ಮನೆಯ ಮಾನ ಮರ್ಯಾದೆಗೆ ಅಂಜಿ ತಂಗಿ ಮತ್ತು ಹೆತ್ತಮ್ಮನ್ನು ಕೆರೆಗೆ ತಳ್ಳಿ ಸಾಯಿಸಿಬಿಟ್ಟ ಅಣ್ಣ!

| Updated By: ಸಾಧು ಶ್ರೀನಾಥ್​

Updated on: Jan 26, 2024 | 10:42 AM

ಜನವರಿ 23 ರಂದು ಅಮ್ಮ ಹಾಗೂ ಸಹೋದರಿಯನ್ನು ಪಕ್ಕದ ಊರಿನ ಅಜ್ಜಿ ಮನೆಗೆ ತನ್ನ ಬೈಕ್‌ನಲ್ಲಿ ಕೆರೆದುಕೊಂಡು ಹೊರಟಿದ್ದಾನೆ. ಮಾರ್ಗ ಮಧ್ಯೆ ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿದ್ದಾನೆ. ಸಹೋದರಿಗೆ ಬುದ್ದಿ ಹೇಳಲು ಆರಂಭಿಸಿದ್ದಾನೆ. ತಾಯಿ ಮೊದಲು ನಡಿ ಮನೆಗೆ ಹೋಗೋಣ ಅಂತಾ ಹೇಳಿದ್ದಾರೆ. ಆದ್ರೆ ನಿತೀಶ್ ಅಮ್ಮನ ಮಾತು ಕೇಳಿಲ್ಲ. ಧನುಶ್ರೀ ಜೊತೆ ಜಗಳ ಶುರು ಮಾಡಿದ್ದಾನೆ. ಕೊನೆಗೆ...

ಮನೆಯ ಮಾನ ಮರ್ಯಾದೆಗೆ ಅಂಜಿ ತಂಗಿ ಮತ್ತು ಹೆತ್ತಮ್ಮನ್ನು ಕೆರೆಗೆ ತಳ್ಳಿ ಸಾಯಿಸಿಬಿಟ್ಟ ಅಣ್ಣ!
ಮನೆಯ ಮಾನ ಮರ್ಯಾದೆಗೆ ಅಂಜಿ ತಂಗಿ ಮತ್ತು ಹೆತ್ತಮ್ಮನ್ನು ಕೆರೆಗೆ ತಳ್ಳಿ ಸಾಯಿಸಿಬಿಟ್ಟ ಅಣ್ಣ!
Follow us on

ಇದೊಂದು ಕರುಣಾಜನಕ‌ ಕಥೆ. ಮನ ಕಲಕುವಂತಹ ಕಥೆ‌. ಪಾಪಿಯೊಬ್ಬ ತನ್ನ ಹೆತ್ತವ್ವ ಹಾಗೂ ಒಡಹುಟ್ಟಿದ ತಂಗಿಯನ್ನು ಕೊಂದು ಹಾಕಿದ ವ್ಯಥೆಯ ಕಥೆ. ಅದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮರೂರು ಗ್ರಾಮದ ಕೆರೆ‌. ಬೆಳ್ಳಂಬೆಳಗ್ಗೆ ಕರೆಯ ಸುತ್ತ ಜನ ಜಮಾಯಸಿದ್ರು. ಎಲ್ಲರ ಮೊಗದಲ್ಲೂ ಆತಂಕ ದುಗುಡ. ಸ್ವಲ್ಪ ಸಮಯದ ನಂತರ ಅದೇ ಕರೆಯಿಂದ ಎರಡು ಮೃತದೇಹಗಳನ್ನು ಹೊರಗೆ ತೆಗೆಯಲಾಯ್ತು. ಮೃತದೇಹಗಳನ್ನು ಹೊರಗೆ ತೆಗೆಯುತ್ತಿದ್ದಂತೆ ಅಲ್ಲಿದ್ದವರ ದುಃಖದ ಕಟ್ಟೆಯೊಡೆದಿತ್ತು. ಎಲ್ಲರೂ ಜೋರಾಗಿ ಅಳುವುದಕ್ಕೆ ಶುರು ಮಾಡಿದ್ರು.

ಅಂದ್ಹಾಗೆ ಈ ಕೆರೆಯಲ್ಲಿ ಸಿಕ್ಕ ಮೃತದೇಹ 19 ವರ್ಷದ ಧನುಶ್ರೀ ಹಾಗೂ ಅವರ ತಾಯಿ 43 ವರ್ಷದ ಅನಿತಾ ಅವರದ್ದಾಗಿತ್ತು. ಧನುಶ್ರೀ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ತಾಯಿ ಗೃಹಿಣಿ – ಇವರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹಿರಿಕ್ಯಾತನಹಳ್ಳಿ ಗ್ರಾಮದ ನಿವಾಸಿಗಳು. ಅನಿತಾ ಪತಿ ಸತೀಶ್ ರೈತರಾಗಿದ್ದರು. ಮಗ ನಿತೀಶ್ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ.

ಧನುಶ್ರೀ ಮನೆಯ ಮುದ್ದಿನ ಮಗಳಾಗಿದ್ದಳು. ಅದರಲ್ಲೂ ಅಪ್ಪನ ಅಚ್ಚು ಮೆಚ್ಚು. ಸಾಕಷ್ಟು ಆ್ಯಕ್ಟೀವ್ ಆಗಿದ್ದ ಧನುಶ್ರೀ ಹಾಗೂ ಆಕೆಯ ತಾಯಿ ಅನಿತಾ ಸಾವಿಗೆ ಕಾರಣವಾಗಿದ್ದು ಧನುಶ್ರೀಯ ಪ್ರೇಮ್ ಕಹಾನಿ. ಧನುಶ್ರೀ ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಸಿಲುಕಿದ್ದಳು. ಹುಣಸೂರು ತಾಲ್ಲೂಕು ಪಂಚವಳ್ಳಿ ಗ್ರಾಮದ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು‌. ಆಕೆ ಪ್ರೀತಿಸಿದ್ದರೂ ಏನೂ ಆಗುತ್ತಿರಲಿಲ್ಲವೇನೋ, ಆದ್ರೆ ಆಕೆ ಪ್ರೀತಿಸಿದ ಯುವಕನ ಜೊತೆಯಿರುವ ಹಲವು ವಿಡಿಯೋಗಳು ವೈರಲ್ ಆಗಿದ್ದವು.

ಧನುಶ್ರೀ ತಾನು ಪ್ರೀತಿಸಿದ ಯುವಕನ ಜೊತೆ ಬಿಂದಾಸ್ ಆಗಿ ವಿಡಿಯೋ ಮಾಡುತ್ತಾ ಖುಷಿ ಖುಷಿಯಾಗಿ ಹಾಯಾಗಿದ್ದಳು. ಆಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು‌. ಇದು ಸಹಜವಾಗಿ ಧನುಶ್ರೀ ಮನೆಯವ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಸಹೋದರ ನಿತೀಶ್ ನಿಗಿ‌ ನಿಗಿ ಕೆಂಡವಾಗಿದ್ದಾನೆ. ಈ ಬಗ್ಗೆ ಧನುಶ್ರೀಗೆ ವಾರ್ನಿಂಗ್ ಮಾಡಿದ್ದಾನೆ.

ಯಾವುದೇ ಕಾರಣಕ್ಕೂ ಆ ಹುಡುಗನ ಸಹವಾಸ ಮಾಡಬಾರದು. ತೆಪ್ಪಗೆ ಓದಿಕೊಂಡಿರಬೇಕು ಅಂತಾ. ಪ್ರೀತಿಯ ಅಪ್ಪ ಸಹಾ ಮಗಳಿಗೆ ಬುದ್ದಿ ಹೇಳಿದ್ದಾರೆ. ನಮ್ಮದು ತುಂಬಿದ ಕುಟುಂಬ ನಮಗೆ ಅವಮಾನ ಮಾಡಬೇಡ ಅಂತಾ ಬೇಡಿಕೊಂಡಿದ್ದಾರೆ. ಅಪ್ಪನ ಮಾತು ಕೇಳಿದ ಧನುಶ್ರೀ ಆಯ್ತಪ್ಪ ನಿನಗೆ ಅವಮಾನ ಮಾಡಲ್ಲ ಅಂತಾ ಮಾತು ಕೊಟ್ಟಿದ್ದಳಂತೆ. ಆದ್ರೆ ಆ ಯುವಕನ ಸಹವಾಸ ಮಾತ್ರ ಬಿಟ್ಟಿರಲಿಲ್ಲವಂತೆ.

ಅನ್ಯ ಕೋಮಿನ ಯುವಕನ ಪ್ರೀತಿಯ ಮೋಡಿಗೆ ಸಿಕ್ಕ ಸಹೋದರಿ ಹಾದಿ ತಪ್ಪಿದ್ದಾಳೆ. ಮನೆಯ ಕುಟುಂಬದ ಮರ್ಯಾದೆ ಹಾಳು ಮಾಡುತ್ತಾಳೆ ಅಂತಾ ನಿತೀಶ್‌ಗೆ ಅನಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೇ ಹೇಗಾದ್ರೂ ಮಾಡಿ ಬ್ರೇಕ್ ಹಾಕಲೇಬೇಕು ಅಂತಾ ನಿರ್ಧರಿಸಿದ್ದಾನೆ. ಅವತ್ತು ಅಂದ್ರೆ ಜನವರಿ 23 ರಂದು ಅಮ್ಮ ಹಾಗೂ ಸಹೋದರಿಯನ್ನು ಪಕ್ಕದ ಊರಿನ ಅಜ್ಜಿ ಮನೆಗೆ ತನ್ನ ಬೈಕ್‌ನಲ್ಲಿ ಕೆರೆದುಕೊಂಡು ಹೊರಟಿದ್ದಾನೆ.

ಮಾರ್ಗ ಮಧ್ಯೆ ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿದ್ದಾನೆ. ಅಲ್ಲಿ ಸಹೋದರಿಗೆ ಬುದ್ದಿ ಹೇಳಲು ಆರಂಭಿಸಿದ್ದಾನೆ. ತಾಯಿ ಮೊದಲು ನಡಿ ಮನೆಗೆ ಹೋಗೋಣ ಅಂತಾ ಹೇಳಿದ್ದಾರೆ. ಆದ್ರೆ ನಿತೀಶ್ ಅಮ್ಮನ ಮಾತು ಕೇಳಿಲ್ಲ. ಸಹೋದರಿ ಧನುಶ್ರೀ ಜೊತೆ ಜಗಳ ಶುರು ಮಾಡಿದ್ದಾನೆ. ಕೊನೆಗೆ ಸರಿ ಆಯ್ತು. ಕೆರೆಗೆ ನಮಸ್ಕಾರ ಮಾಡು ಮನೆಗೆ ಹೋಗೋಣ ಅಂದಿದ್ದಾನೆ. ಧನುಶ್ರೀ ನಮಸ್ಕಾರ ಮಾಡಲು ಕೆರೆ ಕಡೆ ತಿರುಗಿದ್ದಾಳೆ ಅಷ್ಟೇ… ನಿತೀಶ್ ಆಕೆಯನ್ನು ಕೆರೆಗೆ ತಳ್ಳಿದ್ದಾನೆ. ದಿಢೀರ್ ಅಂತಾ ಆದ ಘಟನೆಯಿಂದ ಅವಕ್ಕಾದ ತಾಯಿ ಅನಿತಾ ಕೆರೆಗೆ ಬಿದ್ದ ಮಗಳು ಧನುಶ್ರೀ ರಕ್ಷಿಸಲು ತಾವು ಸಹ ಕೆರೆಗೆ ಹಾರಿದ್ದಾರೆ. ತಾಯಿ ಕೆರೆಗೆ ಬಿದ್ದದನ್ನು ಕಂಡ ನಿತೀಶ್ ತಾಯಿ ರಕ್ಷಣೆ ಮಾಡಲು ಕೆರೆಗೆ ಹಾರಿದ್ದಾನೆ. ಆದ್ರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ತಾಯಿ ಮಗಳು ನೀರಿನಲ್ಲಿ ಮುಳುಗಿ ಹೋಗಿದ್ದರು.

ಇತ್ತ ತಾಯಿ ಮತ್ತು ಸಹೋದರಿಯನ್ನು ಮುಳುಗಿಸಿದ ನಿತೀಶ್ ಅವರ ಚಪ್ಪಲಿಗಳನ್ನು ಬೈಕ್‌ಗೆ ಸಿಕ್ಕಿಸಿಕೊಂಡು ಮನೆಗೆ ವಾಪಸ್ಸು ಹೋಗಿದ್ದಾನೆ. ಅಪ್ಪ ಸತೀಶ್ ಪತ್ನಿ ಮಗಳು ಇಲ್ಲದೇ ಇರುವುದನ್ನು ಕಂಡು ಗಾಬರಿಯಾಗಿದ್ದಾರೆ. ಎಲ್ಲಿ ಅವರು ಅಂತಾ ಪ್ರಶ್ನೆ ಮಾಡಿದ್ದಾರೆ. ಆಗ ಅಪ್ಪನನ್ನು ಬೈಕ್‌ನಲ್ಲಿ ಕೆರೆ ಬಳಿ ಕರೆದುಕೊಂಡು ಬಂದ ನಿತೀಶ್ ನಡೆದಿದೆಲ್ಲವನ್ನೂ ಹೇಳಿ ನೀನು ಬೇಕಾದರೆ ಅವರನ್ನು ಕಾಪಾಡಿಕೋ‌ ಅಂತಾ ಅಲ್ಲಿಂದ ಹೊರಟು ಹೋಗಿದ್ದಾನೆ.

ಸತೀಶ್ ಸ್ವಲ್ಪ ಹೊತ್ತು ಕೆರೆಯ ಬಳಿ ಹುಡುಕಾಡಿದ್ದಾರೆ. ಆದ್ರೆ ಏನೂ ಗೊತ್ತಾಗಿಲ್ಲ. ಸಂಬಂಧಿಕರಿಗೆ ವಿಷಯ ತಿಳಿಸಿ ಹುಣಸೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸತೀಶ್ ನೀಡಿದ ಮಾಹಿತಿಯಾಧರಿಸಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ‌. ಸಾಕಷ್ಟು ಹುಡುಕಾಟದ ನಂತರ ಅನಿತಾ ಹಾಗೂ ಧನುಶ್ರೀ ಮೃತದೇಹ ಸಿಕ್ಕಿದೆ. ತಕ್ಷಣ ಅಲರ್ಟ್ ಆದ ಹುಣಸೂರು ಪೊಲೀಸರುವ ಆರೋಪಿ ನಿತೀಶ್‌ನನ್ನು ಬಂಧಿಸಿದ್ದಾರೆ.

ಬಂಧಿತ ನಿತೀಶ್ ತಾನು ಮಾಡಿದ ಕೃತ್ಯವನ್ನು ಎಳೆ ಎಳೆಯಾಗಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ. ತನ್ನ ಸಹೋದರಿ ಸಾವಿಗೆ ಯಾವುದೇ ಮರುಕ ಪಡದ ನಿತೀಶ್ ತಾಯಿಯ ಸಾವಿನಿಂದ ವಿಚಲಿತನಾಗಿದ್ದಾನೆ. ಇದೆಲ್ಲಾ ಏನೇ ಇರಲಿ ಮಾತಿನ ಮುಖಾಂತರ ಸರಿ ಮಾಡಬಹುದಾದ ವಿಚಾರಕ್ಕೆ ನಿತೀಶ್ ಅಮಾನುಷವಾಗಿ ತನ್ನ ಹೆತ್ತ ತಾಯಿ ರಕ್ತ ಹಂಚಿಕೊಂಡ ಸಹೋದರಿಯ ಸಾವಿಗೆ ಕಾರಣವಾಗಿದ್ದು ಮಾತ್ರ ದುರಂತವೇ ಸರಿ.

Published On - 10:41 am, Fri, 26 January 24