ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವು ಇಂದು ಹೈಪ್ರೊಫೈಲ್ ಸುನಂದಾ ಪುಷ್ಕರ್ (Sunanda Pushkar) ನಿಗೂಢ ಸಾವಿನ ಪ್ರಕರಣದ ಬಗ್ಗೆ ಚರ್ಚೆ ಮಾಡೋಣ. ಇದು ಹೈಪ್ರೊಫೈಲ್ ಪ್ರಕರಣ ಯಾಕೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುನಂದಾ ಒಬ್ಬ ಉದ್ಯಮಿ ಮತ್ತು ಸಮಾಜದಲ್ಲಿ ಗಣ್ಯ ವ್ಯಕ್ತಿಯೆನಿಸಿಕೊಂಡಿದ್ದರಲ್ಲದೆ ಮೊನ್ನೆಯಷ್ಟೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷನ ಸ್ಥಾನಕ್ಕೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ವಿರುದ್ಧ ಸ್ಪರ್ಧಿಸಿ ಸೋತ ಮಲೆಯಾಳಿ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ (Shahi Tharoor) ಅವರ ಪತ್ನಿಯಾಗಿದ್ದರು. ಅವರಿಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಸುನಂದಾ, ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಜೊತೆ ಟ್ವಿಟರ್ ಸಮರ ನಡೆಸಿದ ನಂತರ ದೆಹಲಿಯ ಪಂಚತಾರಾ ಹೋಟೆಲಿನ ರೂಮೊಂದರಲ್ಲಿ ಶವವಾಗಿ ಪತ್ತೆಯಾದರು.
ಅವತ್ತು ಅಸಲಿಗೆ ನಡೆದಿದ್ದೇನು?
ಜನೆವರಿ 17, 2014 ರಂದು ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ರೂಮ್ ನಂಬರ್ 345ರಲ್ಲಿ ಮೃತಪಟ್ಟಿದ್ದರು. ಅವರ ದೇಹವನ್ನು ಮೊದಲು ನೋಡಿದ್ದು ಪತಿ ಶಶಿ ತರೂರ್. ಸಂಸದ ಹಲವಾರು ಬಾರಿ ಎಬ್ಬಿಸುವ ಪ್ರಯತ್ನ ಮಾಡಿದಾಗ್ಯೂ ಸುನಂದಾ ಏಳದೆ ಹೋದಾಗ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಅವರ ಸಾವು ಆತ್ಮಹತ್ಯೆ ಮೂಲಕ ಸಂಭವಿಸಿದೆ ಅಂತ ವರದಿಯಾಗಿತ್ತು.
ಆದರೆ ದೆಹಲಿಯ ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೆನ್ಸಸ್ (ಏಮ್ಸ್) ನೀಡಿದ ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಸುನಂದಾ ದೇಹದ ಮೇಲೆ ಗಾಯದ ಗುರುತುಗಳಿವೆ ಅಂತ ಉಲ್ಲೇಖಿಸಲಾಗಿತ್ತು. ಆದರೆ ಈ ಗಾಯಗಳು ಅವರ ಕೊಲೆ ನಡೆದಿದೆ ಎಂಬ ಅಂಶವನ್ನು ನಿರೂಪಿಸುವುದಿಲ್ಲ, ಡ್ರಗ್ಸ್ ಓವರ್ ಡೋಸ್ ನಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ ಅಂತಲೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಸುನಂದಾ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಮತ್ತ್ತು ಅದಕ್ಕಾಗಿ ಸೆಡೆಟಿವ್ ಮತ್ತು ಟ್ರಾಂಕ್ವಿಲೈಜರ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಅಲ್ಪ್ರಾಜೋಲಮ್ ಮತ್ತು ಎಕ್ಸಿಡ್ರಿನ್ ಔಷಧಿಗಳ ಅಂಶ ಅವರ ದೇಹದಲ್ಲಿ ಕಂಡುಬಂದಿತ್ತು.
ಸುನಂದಾರನ್ನು ಕೊಲೆ ಮಾಡಲಾಯಿತೇ?
ನಿಮಗೆ ಆಶ್ಚರ್ಯವಾಗಬಹುದು, ಅವರ ಸಾವಿನ ಕಾರಣವನ್ನು ಇದುವರೆಗೆ ಪತ್ತೆ ಮಾಡಲಾಗಿಲ್ಲ. ಆರಂಭದಲ್ಲಿ ಅವರ ಸಾವನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ ದೇಹದಲ್ಲಿ ಕಂಡ ವಿಷಕಾರಿ ಅಂಶ, ಅವರ ಕೈ ಮೇಲೆ ಇಂಜಕ್ಷನ್ ತೆಗೆದುಕೊಂಡ ಗುರುತುಗಳು, ಅಂಗೈ ಮೇಲೆ ಕಚ್ಚಿದ ಗಾಯ ಮತ್ತು ಅವರ ಹಾಗೂ ಮೆಹರ್ ತರಾರ್ ನಡುವೆ ಟ್ವಿಟರ್ ಜಗಳದ ವಿವಾದ ಮೊದಲಾದ ಸಂಗತಿಗಳು ಅವರು ಕೊಲೆಯಾಗಿರಬಹುದಾದ ಸಾಧ್ಯತೆಗೆ ಪುಷ್ಠಿ ನೀಡಿದ್ದವು.
ಪ್ರಕರಣ ಸದ್ಯ ಯಾವ ಸ್ಥಿತಿಯಲ್ಲಿದೆ?
ಏಮ್ಸ್ ನಲ್ಲಿ ವೈದ್ಯರಾಗಿದ್ದ ಡಾ ಸುಧೀರ್ ಗುಪ್ತಾ ಅವರು ಸುನಂದಾ ಸಾವು ಆತ್ಮಹತ್ಯೆ ಎಂಬಂತೆ ವರದಿ ನೀಡಲು ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಹೇಳಿಕೆ ನೀಡಿದ ಬಳಿಕ ಅವರ ಸಾವು ಆತ್ಮಹತ್ಯೆ ಮೂಲಕ ಸಂಭವಿಸಿದೆ ಎಂಬ ವಾದ ಹಳಸತೊಡಗಿತು. ಅಕ್ಟೋಬರ್ 14, 2014 ರಂದು ಬಿಡುಗಡೆ ಮಾಡಲಾದ ವೈದ್ಯಕೀಯ ವರದಿಯೊಂದರ ಪ್ರಕಾರ ವಿಷಪ್ರಾಶನದಿಂದ ಅವರ ಸಾವು ಸಂಭವಿಸಿದೆ. ಈ ವರದಿಯ ಆಧಾರದ ಮೇಲೆ ದೆಹಲಿ ಪೊಲೀಸ್ ಜನೆವರಿ 6, 2015 ರಂದು ಎಫ್ ಐ ಆರ್ ದಾಖಲಿಸಿಕೊಂಡಿತು.
ತರೂರ್ ಆರೋಪಮುಕ್ತ!
ಅದಾದ ಮೇಲೆ ಮೇ 15, 2018 ರಂದು ಶಶಿ ತರೂರ್ ಅವರ ವಿರುದ್ಧ ಪತ್ನಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಹೊರಿಸಲಾಯಿತು. ಆಗಸ್ಟ್ 31, 2019 ರಂದು ದೆಹಲಿ ಪೊಲೀಸ್ ಸುನಂದಾ ದೇಹದ ಮೇಲೆ ಕಂಡು ಬಂದ ಗಾಯಗಳ ಆಧರಿಸಿ ತರೂರ್ ಅವರನ್ನು ಪತ್ನಿಯನ್ನು ಕ್ರೂರವಾಗಿ ನಡೆಸಿಕೊಂಡ (ಸೆಕ್ಷನ್-498-ಎ), ಆತ್ಮಹತ್ಯೆಗೆ ಪ್ರಚೋದನೆ (ಸೆಕ್ಷನ್ 306) ಮತ್ತು ಕೊಲೆ (ಸೆಕ್ಷನ್ 302) ಗಳ ಅಡಿಯಲ್ಲಿ ವಿಚಾರಣೆಗೊಳಪಡಿಸುವಂತೆ ಆಗ್ರಹಿಸಿದಾಗ ಪ್ರಕರಣ ನಾಟಕೀಯ ತಿರುವು ಪಡೆದಿದ್ದು ನಿಜ.
ತರೂರ್ ವಿಚಾರಣೆ ನಡೆಯಿತಾದರೂ ಅರೋಪಗಳ್ಯಾವೂ ಸಾಬೀತಾಗಲಿಲ್ಲ. ದೆಹಲಿಯ ಒಂದು ಕೋರ್ಟ್ ಆಗಸ್ಟ್ 17, 2021 ರಂದು ತರೂರ್ ಅವರನ್ನು ಎಲ್ಲ ಆರೋಪಗಳಿಂದ ಮುಕ್ತ ಮಾಡಿತು.
ಸುನಂದಾ ಬದುಕಿನ ಮೇಲೆ ಆಧಾರಿತ ‘ಗೇಮ್’ ಹೆಸರಿನ ಕನ್ನಡ ಸಿನಿಮವೊಂದು 2016 ರಲ್ಲಿ ಬಿಡುಗಡೆಯಾಗಿತ್ತು. ಸುನಂದಾ ಪಾತ್ರವನ್ನು ಖ್ಯಾತ ಬಾಲಿವುಡ್ ನಟಿ ಮನೀಷಾ ಕೊಯಿರಾಲ ನಿರ್ವಹಿಸಿದ್ದರು.