ಬೆಂಗಳೂರಲ್ಲಿ IMA ಅಕ್ರಮದ ಮಾದರಿಯಲ್ಲೇ ಮತ್ತೊಂದು ಬಹುಕೋಟಿ ವಂಚನೆ ಬಯಲಿಗೆ!
ಈ ಪ್ರಕರಣದಲ್ಲಿ 300 ಕೋಟಿಗೂ ಹೆಚ್ಚು ವಂಚನೆ ನಡೆದಿರುವ ಶಂಕೆ ಇದೆ. ವಿಶ್ವಪ್ರಿಯ ಫೈನಾನ್ಶಿಯಲ್ & ಸೆಕ್ಯೂರಿಟೀಸ್ ಪ್ರೈ. ಲಿ. ಕಂಪೆನಿ ವಿರುದ್ಧ ಈ ರೀತಿಯ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೆಚ್ಚು ಬಡ್ಡಿಯ ಆಸೆಗೆ ಬಿದ್ದು ಹೂಡಿಕೆ ಮಾಡುವವರರಿಗೆ ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿತ್ತು. ಆದರೆ, ಈ ಪ್ರಕರಣದಿಂದ ಜನ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಏಕೆಂದರೆ, ರಾಜ್ಯದಲ್ಲಿ ಇದೇ ಮಾದರಿಯ ಮತ್ತೊಂದು ಬಹುಕೋಟಿ ವಂಚನೆ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾಗುವವರು ಇರುವವರೆಗೂ ವಂಚಿಸುವವರು ಇದ್ದೇ ಇರುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಈ ಪ್ರಕರಣದಲ್ಲಿ 300 ಕೋಟಿ ರೂ.ಗೂ ಹೆಚ್ಚು ವಂಚನೆ ನಡೆದಿರುವ ಶಂಕೆ ಇದೆ. ವಿಶ್ವಪ್ರಿಯ ಫೈನಾನ್ಶಿಯಲ್ & ಸೆಕ್ಯೂರಿಟೀಸ್ ಕಂಪೆನಿ ವಿರುದ್ಧ ಈ ರೀತಿಯ ಆರೋಪ ಕೇಳಿ ಬಂದಿದೆ. ತಮಿಳುನಾಡು ಮೂಲದ ಹಣಕಾಸು ಸಂಸ್ಥೆ ಇದಾಗಿದ್ದು, ಎಂ.ಜಿ.ರಸ್ತೆಯ ಮಿತ್ತಲ್ ಟವರ್ನಲ್ಲಿ ಶಾಖೆ ತೆರೆದಿತ್ತು. ಕರ್ನಾಟಕ ಹಾಗೂ ತಮಿಳುನಾಡಿನ ನಾನಾ ಕಡೆಗಳಲ್ಲಿ ಈ ಕಂಪೆನಿಯ ಶಾಖೆಗಳು ಇವೆ.
ಈ ಕಂಪೆನಿಯಲ್ಲಿ ಹಣ ಇಟ್ಟರೆ ಶೇ. 10.47ರಷ್ಟು ಬಡ್ಡಿ ಕೊಡುವುದಾಗಿ ಕಂಪನಿಯವರು ನಂಬಿಸಿದ್ದರು. ಹಣದ ಹರಿವು ಹೆಚ್ಚಿಸಲು, ಕಂಪೆನಿಯ ಬಗ್ಗೆ ಪ್ರಚಾರಕ್ಕೆ ಏಜೆಂಟರನ್ನು ಕೂಡ ಬಳಕೆ ಮಾಡಲಾಗಿತ್ತು. ಅಧಿಕ ಬಡ್ಡಿ ಆಸೆಗೆ ಬಿದ್ದ ಜನರು ಈ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈಗ ಠೇವಣಿ ಹಣ ಹಿಂದಿರುಗಿಸದೆ ಕಂಪನಿ ವಂಚನೆ ಮಾಡಿದೆ.
ಕಂಪನಿ ಮುಖ್ಯಸ್ಥರಾದ ಆರ್.ಸುಬ್ರಮಣಿಯನ್, ನಾರಾಯಣ, ರಾಜರತ್ನಂ, ಟಿಎಸ್ ರಾಘವನ್, ಏಜೆಂಟ್ ಡಾ. ಅದಿಕೇಷನ್, ಪಿ.ಸದಾನಂದ ರಾಜೇಂದ್ರ ಕುಮಾರ್ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಗಿರಿನಗರ, ಸಿದ್ದಾಪುರ ಸೇರಿದಂತೆ ಹಲವು ಠಾಣೆಗಳಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ಮಹಿಳೆಯರೇ ಟಾರ್ಗೆಟ್ ಈ ಪ್ರಕರಣದಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗುತ್ತಿತ್ತು. ಗೃಹಿಣಿಯರಿಗೆ ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ IMA ಪ್ರಕರಣದಲ್ಲಿ ಬಂಧಿತನಾಗಿದ್ದ ರೌಡಿಶೀಟರ್ ಭಾಗಿ