ಹೈದರಾಬಾದ್: ಮಾನಸಿಕ ಅಸ್ವಸ್ಥಳಾಗಿದ್ದ ಮಗಳನ್ನು ಕೊಲೆ (Murder) ಮಾಡಿದ ಆರೋಪದ ಮೇಲೆ ತೆಲಂಗಾಣದ (Telangana) ಕರೀಂನಗರ ಜಿಲ್ಲೆಯಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ನೆರೆಲ್ಲದ ಚೆಪ್ಯಾಲ ನರಸಯ್ಯ (49) ಮತ್ತು ಅವರ ಪತ್ನಿ ಯಲ್ಲವ್ವ (43) ತಮ್ಮ 24 ವರ್ಷದ ಮಗಳು ಪ್ರಿಯಾಂಕಾಳನ್ನು ಕೊಂದು ಇದು ಸಹಜ ಸಾವು ಎಂದು ಎಲ್ಲರನ್ನೂ ನಂಬಿಸಿದ್ದರು. ಆದರೆ, ಪೊಲೀಸರಿಗೆ ಅದು ಸಹಜ ಸಾವಿನಂತೆ ಕಂಡಿರಲಿಲ್ಲ.
ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಮಹಿಳೆ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪ್ರಿಯಾಂಕಾಳಿಗೆ ಪೋಷಕರು ಚಿಕಿತ್ಸೆ ಕೊಡಿಸಿ ಮದುವೆ ಮಾಡಿದ್ದರು. ಆಕೆಗೆ 13 ತಿಂಗಳ ಮಗು ಕೂಡ ಇತ್ತು. ಮಗುವಾದ ನಂತರ ಪ್ರಿಯಾಂಕಾಗೆ ಮಾನಸಿಕ ಅಸ್ವಸ್ಥತೆ ಮರುಕಳಿಸಿದ್ದರಿಂದ ಆಕೆಗೆ ಮತ್ತೆ ಚಿಕಿತ್ಸೆ ಕೊಡಿಸಿ, ಸ್ವಾಮೀಜಿಗಳ ಬಳಿ ಕರೆದೊಯ್ದರೂ ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ: Shocking News: 1 ವರ್ಷದಿಂದ ಅತ್ಯಾಚಾರ; ಸ್ವಂತ ಅಣ್ಣಂದಿರಿಂದಲೇ ಗರ್ಭಿಣಿಯಾದ ಬಾಲಕಿ
ಇದರಿಂದ ಬೇಸರಗೊಂಡ ಪೋಷಕರು ಆಕೆಯ ಜೀವನವನ್ನು ಅಂತ್ಯಗೊಳಿಸಲು ಯೋಜಿಸಿದ್ದರು. ಮೇ 14ರಂದು ಆಕೆ ಮಗುವಿನೊಂದಿಗೆ ತಮ್ಮ ಮನೆಯಲ್ಲಿ ಮಲಗಿದ್ದಾಗ ಆಕೆಯ ಅಪ್ಪ- ಅಮ್ಮ ಇಬ್ಬರೂ ಹಗ್ಗದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವರು ಮಗಳು ಅಚಾನಕ್ಕಾಗಿ ಸಾವನ್ನಪ್ಪಿದ್ದಾಳೆ ಎಂದು ತಮ್ಮ ಅಳಿಯನಿಗೆ ತಿಳಿಸಿ ಮರುದಿನ ಅಂತ್ಯಕ್ರಿಯೆ ನಡೆಸಿದ್ದರು.
ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್ ಸಿಬಿಐಗೆ ಕೊಡಲ್ಲ: ಗೃಹ ಸಚಿವ ಪರಮೇಶ್ವರ್
ಆದರೆ, ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಪ್ರಿಯಾಂಕಾ ಸಾವಿನ ಬಗ್ಗೆ ಗ್ರಾಮಸ್ಥರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯ ವೇಳೆ ಆರಂಭದಲ್ಲಿ ಇದೊಂದು ಸಹಜ ಸಾವು ಎಂದೇ ಹೇಳಿದ ದಂಪತಿಗಳು ಕೊನೆಗೆ ತಾವೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡರು. ಆ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ