ಅಸ್ಸಾಂ: ಹೆರಿಗೆ ದಿನಾಂಕಕ್ಕೆ 3 ತಿಂಗಳ ಮುನ್ನವೇ ಗರ್ಭಿಣಿಗೆ ಸಿ ಸೆಕ್ಷನ್ ಮಾಡಿ ಮತ್ತೆ ಹೊಲಿಗೆ ಹಾಕಿದ ವೈದ್ಯರು
ಆ.21ರಂದು ಅಸ್ವಸ್ಥಗೊಂಡ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಆಕೆಯನ್ನು ಅಬ್ಸರ್ವೇಷನ್‌ನಲ್ಲಿಟ್ಟ ನಂತರ, ಡಿಸೆಂಬರ್ ಆರಂಭದಲ್ಲಿ ಮಗುವಿಗೆ ಜನ್ಮ ನೀಡುವುದಾಗಿ ತಿಳಿದಿದ್ದರೂ...
ಕರೀಂಗಂಜ್: ಅಸ್ಸಾಂ (Assam) ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗತಜ್ಞರೊಬ್ಬರು ಗರ್ಭಿಣಿಗೆ ನಿಗದಿತ ಹೆರಿಗೆ ದಿನಾಂಕಕ್ಕಿಂತ ಮೂರೂವರೆ ತಿಂಗಳ ಮೊದಲು ಸಿಸೇರಿಯನ್ (caesarean section) ಅಥವಾ ಸಿ-ಸೆಕ್ಷನ್ ಮಾಡಿದ್ದಾರೆ. ಸಿಸೇರಿಯನ್ ಮಾಡಿದ ನಂತರ ಭ್ರೂಣ ಅಪಕ್ವವಾಗಿದೆ ಎಂದು ತಿಳಿದು ಮತ್ತೆ ಹೊಲಿಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕರೀಮ್‌ಗಂಜ್ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಸತ್ಯಾಂಶಗಳನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ವೈದ್ಯರು ಈ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಈ ಬಗ್ಗೆ ಯಾರೊಂದಿಗೂ ಚರ್ಚಿಸದಂತೆ ಮಹಿಳೆಯ ಕುಟುಂಬದಲ್ಲಿ ಕೇಳಿಕೊಂಡಿದ್ದಾರೆ. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ರೋಗಿಯ ಆರೋಗ್ಯವು ಹದಗೆಟ್ಟಾಗ ಆಕೆಯ ಸಂಬಂಧಿಕರು ಮತ್ತು ನೆರೆಹೊರೆಯವರು ಈ ಬಗ್ಗೆ ವಿಚಾರಿಸಿದ್ದಾರೆ. ಇಂತಹ ಘಟನೆಯ ವರದಿಯನ್ನು ನಾವು ಸ್ವೀಕರಿಸಿದ್ದೇವೆ. ನಾವು ಸತ್ಯವನ್ನು ತಿಳಿಯಲು ನಾವು ವಿಚಾರಣೆ ನಡೆಸುತ್ತಿದ್ದೇವೆ. ವೈದ್ಯರು ಅಥವಾ ಬೇರೆಯವರ ವಿರುದ್ಧ ಯಾವುದೇ ತಪ್ಪು ಕಂಡುಬಂದಲ್ಲಿ, ತನಿಖಾ ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪರಿಶೀಲಿಸಲು 11 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಶುಕ್ರವಾರ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ನಾವು ಪ್ರಾಥಮಿಕ ವರದಿಯನ್ನು ಗುವಾಹಟಿಯ ಆರೋಗ್ಯ ಇಲಾಖೆಗೆ ರವಾನಿಸಿದ್ದೇವೆ. ನಾವು ಸಂಪೂರ್ಣ ವರದಿಯ ಸಲ್ಲಿಕೆಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದರು. ಆ.21ರಂದು ಅಸ್ವಸ್ಥಗೊಂಡ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಆಕೆಯನ್ನು ಅಬ್ಸರ್ವೇಷನ್‌ನಲ್ಲಿಟ್ಟ ನಂತರ, ಡಿಸೆಂಬರ್ ಆರಂಭದಲ್ಲಿ ಮಗುವಿಗೆ ಜನ್ಮ ನೀಡುವುದಾಗಿ ತಿಳಿದಿದ್ದರೂ, ವೈದ್ಯರು ಯಾವುದೇ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸದೆ ಆಗಸ್ಟ್ 23 ರಂದು ಸಿ-ಸೆಕ್ಷನ್‌ಗೆ ಹೋಗಲು ನಿರ್ಧರಿಸಿದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಇದರಿಂದ ಕುಪಿತಗೊಂಡ ಕುಟುಂಬಸ್ಥರು ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತನಿಖೆಗೆ ಆದೇಶಿಸಿದ್ದಾರೆ.ಸದ್ಯ ಮಹಿಳೆಯನ್ನು ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಮಹಿಳೆಯ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಭ್ರೂಣವು ಹಾನಿಗೊಳಗಾಗಿಲ್ಲ ಎಂದು ತಿಳಿದುಬಂದಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.