ಬೆಂಗಳೂರು, ಡಿ.12: ಹೊಸ ವರ್ಷಕ್ಕೆ (New Year) ಕಾಲಿಡಲು ಸಿಲಿಕಾನ್ ಸಿಟಿ ಸಜ್ಜಾಗುತ್ತಿದೆ. ಇದರ ನಡುವೆ ನ್ಯೂ ಇಯರ್ ಪಾರ್ಟಿಗಾಗಿ ಡ್ರಗ್ಸ್ ದಂಧೆ (Drugs) ಜೋರಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಆಫ್ರಿಕಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿ. ಬಂಧಿತನಿಂದ 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಲಾಗಿದೆ.
ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಎಂಬ ಆರೋಪಿ ಹೊಸ ವರ್ಷಕ್ಕೆ ಮತ್ತೇರಿಸಲು ಅಪಾರ ಪ್ರಮಾಣದ ಡ್ರಗ್ಸ್ ತಂದಿದ್ದ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಆರೋಪಿಯು ಬೆಡ್ಶೀಟ್ ಕವರ್, ಸೋಪ್ ಬಾಕ್ಸ್ ಹಾಗೂ ಚಾಕೊಲೇಟ್ ಬಾಕ್ಸ್ನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ. ಹೊಸ ವರ್ಷಕ್ಕೆ ರೇವ್ ಪಾರ್ಟಿಗೆ ಡ್ರಗ್ಸ್ ಸಾಗಿಸಲು ಮುಂದಾಗಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರ ಹಣ ಕದ್ದು ಪರಾರಿಯಾಗುತ್ತಿದ್ದ ಕಳ್ಳಿಯನ್ನು ಹಿಡಿದ ಆಟೋ ಚಾಲಕ: ಆರೋಪಿಯನ್ನ ಚೇಸ್ ಮಾಡಿದ್ದೇ ರೋಚಕ
ಬೆಂಗಳೂರಿನಲ್ಲಿ ಹುಕ್ಕಾ ಬಾರ್ಗಳ ನಿಷೇಧದ ಕುರಿತು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನೆ ಮಾಡಿದ್ದಾರೆ. ಹುಕ್ಕಾ ಬಾರ್ ಗಳ ನಿಷೇಧ ಮಾಡುವಂತೆ ವಿಪಕ್ಷ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ. ನಿಮ್ಮ ಅವಧಿಯಲ್ಲಿ ನಿಷೇಧ ಮಾಡಿಲ್ಲ. ಈಗ ಹೇಳುತ್ತಿದ್ದೀರಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದು ಪಂಜಾಬ್ ರೀತಿ ಬೆಂಗಳೂರು ಆಗುವುದು ಬೇಡ ಎಂದು ಶಾಸಕ ಅರವಿಂದ ಬೆಲ್ಲದ್ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಹುಕ್ಕಾ ಬಾರ್ ವಿಚಾರವಾಗಿ ಕಾಯಿದೆ ತರುವುದಾಗಿ ಸದನಕ್ಕೆ ಗೃಹ ಸಚಿವ ಪರಮೇಶ್ವರ್ ಭರವಸೆ ನೀಡಿದರು.
ಅನ್ನಭಾಗ್ಯ ಅಕ್ಕಿಗೆ ಕಳ್ಳರ ಕಾಟ ತಪ್ಪಿಲ್ಲ. ಅಕ್ಕಿ ಕಳ್ಳತನ ಮಾಡಿದ್ದ ಆರು ಜನರನ್ನ ಯಾದಗಿರಿಯಲ್ಲಿ ಬಂಧಿಸಲಾಗಿದೆ. ಇತ್ತ ಮೈಸೂರಿನಲ್ಲಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡ್ತಿದ್ದ ಬಾಲಕನನ್ನ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ ಅಕ್ಕಿಗೆ ಕಳ್ಳರ ಕಾಟ ತಪ್ಪಿಲ್ಲ. ಹೀಗೆ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ್ದ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಗೋಡೌನ್ ನಿಂದ, ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳತನವಾಗಿತ್ತು. ಶಿವಪ್ಪ, ಶಿವರಾಜ್, ವೆಂಕಟೇಶ್, ಮಲ್ಲನಗೌಡ, ಮೆಹಬೂಬ್, ಅಬ್ದುಲ್ ನಬಿ ಬಂಧಿತರು. ಆರೋಪಿಗಳಿಂದ 53 ಲಕ್ಷ ಹಣ ಜಪ್ತಿ ಮಾಡಿದ್ದಾರೆ. ಗೋಡೌನ್ ನಿಂದ ಎರಡು ವಾರಗಳ ಹಿಂದೆ 2.06 ಕೋಟಿ ಮೌಲ್ಯದ 6 ಸಾವಿರ ಕ್ವಿಂಟಲ್ ಅನ್ನ ಭಾಗ್ಯ ಅಕ್ಕಿ ಕಳ್ಳತನವಾಗಿತ್ತು.
ಇನ್ನು ಮೈಸೂರಿನಲ್ಲಿಯೂ ಅನ್ನಭಾಗ್ಯ ಯೋಜನೆ ಅಕ್ಕಿ ಖರೀದಿ ಜಾಲ ಮುಂದುವರಿದಿದೆ. ಮೈಸೂರಿನ ಯರಗನಹಳ್ಳಿಯಲ್ಲಿ ಮನೆ ಮನೆಗೆ ಹೋಗಿ ಪಡಿತರ ಅಕ್ಕಿ ಖರೀದಿಸುತ್ತಿದ್ದ ಬಾಲಕ ಸಿಕ್ಕಿಬಿದಿದ್ದಾನೆ. ಸ್ಥಳೀಯರು ಬಾಲಕನನ್ನ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಬಾಲಕ 15ರಿಂದ 16 ರೂಪಾಯಿಗೆ ಅಕ್ಕಿ, ರಾಗಿ ಖರೀದಿ ಮಾಡುತ್ತಿದ್ನಂತೆ. ಸೋಹೆಲ್ ಎಂಬಾತ ಖರೀದಿಗೆ ಕಳುಹಿಸಿದ್ದ ಎನ್ನಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:14 pm, Tue, 12 December 23