ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಯುವತಿಯನ್ನು ಕಿಡ್ನಾಪ್ ಮಾಡಿದ ಕಾರ್ಪೋರೆಟರ್? ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಯುವತಿ
ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಯುವತಿಯನ್ನು ಕಿಡ್ನಾಪ್ ಮಾಡಿದ ಆರೋಪ ಕಾರ್ಪೋರೆಟರ್ ವಿರುದ್ಧ ಕೇಳಿಬಂದಿದ್ದು, ನ್ಯಾಯಕ್ಕಾಗಿ ಯುವತಿ ಅಂಗಲಾಚುತ್ತಿದ್ದಾಳೆ.
ಹುಬ್ಬಳ್ಳಿ: ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಯುವತಿಯನ್ನು ಕಿಡ್ನಾಪ್ (Kidnap) ಮಾಡಿದ ಆರೋಪ ಕಾರ್ಪೋರೆಟರ್ ವಿರುದ್ಧ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗದ ಹಿನ್ನೆಲೆ ದಂಪತಿ, ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಸದ್ಯ ಕಾರ್ಪೋರೆಟರ್ ಚೇತನ ಹಿರೇಕೆರೂರು ಸೇರಿ ಮೂವರ ವಿರುದ್ದ ಕಿಡ್ನಾಪ್ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ.
ಮನೆಯವರ ವಿರೋಧವನ್ನು ಲೆಕ್ಕಿಸದೆ 7 ತಿಂಗಳ ಹಿಂದೆ ನಿಖಿಲ್ ದಾಂಡೇಲಿ ಎಂಬವರನ್ನು ಸಹನಾ ಮದುವೆಯಾಗಿದ್ದು, ಜೂನ್ 26ರಂದು ಆರಕ್ಷತೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಈ ಹಿನ್ನೆಲೆ ತಂದೆತಾಯಿಯ ಆಶೀರ್ವಾದ ಪಡೆಯಲು ತವರಿಗೆ ಹೋಗಿದ್ದಾಗ ಸಹನಾಳ ಕಿಡ್ನಾಪ್ ಆಗಿದೆ.
ಇದನ್ನೂ ಓದಿ: Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್..!
ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಬಳಿ ಪೋಷಕರನ್ನು ಭೇಟಿಯಾಗಲು ಹೋಗಿದ್ದಾಗ ಕಾರ್ಪೋರೆಟರ್ ಚೇತನ ಹೀರೇಕೆರೂರು, ಯುವತಿ ತಂದೆ ಶಿವು ಹೀರೆಕೇರೂರ ಮತ್ತು ಕುಟುಂಬದವರು ಸಹನಾಳನ್ನು ಕಿಡ್ನಾಪ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿಖಿಲ್ ಗೋಕುಲ ರೋಡ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿದ ಖಾಕಿ ಸುಮ್ಮನಾಗಿರುವ ಹಿನ್ನೆಲೆ ಜೀವಭಯದಲ್ಲೇ ನವದಂಪತಿ ಓಡಾಡುವಂತಾಗಿದೆ.
ಕಿಡ್ನಾಪ್ ಮಾಡಿ ಬೆದರಿಕೆ ಹಾಕಿದ್ದ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಕಿಡ್ನಾಪ್ ಮಾಸ್ಟರ್ ಮೈಂಡ್ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸುತ್ತಿರುವ ದಂಪತಿ, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ಅಲ್ಲದೆ ಮುಂದೆ ಯಾವುದೇ ಅನಾಹುತಗಳಿಗೆ ಪೊಲೀಸರೇ ಕಾರಣ ಎಂದು ಸಹನಾ ಮತ್ತು ನಿಖೀಲ್ ಹೇಳಿದ್ದಾರೆ.
ಗೋವಾದಲ್ಲಿ ಯುವತಿಯ ರಕ್ಷಣೆ, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು
ಕಿಡ್ನಾಪ್ ಪ್ರಕರಣ ಸಂಬಂಧ ಸಹನಾಳನ್ನು ಪೊಲೀಸರು ಗೋವಾದಿಂದ ರಕ್ಷಿಸಿ ಕರೆತಂದಿದ್ದಾರೆ. ದೂರು ನೀಡಿದ್ರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಆರೋಪ ಹಿನ್ನೆಲೆ ಪೊಲೀಸ್ ಆಯುಕ್ತರನ್ನು ಭೇಟಿಯಾದ ದಂಪತಿ, ತಮಗೆ ರಕ್ಷಣೆಗೆ ಕೊಡುವಂತೆ ಹಾಗೂ ಅಪಹರಣಕಾರರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಹುಬ್ಬಳ್ಳಿ ಧಾರವಾಡ ಪಾಲಿಕೆ ಕಾರ್ಪೋರೇಟರ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಯುವತಿಯ ಹೇಳಿಕೆಯನ್ನು ವಕೀಲರು ನ್ಯಾಯಾಧೀಶರ ಮುಂದೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಬಂಧನ
Published On - 8:21 am, Tue, 28 June 22