CCB ಪೊಲೀಸರ ಭರ್ಜರಿ ಬೇಟೆ; ಕುಖ್ಯಾತ ಮನೆಗಳ್ಳರ ಬಂಧನ, ಇವರ ಬಂಧನದ ಕಥೆ ರೋಚಕ..
ಹೈಫೈ ಮನೆಗಳನ್ನೇ ಟಾರ್ಗೆಟ್ ಮಾಡುತಿದ್ದ ಆರೋಪಿಗಳು, ಯಾವುದೇ ರೂಂ ಅಥವ ಹೋಟೆಲ್ಗಳಲ್ಲಿ ಉಳಿಯುತ್ತಿರಲಿಲ್ಲ. ಬಂದ ದಿನವೇ ಕಾರ್ಯಾಚರಣೆಗೆ ಇಳಿಯುತಿದ್ದ ಆರೋಪಿಗಳು, ಹಗಲು ಸಂದರ್ಭದಲ್ಲಿ ಮನೆಗಳ ಟಾರ್ಗೆಟ್ ಮಾಡುತ್ತಿದ್ದರು.
ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 36 ಪ್ರಕರಣದಲ್ಲಿ ಬೇಕಾಗಿದ್ದ ಕುಖ್ಯಾತ ಮನೆಗಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 4 ಕೆಜಿ ಚಿನ್ನವನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳ ಸೆರೆಯಾಗಿದ್ದು, ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಫಾಹಿಮ್ ಇಸ್ಲಾಂ ಹಾಗೂ ಮುರ್ಸಲೀಮ್ ಮೊಹಮ್ಮದ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಂಧನದಿಂದ 36 ಪ್ರಕರಣ ಬೆಳಕಿಗೆ ಬಂದಿದ್ದು, ಮೂರು ವರ್ಷದಲ್ಲಿ ನಗರದ ಹಲವೆಡೆ ಬರೊಬ್ಬರಿ 36 ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಉತ್ತರಪ್ರದೇಶದಿಂದ ಕಾರಿನಲ್ಲಿ ಬರುತ್ತಿದ್ದ ಕಳ್ಳರು, ಮನೆಗಳಲ್ಲಿ ಚಿನ್ನಾಭರಣ ಕದ್ದು ಅದೇ ಕಾರಿನಲ್ಲಿ ಎಸ್ಕೇಪ್ ಆಗುತ್ತಿದ್ದರು.
ಇನ್ನು ಫಿಂಗರ್ ಪ್ರಿಂಟ್ಸ್ ಮುಖಾಂತಾರ ಸಿಕ್ಕಿ ಬಿದ್ದ ಚಾಲಾಕಿ ಮನೆಗಳ್ಳರು, ದೆಹಲಿ, ಹರಿಯಾಣ, ಉತ್ತರ ಪ್ರದೇಶದಿಂದ ಗ್ಯಾಂಗ್ ಕಟ್ಟಿಕೊಂಡು ಬರುತ್ತಿದ್ದರು. ನಂತರ ರಾಜ್ಯದ ಬೆಂಗಳೂರು, ಬೆಳಗಾವಿ, ಗೋವಾ ರಾಜ್ಯದ ಪಣಜಿ, ತೆಲಂಗಾಣದ ಹೈದ್ರಾಬಾದ್ ನಲ್ಲಿ ಸರಣಿ ಮನೆಗಳ್ಳತನ ನಡೆಸುತ್ತಿದ್ದರು.
ಫಹೀಮ್ 40 ಪ್ರಕರಣಗಳಲ್ಲಿ ಬೇಕಾಗಿದ್ದಾನೆ.. ಬಂಧಿತ ಫಯೂಮ್ @ ಎಟಿಎಂ ಫಹೀಮ್ಗಾಗಿ ಪೊಲೀಸರು ಬಲೆ ಬೀಸಿದ್ದರು. ಕುಖ್ಯಾತ ಫಹೀಮ್ ಉತ್ತರ ಪ್ರದೇಶ ಪೊಲೀಸರಿಗೆ ಬೇಕಾಗಿದ್ದಾನೆ. ಇವನ ಮೇಲೆ ಉತ್ತರ ಪ್ರದೇಶದಲ್ಲಿ ದರೋಡೆ, ಕೊಲೆ, ಕೊಲೆಯತ್ನ ಸೇರಿದಂತೆ 40 ಪ್ರಕರಣಗಳಿವೆ. ಹೀಗಾಗಿ ಈತನ ಪತ್ತೆಗಾಗಿ ಉತ್ತರಪ್ರದೇಶ ಪೊಲೀಸರು ಬಹುಮಾನ ಘೋಷಿಸಿದ್ದರು. ಆರೋಪಿ ಹುಡುಕಿಕೊಟ್ಟರೆ 10 ಸಾವಿರ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು.
2016ರಲ್ಲಿ ಉತ್ತರ ಪ್ರದೇಶದ ನೊಯ್ಡಾ ಜೈಲಿನಲ್ಲಿದ್ದ ಆರೋಪಿ ಫಹೀಮ್, ಈ ವೇಳೆ ಇತರ ಆರೋಪಿಗಳ ಜೊತೆ ಸಂಚು ರೂಪಿಸಿದ್ದ. ಬಳಿಕ 2017ರಲ್ಲಿ ಜೈಲಿನಿಂದ ಹೊರಗಡೆ ಬಂದ ಫಹೀಮ್, ದಕ್ಷಿಣ ಭಾರತದಲ್ಲಿ ಸರಣಿ ಮನೆಗಳ್ಳತನ ಶುರುಮಾಡಿದ್ದ.
ಕಾಲೇಜು ಬ್ಯಾಗ್ ಹಾಕಿಕೊಂಡು ಮನೆ ಬಾಗಿಲು ತಟ್ಟುತಿದ್ದ ಆರೋಪಿಗಳು.. ಹೈಫೈ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಯಾವುದೇ ರೂಂ ಅಥವಾ ಹೋಟೆಲ್ಗಳಲ್ಲಿ ಉಳಿಯುತ್ತಿರಲಿಲ್ಲ. ಬಂದ ದಿನವೇ ಕಾರ್ಯಾಚರಣೆಗೆ ಇಳಿಯುತಿದ್ದ ಆರೋಪಿಗಳು, ಹಗಲು ಸಂದರ್ಭದಲ್ಲಿ ಮನೆಗಳ ಟಾರ್ಗೆಟ್ ಮಾಡುತ್ತಿದ್ದರು. ಕಾಲೇಜು ಬ್ಯಾಗ್ ಹಾಕಿಕೊಂಡು ಮನೆ ಬಾಗಿಲು ತಟ್ಟುತಿದ್ದ ಆರೋಪಿಗಳು, ಬಾಗಿಲು ತೆರೆದರೆ ಎಲೆಕ್ಟ್ರಾನಿಕ್ ರಿಪೇರಿ ಅಂತಾ ಕಥೆ ಹೇಳಿ ವಾಪಸ್ ಬರುತಿದ್ದರು. ಬಾಗಿಲು ತೆರೆಯದಿದ್ದರೆ ಸತತವಾಗಿ ಬೆಲ್ ಮಾಡಿ ನಂತರ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ಬಳಿಕ ಅದೇ ದಿನ ವಾಪಸ್ ಊರಿಗೆ ಕಾರ್ನಲ್ಲಿ ಹೊಗುತ್ತಿದ್ದರು.
ಆರೋಪಿಗಳಿಂದ ಸಿಸಿಬಿ ಪೊಲೀಸರ ದಾರಿ ತಪ್ಪಿಸುವ ಯತ್ನ.. ಆರೋಪಿಗಳಿಂದ ಸಿಸಿಬಿ ಪೊಲೀಸರ ದಾರಿ ತಪ್ಪಿಸುವ ಯತ್ನವೂ ನಡೆದಿದೆ. ವ್ಯಕ್ತಿಯೊಬ್ಬರಿಗೆ ಚಿನ್ನ ಕಳುಹಿಸುತ್ತಿರುವುದಾಗಿ ಹೇಳಿದ್ದ ಆರೋಪಿಗಳು, ಹರಿಯಾಣದ ಗುರಗಾಂವ್ನ ವ್ಯಕ್ತಿಯ ಮುಖಾಂತರ ದೆಹಲಿ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಮಾರಾಟ ಮಾಡಿದ್ದರು.
ಸಿಸಿಬಿ ಪೊಲೀಸರು ಕಳ್ಳರ ಹೇಳಿಕೆ ಆಧರಿಸಿ ಹರಿಯಾಣಕ್ಕೆ ತೆರಳಿದ್ದರು. ಈ ವೇಳೆ ಗುರ್ ಗಾಂವ್ನ ಪೊಲೀಸರ ಭೇಟಿ ಮಾಡಿ ವಿಚಾರಿಸಿದಾಗ ಸಿಸಿಬಿ ಪೊಲೀಸರಿಗೆ ಶಾಕ್ ಕಾದಿತ್ತು. ಆರೋಪಿಗಳು ಚಿನ್ನ ಕಳುಹಿಸುತ್ತಿದ್ದ ವ್ಯಕ್ತಿ ಒಂದೂವರೆ ವರ್ಷದ ಹಿಂದೆಯೇ ಕೊಲೆಯಾಗಿದ್ದಾಗಿ ಗುರ್ ಗಾಂವ್ ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ಮತ್ತೆ ವಿಚಾರಣೆ ನಡೆಸಿದ ವೇಳೆ ಅಸಲಿ ಸತ್ಯ ಬಯಲಾಗಿದೆ. ಕಳ್ಳತನದ ಬಳಿಕ ಆರೋಪಿಗಳು ಚಿನ್ನವನ್ನ ಹಂಚಿಕೊಳ್ಳುತ್ತಿದ್ದರು. ಅದೇ ರೀತಿ ಫಯೂಮ್ ಸಹ ತನ್ನ ಪಾಲನ್ನು ಉತ್ತರ ಪ್ರದೇಶದ ಮುರಾದಾಬಾದ್ನ ತನ್ನ ಮನೆ ಹಾಗೂ ತಂಗಿಯ ಮನೆಯಲ್ಲಿ ಚಿನ್ನವನ್ನು ಅಡಗಿಸಿದ್ದ. ಮುರಾದಾಬಾದ್ ಸೂಕ್ಷ್ಮ ಪ್ರದೇಶವಾದ ಹಿನ್ನೆಲೆಯಲ್ಲಿ ಮುರಾದಾಬಾದ್ನ ಕೊತ್ವಾಲಿ ಪೊಲೀಸರ ಸಹಾಯ ಪಡೆದು, ಸತತ ಏಳು ದಿನಗಳ ಕಾರ್ಯಾಚರಣೆ ನಡೆಸಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
Published On - 12:49 pm, Sat, 2 January 21