ಚಿಕಿತ್ಸೆಗೆ ಬಂದ ಯುವತಿ ಮೇಲೆ ವೈದ್ಯ ಉಬೇದುಲ್ಲನಿಂದ ಲೈಂಗಿಕ ದೌರ್ಜನ್ಯ; ಕ್ಲಿನಿಕ್ ಧ್ವಂಸ
ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಯುವತಿ ಮೇಲೆ ವೈದ್ಯನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಬೆಂಗಳೂರು ನಗರದಲ್ಲಿ ಕೇಳಿಬಂದಿದ್ದು, ಸಂತ್ರಸ್ತ ಯುವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣದ ನಂತರ ವೈದ್ಯ ಉಬೇದುಲ್ಲ ಪರಾರಿಯಾಗಿದ್ದಾನೆ.
ಬೆಂಗಳೂರು: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಯುವತಿ ಮೇಲೆ ವೈದ್ಯನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ನಗರದಲ್ಲಿ ಕೇಳಿಬಂದಿದ್ದು, ಸಂತ್ರಸ್ತ ಯುವತಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಹೊಟ್ಟೆ ನೋವು ಎಂದು ಹೋಗಿದ್ದ 19 ವರ್ಷದ ಯುವತಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ವೈದ್ಯನ ದುಷ್ಕೃತ್ಯದಿಂದ ಪಾರಾಗಲು ಯುವತಿ ಯತ್ನಿಸಿದಾಗ ಎದ್ದರೆ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತೆ ಎಂದು ಹೆದರಿಸಿದ್ದಾನೆ. ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾನೆ. ಇದರಿಂದ ಭಯಬಿದ್ದ ಯುವತಿಗೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅದೇ ಕ್ಲೀನಿಕ್ಗೆ ಹೋಗೋಣ ಎಂದಾಗ ಹಿಂದೇಟು ಹಾಕಿದ್ದಾಳೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಯುವತಿ ತನ್ನ ಅಜ್ಜಿಯೊಂದಿಗೆ ಚಂದ್ರಾಲೇಔಟ್ ಬಳಿ ಇರುವ ಅರುಂಧತಿ ನಗರದಲ್ಲಿರುವ ವೈದ್ಯ ಉಬೇದುಲ್ಲನ ಕ್ಲಿನಿಕ್ಗೆ ಹೋಗಿದ್ದಾಳೆ. ಇಲ್ಲಿ ವೈದ್ಯ ಉಬೇದುಲ್ಲ ಅಜ್ಜಿಯನ್ನ ಹೊರಗಡೆ ಕುಳಿತುಕೊಳ್ಳಲು ಹೇಳಿ ಯುವತಿಗೆ ಗ್ಲೂಕೋಸ್ ಹಾಕಿಸಿ ಮಲಗಿಸಿದ್ದ. ಬಳಿಕ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವತಿಗೆ ಎದ್ದರೆ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತೆ ಎಂದು ಹೆದರಿಸಿದ್ದ, ಅಲ್ಲದೆ ಇದನ್ನ ಹೇಳಿದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿ ಮನೆಗೆ ಕಳಿಸಿದ್ದನು. ಹೀಗಾಗಿ ವೈದ್ಯನಿಗೆ ಹೆದರಿ ಯಾರೀಗೂ ಹೇಳದೆ ಸುಮ್ಮನಿದ್ದಳು.
ಆದರೆ, ಮನೆಗೆ ಬಂದಾಕೆ ಭಯಬಿದ್ದು ಜ್ವರ ಬಂದಿದೆ. ಹೀಗಾಗಿ ಮನೆಯವರು ಆಕೆಯನ್ನು ಮತ್ತೆ ಅದೇ ಕ್ಲಿನಿಕ್ಗೆ ಕರೆದೊಯ್ಯಮು ಮುಂದಾದಾಗ ಯುವತಿ ಹಿಂದೇಟು ಹಾಕುತ್ತಾಳೆ. ಈ ವೇಳೆ ಆಕೆಯ ಅಣ್ಣಂದಿರುವ ಕಾರಣ ಕೇಳಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಆಕ್ರೋಷಗೊಂಡ ಯುವತಿಯ ಅಣ್ಣಂದಿರು ಕ್ಲಿನಿಕ್ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಇದಕ್ಕೂ ಮುನ್ನ ವೈದ್ಯ ಉಬೇದುಲ್ಲ ಪರಾರಿಯಾಗಿದ್ದು, ಯುವತಿಯಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಲೈಂಗಿಕ ದೌರ್ಜನ್ಯದ ಬಗ್ಗೆ ಸಿಬ್ಬಂದಿ ಹೇಳೋದೇ ಬೇರೆ
ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಬಗ್ಗೆ ಕ್ಲಿನಿಕ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೇನು ನಡೆದಿಲ್ಲ ಎಂದು ಹೇಳಿದ್ದಾರೆ. ನಾನು ಹಲವು ವರ್ಷಗಳಿಂದ ಈ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಆ ಯುವತಿ ಹೇಳಿರುವ ರೀತಿ ಯಾವ ಘಟನೆಯೂ ನಡೆದಿಲ್ಲ. ಆದರೆ ಯುವತಿ ಕಡೆಯವರು ಬಂದು ಗಲಾಟೆ ಮಾಡಿರುವುದು ನಿಜ. ಯಾವುದೋ ಬೇರೆ ಉದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿರಬಹುದು ಎಂದೆನಿಸುತ್ತಿದೆ. ನಾವು ಈ ಬಗ್ಗೆ ಕಾನೂನು ಹೊರಾಟಕ್ಕೂ ಮೊದಲು ಆ ಯುವತಿ ಜೊತೆ ಮಾತನಾಡಬೇಕು ಅಂತ ಅಂದುಕೊಂಡಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಅಕ್ರಮ ಮದ್ಯ ಮಾರಾಟಕ್ಕೆ ಪುಟ್ಟಪ್ಪ ಬಲಿ
ಚಿತ್ರದುರ್ಗ: ಅಕ್ರಮ ಮದ್ಯ ಮಾರಾಟಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಆರೋಪ ಜಿಲ್ಲೆಯ ಯಲ್ಲಬೋವಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಪುಟ್ಟಪ್ಪ(45) ಎಂಬ ವ್ಯಕ್ತಿ ಸಾವನ್ನಪ್ಪಿದ ವ್ಯಕ್ತಿ. ಯಲ್ಲಬೋವಿಹಟ್ಟಿ, ಜಾನಕಲ್ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಹೆಚ್ಚಾಗಿದ್ದು, ಇದಕ್ಕೆ ಪುಟ್ಟಪ್ಪ ಎಂಬವರು ಬಲಿಯಾಗಿದ್ದಾರೆ. ಅಕ್ರಮ ಮದ್ಯ ಮಾರಾಟದ ಹಿನ್ನೆಲೆ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಈ ಬಗ್ಗೆ ಪೊಲೀಸ್, ಅಬಕಾರಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮದ್ಯ ಮಾರಾಟ ತಡೆಗೆ ಆಗ್ರಹಿಸುತ್ತಿದ್ದಾರೆ.
ಡಬಲ್ ಮರ್ಡರ್; ಸಂಬಂಧಿಕರ ಮನೆಗಳಿಗೆ ತೆರಳುತ್ತಿರುವ ಜನರು
ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ನಿನ್ನೆ (ಅ.6) ರಾತ್ರಿ 9 ಗಂಟೆ ಸುಮಾರಿಗೆ ನಡೆದ ಎರಡು ಕೊಲೆಗಳ ಪ್ರಕರಣದ ನಂತರ ಜನರು ಭೀತಿಗೊಳಗಾಗಿ ತಮ್ಮ ಮನೆಗಳಿಗೆ ಬೀಗ ಹಾಕಿ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ. ರಾತ್ರಿ ವೇಳೆ ಲಕ್ಷ್ಮೀ ಗಲ್ಲಿಯ ಕೆಲವು ಮನೆಗಳಿಗೆ ಬೀಗ ಹಾಕಿ ಸಂಬಧಿಕರ ಮನೆಗೆ ತೆರಳುತ್ತಿದ್ದಾರೆ. ನಿನ್ನೆ ರಾತ್ರಿ 9 ಗಂಟೆಗೆ ಸುಮಾರಿಗೆ ರಣಧೀರ ಅಲಿಯಾಸ್ ಮಹೇಶ್ ಮುರಾರಿ(26), ಪ್ರಕಾಶ್ ಹುಂಕರಿ ಪಾಟೀಲ್ (24) ಎಂಬವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ಹಳೇ ದ್ವೇಷ ಹಿನ್ನೆಲೆ ಇಬ್ಬರನ್ನು ಹತ್ಯೆಗೈದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಇರುವ ಇಬ್ಬರು ಯುವಕರ ಮೃತದೇಹ ಇಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸುಳೇಭಾವಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ