ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ನಡುವೆ ಮನೆಯಲ್ಲಿ ತಾರಸಿ ತೋಟಗಳನ್ನ ನಿರ್ಮಿಸಿ ಸ್ವಯಂಕೃಷಿ ನಡೆಸುವ ಹವ್ಯಾಸ ಹೆಚ್ಚಾಗಿದೆ. ದೈನಂದಿನ ಅಡುಗೆಗೆ ಬಳಸುವ ಸೊಪ್ಪು, ತರಕಾರಿ ಹಾಗೂ ಇತರೆ ಔಷಧಿ ಗುಣಗಳುಳ್ಳ ಬಳ್ಳಿಗಳನ್ನು ಬೆಳೆಸುವುದು ರೂಢಿಯಲ್ಲಿದೆ. ಆದರೆ, ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿ ಮೊನ್ನೆ CCB ಅಧಿಕಾರಿಗಳ ಕೈಗೆ ತಗಲಾಕೊಂಡ ಆರೋಪಿಯೊಬ್ಬ ಕೊಂಚ ಬೇರೆಯೇ ರೀತಿಯಲ್ಲಿ ಸ್ವಯಂಕೃಷಿಗೆ ಇಳಿದಿದ್ದಾನೆ!
ಹೌದು, ಮೊನ್ನೆ ಬಂಧಿತನಾದ ಆರೋಪಿ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಮಣ್ಯನ್ ಮನೆ ಮೇಲೆ ದಾಳಿ ಮಾಡಿದ್ದ CCB ಅಧಿಕಾರಿಗಳಿಗೆ ಆತನ ಮನೆಯಲ್ಲಿ ಗಾಂಜಾ ಗಿಡಗಳು ಸಿಕ್ಕಿದೆ. ದಾಳಿ ವೇಳೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮನೆಯಲ್ಲಿ ಎರಡು ಗಾಂಜಾ ಗಿಡಗಳು ಪತ್ತೆಯಾಗಿವೆ.
ವೈಯಕ್ತಿಕ ಬಳಕೆಗಾಗಿ ಗಾಂಜಾ ಗಿಡಗಳನ್ನು ನೆಟ್ಟಿದ್ದೆ
ಅಂದ ಹಾಗೆ, ಶ್ರೀ ಕಷ್ಟಪಟ್ಟು ಬೆಳೆಸಿರುವ ಈ ಗಿಡಗಳು ಆರೋಪಿಯ ಪರಿಶ್ರಮದಿಂದ ಸುಮಾರು ಅರ್ಧ ಅಡಿಯಷ್ಟು ಎತ್ತರ ಬೆಳೆದುನಿಂತಿದೆ. ಶ್ರೀನಿವಾಸನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸದೆ ಇದ್ದಿದ್ದರೇ ಮುಂಬರುವ ದಿನಗಳಲ್ಲಿ ಇದನ್ನು ಹೆಮ್ಮರವಾಗಿ ಬೆಳೆಸುತ್ತಿದ್ದನೇನೋ!
ಇದಲ್ಲದೆ, ಈತನ ನಿವಾಸಲ್ಲಿ ಹಲವು ಮಾದರಿಯ ಮಾದಕ ವಸ್ತುಗಳು ಸಹ ಪತ್ತೆಯಾಗಿತ್ತು. 13 ಎಕ್ಸಟಸಿ ಮಾತ್ರೆಗಳು, 100 ಗ್ರಾಂ ಗಾಂಜಾ, 1.1 ಗ್ರಾಂ MDMA ಮತ್ತು 0.5 ಗ್ರಾಂ ಹಶೀಷ್ ಸಹ ಸಿಕ್ಕಿತ್ತು.