ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಮೂವರು ಅರೆಸ್ಟ್, 12 ಕೋಟಿ ಮೌಲ್ಯದ ಗಾಂಜಾ ಜಪ್ತಿ

| Updated By: Rakesh Nayak Manchi

Updated on: Jul 15, 2023 | 2:19 PM

ಬೆಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳ ಸಹಿತ ಕೋಟ್ಯಾಂತರ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಮೂವರು ಅರೆಸ್ಟ್, 12 ಕೋಟಿ ಮೌಲ್ಯದ ಗಾಂಜಾ ಜಪ್ತಿ
12 ಕೋಟಿ ಮೌಲ್ಯದ 1500 ಕೆಜಿ ಗಾಂಜಾ ಜಪ್ತಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು
Follow us on

ಬೆಂಗಳೂರು: ನಗರದ ಸಿಸಿಬಿ ಪೊಲೀಸರು (CCB Police) ಭರ್ಜರಿ ಕಾರ್ಯಾಚರಣೆ ನಡೆಸಿ ಪುಷ್ಪ ಸಿನಿಮಾದ (Pushpa Movie) ಮಾದರಿಯಲ್ಲಿ ಗಾಂಜಾ (Ganja) ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಬೆಂಗಳೂರು ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿ ಇಷ್ಟು ಪ್ರಮಾಣದಲ್ಲಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ 1200 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿದ್ದರು.

ಬೆಂಗಳೂರು ನಗರ ಸಿಸಿಬಿ ವಿಭಾಗದ ಮಹಿಳಾ ಸಂರಕ್ಷಕ ದಳದ ಪೊಲೀಸರಿಗೆ ಗಾಂಜಾ ಮಾರಾಟದ ಸುಳಿವು ಸಿಕ್ಕಿತ್ತು. ಅದರಂತೆ ಕಳೆದ ಮೂರು ವಾರಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಪುಷ್ಪ ಸಿನಿಮಾ ಮಾದರಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಕುಖ್ಯಾತ ಗಾಂಜಾ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಲ್ಮಾನ್ ಪಾಷಾ, ಚಂದ್ರು ಭಾನು ಬಿಶ್ಣೋಯ್ ಹಾಗೂ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾ ಹಾಗೂ ಇದರ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಗಾಂಜಾ ಪೆಡ್ಲರ್​​ಗಳ ಬೆನ್ನತ್ತಿ ನೆರೆ ರಾಜ್ಯಕ್ಕೆ ತೆರಳಿದ ಬೆಂಗಳೂರು ಪೊಲೀಸರು: ಮಹಾರಾಷ್ಟ್ರದಲ್ಲಿ ನಡೆಯಿತು ಸಿನಿಮಿಯ ಘಟನೆ

ಗಾಂಜಾ ದಂಧೆ ಭೇದಿಸಲು ಸಿಸಿಬಿ ಅಧಿಕಾರಿಗಳು ನಿರಂತರ ಮೂರು ವಾರಗಳ ಕಾರ್ಯಾಚರಣೆ ನಡೆಸಿದ್ದಾರೆ. ಕುಖ್ಯಾತ ಗಾಂಜಾ ಪೆಡ್ಲರ್ ಚಾಂದ್ ಬಂಧನಕ್ಕೆ ಬಲೆ ಬೀಸಿದ್ದ ಸಿಸಿಬಿ ಪೊಲೀಸರ ಬಲೆಗೆ ಚಾಂದ್ ಬದಲಿಗೆ ಅತನ ಸೋದರ ಸಲ್ಮಾನ್ ಪಾಷಾ ಬಿದ್ದಿದ್ದ. ಈತನನ್ನು ತೀವ್ರ ವಿಚಾರಣೆ ನಡೆಸಿದಾಗ ಗಾಂಜಾ ಪೂರೈಕೆಯ ಬಗ್ಗೆ ಬಾಯಿಬಿಟ್ಟಿದ್ದಾನೆ.

ಗಾಂಜಾ ಪೂರೈಕೆ ಮಾಡಲು ಗೂಡ್ಸ್ ವಾಹನದ ಚಾರ್ಸಿ ಮಾರ್ಪಾಡು ಮಾಡಲಾಗಿದೆ. ಅಸಲಿ ಚಾರ್ಸಿ ಅಡಿಯಲ್ಲಿ ಒಂದು ಅಡಿ ಎತ್ತರದ ಸೀಕ್ರೇಟ್ ಚಾರ್ಸಿ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಗಾಂಜಾ ಪ್ಯಾಕ್​ಗಳನ್ನ ಜೋಡಿಸಿ ಮುಚ್ಚಲಾಗುತ್ತಿತ್ತು. ಬಳಿಕ ಮೇಲೆ ಖಾಲಿ ಕಾಟನ್ ಬಾಕ್ಸ್​ಗಳನ್ನು ತುಂಬಿಕೊಂಡು ಬರುತ್ತಿದ್ದರು. ಯಾರಿಗೂ ಅನುಮಾನ ಬರದಂತೆ ಆಂಧ್ರದ ವಿಶಾಕಪಟ್ಟಣದಿಂದ ಬೆಂಗಳೂರಿಗೆ ತರುತ್ತಿದ್ದರು.

ಸೀಕ್ರೇಟ್ ಕಂಪಾರ್ಟ್​​ಮೆಂಟ್ ಮೂಲಕ ಸಾವಿರಾರು ಕೆಜಿ ಗಾಂಜಾ ಸಪ್ಲೈ ಮಾಡುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಮಹಿಳಾ ರಕ್ಷಣಾ ದಳ ಅಖಾಡಕ್ಕಿಳಿದಿತ್ತು. ಮೂರು ವಾರಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ