ಚಂಡೀಗಢ: ಗಂಡ ಮತ್ತು ಮಕ್ಕಳ ಎದುರಲ್ಲೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನುಷ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಮೂವರು ಮಹಿಳೆಯರ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳು ಅವರ ಕುಟುಂಬದವರ ಮುಂದೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಆರೋಪಿಗಳು ಚಾಕುಗಳು ಮತ್ತು ಇತರ ಹರಿತವಾದ ಆಯುಧಗಳನ್ನು ಹಿಡಿದುಕೊಂಡು ಮನೆಗೆ ನುಗ್ಗಿದ್ದರು. ನಾಲ್ಕು ಕುಟುಂಬಗಳು ವಾಸಿಸುತ್ತಿದ್ದ ಮನೆಗೆ ನುಗ್ಗಿ ಅಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ನಂತರ ಆ ಮನೆಯಲ್ಲಿದ್ದ ಮೂವರು ಮಹಿಳೆಯರನ್ನು ಹಗ್ಗದಿಂದ ಕಟ್ಟಿ ಹಾಕಿ, ಅವರ ಗಂಡಂದಿರಿಗೆ ಚಾಕು ತೋರಿಸಿ ಹೆದರಿಸಿ, ಅವರೆದುರೇ ಅವರ ಹೆಂಡತಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಇದನ್ನೂ ಓದಿ: ಮಾವನಿಂದ ಸೊಸೆ ಮೇಲೆ ಅತ್ಯಾಚಾರ; ಹೆಂಡತಿಯನ್ನೇ ತಾಯಿ ಎಂದ ಗಂಡ!
ಚಾಕು ಹಿಡಿದು ಬಂದಿದ್ದ ಆರೋಪಿಗಳು ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಾಮೂಹಿಕ ಅತ್ಯಾಚಾರ ಸಂಭವಿಸಿದ ಸ್ಥಳದಿಂದ ಸುಮಾರು 1 ಕಿಮೀ ದೂರದಲ್ಲಿ ಬುಧವಾರ ತಡರಾತ್ರಿ ಮತ್ತೊಂದು ಘಟನೆ ನಡೆದಿದೆ. ಅಪರಿಚಿತರು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದು, ಆಕೆಯ ಪತಿಯ ಬಳಿಯಿದ್ದ ಹಣವನ್ನು ದೋಚಿಕೊಂಡು, ಆ ಮಹಿಳೆಯನ್ನು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಕೆಲಸಕ್ಕಿಟ್ಟಿದ್ದ ಯುವಕರಿಂದಲೇ ಭೀಕರವಾಗಿ ಕೊಲೆಯಾದ ಮಾಲೀಕ; ಆರೋಪಿಗಳು ಮಾಡಿದ್ದ ಖತರ್ನಾಕ್ ಪ್ಲ್ಯಾನ್ ಹೇಗಿತ್ತು ಗೊತ್ತಾ?
ಆರೋಪಿಗಳು ದಂಪತಿಯ ಮನೆಗೆ ಬಲವಂತವಾಗಿ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದರಿಂದ ಈ ಎರಡೂ ಘಟನೆಗಳನ್ನು ಒಂದೇ ತಂಡ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಎರಡೂ ಘಟನೆಗಳು ಒಂದೇ ಗ್ರಾಮದಲ್ಲಿ ನಡೆದಿವೆ. ಆದರೆ, ಈ ಎರಡೂ ಪ್ರಕರಣಗಳಲ್ಲಿ ಇನ್ನೂ ತನಿಖೆ ನಡೆಯುತ್ತಿದ್ದು, ಯಾರನ್ನೂ ಬಂಧಿಸಿಲ್ಲ.