ಕಾನ್ಪುರ: ಸದಾ ಮೊಬೈಲ್ನಲ್ಲಿ ಚಾಟ್ ಮಾಡುತ್ತಿದ್ದ 16 ವರ್ಷದ ಮಗಳಿಗೆ ಆಕೆಯ ತಾಯಿ ಬೈದಿದ್ದರಿಂದ ಬೇಸರಗೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ದೀಕ್ಷಾ ಎಂಬ 9ನೇ ತರಗತಿಯ ಬಾಲಕಿ ಗಂಗಾಪುರ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೃತ ಬಾಲಕಿಯ ಕುಟುಂಬದ ಸದಸ್ಯರ ಪ್ರಕಾರ, ಆ ಹುಡುಗಿ ತನ್ನ ಕೋಚಿಂಗ್ ಕ್ಲಾಸ್ನಿಂದ ಮನೆಗೆ ಬಂದವಳು ಮೊಬೈಲ್ ಫೋನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದಳು. ಅದರಿಂದ ಕೋಪಗೊಂಡ ಆಕೆಯ ತಾಯಿ ಅವಳನ್ನು ಗದರಿಸಿದಳು. ಇದರಿಂದ ಆಕೆ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಕುಳಿತಿದ್ದಳು. ಆ ದಿನ ರಾತ್ರಿ ಊಟಕ್ಕೆ ಕರೆಯಲು ತಾಯಿ ತನ್ನ ಮಗಳ ರೂಮಿಗೆ ಹೋಗಿ ನೋಡಿದಾಗ ಅವಳು ಫ್ಯಾನ್ಗೆ ನೇಣು ಹಾಕಿಕೊಂಡಿದ್ದಳು. ಆ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಳು.
ಇದನ್ನೂ ಓದಿ: ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆಗೆ ಶರಣು!
ಇತ್ತೀಚೆಗೆ ಸಣ್ಣಪುಟ್ಟ ವಿಷಯಕ್ಕೂ ಮಕ್ಕಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ತಿಂಗಳು ಕಾನ್ಪುರದ ಚಕೇರಿಯಲ್ಲಿ 10 ವರ್ಷದ ಬಾಲಕಿ ತನ್ನ ಅಕ್ಕನೊಂದಿಗೆ ಜಗಳವಾಡಿದ ನಂತರ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಅಕ್ಕನೊಂದಿಗೆ ಜಗಳವಾಡಿದ ನಂತರ 10 ವರ್ಷದ ಬಾಲಕಿ ಮನೆಯಿಂದ ಹೊರಗೆ ಓಡಿಬಂದಿದ್ದಳು. ಈ ವೇಳೆ ಅವರ ಸಂಬಂಧಿಕರು ಬಾಲಕಿಯನ್ನು ಹಿಡಿಯಲು ಯತ್ನಿಸಿದ್ದು, ಆಕೆ ಮನೆಯ ಸಮೀಪದ ರೈಲು ಹಳಿ ಮೇಲೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
Published On - 11:40 am, Mon, 24 October 22