ಚೆನ್ನೈ: ತಾವು ನಿಶ್ಚಯ ಮಾಡಿದ ವ್ಯಕ್ತಿಯನ್ನು ಮದುವೆಯಾಗಲು (Wedding) ನಿರಾಕರಿಸಿದ 20 ವರ್ಷದ ಮಗಳನ್ನು ಆಕೆಯ ತಾಯಿಯೇ ಕತ್ತು ಹಿಸುಕಿ ಕೊಂದಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಯುವತಿ ಹಿಂದುಳಿದ ವರ್ಗದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗಲು ಬಯಸಿದ್ದಳು. ಆದರೆ, ಆಕೆಯ ಕುಟುಂಬದವರು ಅವಳನ್ನು ತಮ್ಮದೇ ಜಾತಿ, ತಮ್ಮ ಕುಟುಂಬದವರ ಜೊತೆ ಮದುವೆ ಮಾಡಲು ನಿರ್ಧರಿಸಿದ್ದರು. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನು ಹೆತ್ತ ತಾಯಿಯೇ ಕೊಲೆ ಮಾಡಿದ್ದಾರೆ. ತಮಿಳುನಾಡಿನಲ್ಲಿ (Tamil Nadu) ಈ ಘಟನೆ ನಡೆದಿದೆ.
ಇದೊಂದು ಮರ್ಯಾದಾ ಹತ್ಯೆಯ ಪ್ರಕರಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅರುಣಾ ಅವರ ತಂದೆ ಮತ್ತು ಅಣ್ಣ ಚೆನ್ನೈನಲ್ಲಿ ಆಟೋ ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ತಾಯಿ ತಿರುನಲ್ವೇಲಿಯಲ್ಲಿ ಆಕೆಯೊಂದಿಗೆ ವಾಸವಾಗಿದ್ದರು. ಮನೆಯಲ್ಲಿ ತಾಯಿ- ಮಗಳು ಇಬ್ಬರೇ ಇದ್ದಾಗ ಆಕೆ ತನ್ನ ಮಗಳ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಮಗಳನ್ನು ಕೊಂದ ನಂತರ ಆಕೆಯ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ ಆಕೆಯನ್ನು ಬಂಧಿಸಲಾಗಿದ್ದು, ತಾನು ಮಾಡಿದ ಕೊಲೆಯನ್ನು ಆಕೆ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Shraddha Murder Case: ಶ್ರದ್ಧಾ ಕೊಲೆ ಪ್ರಕರಣ; ಹಂತಕ ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ
ಅತ್ಯಂತ ಹಿಂದುಳಿದ ವರ್ಗಗಳ (ಎಂಬಿಸಿ) ಸಮುದಾಯಕ್ಕೆ ಸೇರಿದ ಮೃತ ಯುವತಿ ಈ ಮೊದಲು ಕೊಯಮತ್ತೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, 6 ತಿಂಗಳ ಹಿಂದೆ ಮನೆಗೆ ಮರಳಿದ್ದರು. ಆಕೆಯ ತಾಯಿ ತಾನು ಆಯ್ಕೆ ಮಾಡಿದ ಹುಡುಗನ್ನೇ ಮದುವೆಯಾಗಬೇಕೆಂದು ಒತ್ತಡ ಹೇರಿದ್ದರು. ಆಕೆ ತನ್ನ ಮಗಳಿಗಾಗಿ ನೋಡಿದ ಹುಡುಗ ನಿನ್ನೆ ಅರರುಣಾಳನ್ನು ನೋಡಲು ಬಂದಿದ್ದರು. ಆಗ ಅರುಣಾ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳು.
ಇದರಿಂದ ಕೋಪಗೊಂಡಿದ್ದ ಆಕೆಯ ತಾಯಿ ಮಗಳ ಜೊತೆ ಜಗಳವಾಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ನಡೆದ ತೀವ್ರ ವಾಗ್ವಾದ ನಡೆದು, ಅದೇ ಕೊಲೆಗೆ ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.