Shocking News: ತುಂಬು ಗರ್ಭಿಣಿಯನ್ನು ಅಡ್ಮಿಟ್ ಮಾಡಿಕೊಳ್ಳಲು ಒಪ್ಪದ ಆಸ್ಪತ್ರೆ; ರಸ್ತೆಯಲ್ಲೇ ಮಹಿಳೆಗೆ ಹೆರಿಗೆ!
ಗರ್ಭಿಣಿಯ ಜೊತೆಗೆ ಬೇರಾರೂ ಇಲ್ಲ ಎಂಬ ಕಾರಣಕ್ಕೆ ತಿರುಪತಿಯ ಹೆರಿಗೆ ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಅಷ್ಟರಲ್ಲಾಗಲೇ ನೋವು ಹೆಚ್ಚಾಗಿದ್ದರಿಂದ ರಸ್ತೆಯಲ್ಲೇ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ.
ತಿರುಪತಿ: ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಯನ್ನು (Pregnant Woman) ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ, ಮಹಿಳೆಯೊಬ್ಬರು ಹೆರಿಗೆ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡುತ್ತಿರುವ ಹೃದಯ ವಿದ್ರಾವಕ ವಿಡಿಯೋವೊಂದು (Shocking Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಅಮಾನವೀಯ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ (Tirupati) ನಡೆದಿದೆ.
ಗರ್ಭಿಣಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಾರಣದಿಂದ ಆಕೆಯನ್ನು ತಿರುಪತಿಯ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, 100 ಹಾಸಿಗೆಗಳ ತಿರುಪತಿ ಹೆರಿಗೆ ಆಸ್ಪತ್ರೆಯಲ್ಲಿ ಬೆಡ್ ಇದ್ದರೂ ಆ ಮಹಿಳೆಯ ಜೊತೆಯಲ್ಲಿ ಯಾರೂ ಬರದ ಕಾರಣದಿಂದ ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳಲು ಆಸ್ಪತ್ರೆಯ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಿ ಆಕೆಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಆಸ್ಪತ್ರೆ ಎದುರಿನ ರಸ್ತೆಯಲ್ಲೇ ಸ್ಥಳೀಯರು ಸೇರಿ ಹೆರಿಗೆ ಮಾಡಿಸಿದ್ದಾರೆ.
ಇದನ್ನೂ ಓದಿ: Viral Video: ನೃತ್ಯ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ಯುವಕ; ಮೊಬೈಲ್ನಲ್ಲಿ ಸೆರೆಯಾಯ್ತು ಶಾಕಿಂಗ್ ವಿಡಿಯೋ
ಮಹಿಳೆಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಡ್ಮಿಟ್ ಆಗಲು ಆಸ್ಪತ್ರೆಯವರು ಅನುಮತಿ ನಿರಾಕರಿಸಿದ ನಂತರ ಆಕೆ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಆಗ ನೋವಿನಿಂದ ಕಿರುಚಲು ಪ್ರಾರಂಭಿಸಿದ್ದಾರೆ. ತಕ್ಷಣ ಅಕ್ಕಪಕ್ಕದಲ್ಲಿದ್ದವರು ಆಕೆಯ ಸಹಾಯಕ್ಕಾಗಿ ಧಾವಿಸಿದ್ದಾರೆ. ರಸ್ತೆಯಲ್ಲೇ ಆಕೆಯನ್ನು ಮಲಗಿಸಿ, ಆಕೆಯ ಮೇಲೆ ಬೆಡ್‌ಶೀಟ್ ಮುಚ್ಚಿ ಹೆರಿಗೆ ಮಾಡಿಸಲಾಗಿದೆ. ಅಷ್ಟು ತುರ್ತು ಪರಿಸ್ಥಿತಿಯಲ್ಲೂ ಆಸ್ಪತ್ರೆಯವರು ಬೇಜವಾಬ್ದಾರಿತನದಿಂದ ವರ್ತಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಪ್ರಾಥಮಿಕವಾಗಿ ಆರೋಗ್ಯ ಕೇಂದ್ರದ ಕೆಲಸಗಾರನಾಗಿದ್ದ ವ್ಯಕ್ತಿಯ ಸಹಾಯದಿಂದ ಆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಇತರೆ ಮಹಿಳೆಯರು ಬೆಡ್‌ಶೀಟ್ ಹಿಡಿದು ಗರ್ಭಿಣಿಯನ್ನು ಮುಚ್ಚುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದಾದ ನಂತರ ಸಾರ್ವಜನಿಕರು ಗಲಾಟೆ ಮಾಡಿ, ಆಸ್ಪತ್ರೆಯವರಿಗೆ ಛೀಮಾರಿ ಹಾಕಿದ್ದರಿಂದ ಆ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದೃಷ್ಟವಶಾತ್ ತಾಯ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ: ಅಸ್ಸಾಂ: ಹೆರಿಗೆ ದಿನಾಂಕಕ್ಕೆ 3 ತಿಂಗಳ ಮುನ್ನವೇ ಗರ್ಭಿಣಿಗೆ ಸಿ ಸೆಕ್ಷನ್ ಮಾಡಿ ಮತ್ತೆ ಹೊಲಿಗೆ ಹಾಕಿದ ವೈದ್ಯರು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಸಿಬ್ಬಂದಿ, ಆ ಮಹಿಳೆ ನಮ್ಮ ಆಸ್ಪತ್ರೆಯ ವೈದ್ಯರ ಬಳಿ ತೋರಿಸುತ್ತಿರಲಿಲ್ಲ. ಹೀಗಾಗಿ, ಆಕೆಗೆ ಹೆರಿಗೆ ನೋವು ಬಂದಿದೆ ಎಂಬುದು ನಮಗೆ ಗೊತ್ತಿರಲಿಲ್ಲ ಎಂದಿದ್ದಾರೆ. ತಿರುಪತಿಯ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀಹರಿ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ಗರ್ಭಿಣಿ ಮಹಿಳೆಯ ಜೊತೆ ಯಾವುದೇ ಅಟೆಂಡರ್ ಇಲ್ಲದಿದ್ದರೂ ಗರ್ಭಿಣಿಯರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ ಎಂದು ಶ್ರೀಹರಿ ಹೇಳಿದ್ದಾರೆ.