿಲ್ಲುನನ್ನು ಕೋಲಿನಿಂದ ಬಡಿದು ಕೊಂದಿದ್ದಾನೆ. ಬಿಲ್ಲು ಗಂಭೀರವಾಗಿ ಗಾಯಗೊಂಡಿದ್ದಾರೆ. ನೆರೆಹೊರೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ತಲೆಗೆ ತೀವ್ರ ಪೆಟ್ಟುಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಬಿಲ್ಲು ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಪತಿ ಪಪ್ಪು ಅಹಿರ್ವಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಪೊಲೀಸರು ಪಪ್ಪು ಅಹಿರ್ವಾರ್ ನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕಾಗಿ ಭೋಪಾಲ್ ಸೆಂಟ್ರಲ್ ಜೈಲಿಗೆ ಕಳುಹಿಸಿದೆ.