Shraddha Murder Case: ಶ್ರದ್ಧಾ ಕೊಲೆ ಪ್ರಕರಣ; ಹಂತಕ ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ

Delhi Murder: ಶ್ರದ್ಧಾಳನ್ನು ಕೊಂದು, ಕತ್ತರಿಸಿದ ಆರೋಪಿ ಅಫ್ತಾಬ್ ಪೂನಾವಾಲಾನ ಪಾಲಿಗ್ರಾಫ್ ಪರೀಕ್ಷೆಯನ್ನು ದೆಹಲಿ ಪೊಲೀಸರು ಇಂದು ನಡೆಸುವ ಸಾಧ್ಯತೆಯಿದೆ.

Shraddha Murder Case: ಶ್ರದ್ಧಾ ಕೊಲೆ ಪ್ರಕರಣ; ಹಂತಕ ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ
ಅಫ್ತಾಬ್ ಅಮೀನ್ ಪೂನಾವಾಲಾ- ಶ್ರದ್ಧಾ ವಾಕರ್
TV9kannada Web Team

| Edited By: Sushma Chakre

Nov 22, 2022 | 11:09 AM

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ (Shraddha Walkar) ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ಪೊಲೀಸ್ ಕಸ್ಟಡಿಯನ್ನು ಇನ್ನೂ 4 ದಿನಗಳವರೆಗೆ ವಿಸ್ತರಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ದೆಹಲಿಯ ಸಾಕೇತ್ ನ್ಯಾಯಾಲಯವು ಅಫ್ತಾಬ್ ಪೂನಾವಾಲಾನ (Aftab Poonawala) ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದೆ. ಮೂಲಗಳ ಪ್ರಕಾರ, ಅಫ್ತಾಬ್ ಪೂನಾವಾಲಾ ಶ್ರದ್ಧಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಾನು ಕೋಪದ ಭರದಲ್ಲಿ ಈ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.

ಶ್ರದ್ಧಾ ವಾಲ್ಕರ್ ಅವರನ್ನು 28 ವರ್ಷದ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೇಹದ ಭಾಗಗಳನ್ನು ಮಧ್ಯರಾತ್ರಿಯ ನಂತರ ನಗರದಾದ್ಯಂತ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರದ್ಧಾಳನ್ನು ಕೊಂದು, ಕತ್ತರಿಸಿದ ಆರೋಪಿ ಅಫ್ತಾಬ್ ಪೂನಾವಾಲಾನ ಪಾಲಿಗ್ರಾಫ್ ಪರೀಕ್ಷೆಯನ್ನು ದೆಹಲಿ ಪೊಲೀಸರು ಇಂದು ನಡೆಸುವ ಸಾಧ್ಯತೆಯಿದೆ.

ಕೊಲೆಯ ಆಯುಧ, ಶ್ರದ್ಧಾಳ ತಲೆಬುರುಡೆ, ಬಟ್ಟೆ ಮತ್ತು ಫೋನ್ ಅನ್ನು ವಶಪಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಇಲ್ಲಿಯವರೆಗೆ ಪೊಲೀಸರು ಕೆಲವು ಮೂಳೆಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಫ್ತಾಬ್‌ನನ್ನು ಮಂಗಳವಾರ ಮತ್ತೆ ವೀಡಿಯೊಗ್ರಫಿ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ವಸೂಲಾತಿ ಸ್ಥಳಗಳಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರ ಉಪಸ್ಥಿತಿಯು ಸಾಕ್ಷ್ಯವನ್ನು ಹಾಳುಮಾಡುತ್ತದೆ ಎಂದು ಆರೋಪಿಸಿದೆ. ಈ ಹತ್ಯೆ ನಡೆದ ಸ್ಥಳವನ್ನು ದೆಹಲಿ ಪೊಲೀಸರು ಇಲ್ಲಿಯವರೆಗೆ ಸೀಲ್ ಮಾಡಿಲ್ಲ. ಈ ಜಾಗಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮ ಸಿಬ್ಬಂದಿ ನಿರಂತರವಾಗಿ ಪ್ರವೇಶಿಸುತ್ತಿದ್ದಾರೆ.

ಇದನ್ನೂ ಓದಿ: Delhi Murder Case: ದೆಹಲಿ ಕೊಲೆ ಪ್ರಕರಣ; ಶ್ರದ್ಧಾಳ ದೇಹದ 13 ಭಾಗ ಪತ್ತೆ; ತಲೆ, ಹತ್ಯೆಯ ಆಯುಧಕ್ಕಾಗಿ ಹುಡುಕಾಟ

28 ವರ್ಷದ ಅಫ್ತಾಬ್ ಪೂನಾವಾಲಾ ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ತಮ್ಮ ಬಾಡಿಗೆ ನಿವಾಸದಲ್ಲಿ ಶ್ರದ್ಧಾ ವಾಕರ್‌ ಎಂಬ ಯುವತಿಯನ್ನು ಕೊಂದಿದ್ದ. ಶ್ರದ್ಧಾಳನ್ನು ಕೊಂದ ಬಳಿಕ ಅಫ್ತಾಬ್ ಆಕೆಯ ದೇಹದ ಭಾಗಗಳನ್ನು 35 ಭಾಗ ಮಾಡಿ, 18 ದಿನಗಳ ಕಾಲ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಶೆಫ್ ಆಗಿದ್ದ ಅಫ್ತಾಬ್ ಫುಡ್ ಬ್ಲಾಗ್ ಕೂಡ ನಡೆಸುತ್ತಿದ್ದ. ಶ್ರದ್ಧಾಳನ್ನು ಕೊಂದ ಬಳಿಕ ಆಕೆಯ ದೇಹವನ್ನು ತುಂಡು ಮಾಡಲು ಒಂದೂವರೆ ಅಡಿ ಉದ್ದದ ದೊಡ್ಡ ಚಾಕುವನ್ನು ತೆಗೆದುಕೊಂಡು ಬಂದಿದ್ದ. ಬಳಿಕ ಆ ಹೆಣದ ಪೀಸ್​ಗಳನ್ನು ಫ್ರಿಡ್ಜ್​ನಲ್ಲಿ ಇರಿಸಿದ್ದ. ಅದಕ್ಕೆಂದೇ 300 ಲೀಟರ್​ನ ಹೊಸ ಫ್ರಿಡ್ಜ್​ ಕೂಡ ಖರೀದಿಸಿದ್ದ.

ಡೇಟಿಂಗ್ ಆ್ಯಪ್​ನಲ್ಲಿ ಶ್ರದ್ಧಾಳಿಗೆ ಪರಿಚಯವಾಗಿದ್ದ ಅಫ್ತಾಬ್ ಇದಕ್ಕೂ ಮೊದಲು ಹಲವು ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ, ಆತನ ಮೇಲೆ ಅನುಮಾನಗೊಂಡು ತನ್ನನ್ನು ಮದುವೆಯಾಗೆಂದು ಶ್ರದ್ಧಾ ಒತ್ತಾಯಿಸುತ್ತಿದ್ದಳು. ಆದರೆ, ಅದಕ್ಕೆ ಅಫ್ತಾಬ್ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್​ ಡೆಕ್ಸ್ಟರ್ ಸೇರಿದಂತೆ ಅನೇಕ ಕ್ರೈಂ ಸಿನಿಮಾಗಳನ್ನು ನೋಡಿದ್ದ ಅಫ್ತಾಬ್​ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಬಿಸಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದ.

ಇದನ್ನೂ ಓದಿ: Shraddha Walkar Murder: ಇನ್ನೂ ಪತ್ತೆಯಾಗಿಲ್ಲ ಶ್ರದ್ಧಾಳ ತಲೆ, ಮೊಬೈಲ್; ಅಫ್ತಾಬ್ ವಿರುದ್ಧ ಪೊಲೀಸರಿಗೆ ಸಿಕ್ಕಿರುವ ಸಾಕ್ಷಿಗಳಿವು

ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದ ನಂತರ ಆಕೆಯ ಶವವನ್ನು ಇಟ್ಟುಕೊಂಡು ಅದೇ ರೂಮಿನಲ್ಲಿ ಒಂದು ದಿನವನ್ನು ಕಳೆದಿದ್ದ. ಮಾರನೇ ದಿನ ಹೊಸ ಫ್ರಿಡ್ಜ್ ಖರೀದಿಸಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಆ ಫ್ರಿಡ್ಜ್​ನಲ್ಲಿ ಇರಿಸಿದ್ದ. ನಂತರ 18 ದಿನಗಳವರೆಗೆ ಪ್ರತಿ ರಾತ್ರಿ 12 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಿ, ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಆಕೆಯ ದೇಹದ ಒಂದೊಂದೇ ಭಾಗಗಳನ್ನು ಬಿಸಾಡಿ ಬರುತ್ತಿದ್ದ. 18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್​ನಲ್ಲಿ ಇಟ್ಟಿದ್ದರಿಂದ ಮತ್ತು ಮನೆಯಲ್ಲಿ ಸ್ವಲ್ಪ ರಕ್ತದ ವಾಸನೆ ಹಾಗೇ ಉಳಿದಿದ್ದರಿಂದ ಮನೆಯ ವಾಸನೆಯನ್ನು ಕಡಿಮೆ ಮಾಡಲು ರೂಂ ಫ್ರೆಷನರ್​ಗಳನ್ನು ತಂದಿದ್ದ. ಹಾಗೇ, ದಿನವೂ ಊದುಬತ್ತಿ ಹೊತ್ತಿಸಿ ಇಡುತ್ತಿದ್ದ.

ಕೊಲೆ ವಿಷಯ ಬಯಲಾಗಿದ್ದು ಹೇಗೆ?:

ಮಹಾರಾಷ್ಟ್ರದ ಪಾಲ್ಘರ್ ನಿವಾಸಿಯಾದ ಶ್ರದ್ಧಾಳ ತಂದೆ ವಿಕಾಸ್ ಮದನ್ ವಾಕರ್ ನವೆಂಬರ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳು ಮೇ ತಿಂಗಳಿಂದ ನಾಪತ್ತೆಯಾಗಿದ್ದಾಳೆ, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರು ನೀಡಿದ್ದರು. ಅದರ ಬೆನ್ನತ್ತಿ ತನಿಖೆ ಮಾಡಲಾರಂಭಿಸಿದ ಪೊಲೀಸರಿಗೆ ನಿಗೂಢ ಕೊಲೆಯ ಸುಳಿವು ಸಿಕ್ಕಿತ್ತು. ಆರಂಭಿಕ ತನಿಖೆಯಲ್ಲಿ ಶ್ರದ್ಧಾಳ ಮೊಬೈಲ್ ಕೊನೆಯ ಬಾರಿ ಎಲ್ಲಿ ಸಿಗ್ನಲ್ ಸಿಕ್ಕಿದೆ ಎಂಬುದು ಪತ್ತೆಯಾಗಿತ್ತು.  ಆ ತನಿಖೆಯ ಸಂದರ್ಭದಲ್ಲಿ ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಗೆ ಬಂದು ಛತ್ತರ್‌ಪುರ ಪಹಾಡಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್​ಮೆಂಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಗೊತ್ತಾಗಿತ್ತು. ಅಲ್ಲಿ ಹೋಗಿ ಅಫ್ತಾಬ್​ನನ್ನು ವಿಚಾರಣೆ ಮಾಡಿದಾಗ ಆತ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಮೇ ತಿಂಗಳಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada