ಗಂಡ ನೀಡುತ್ತಿದ್ದ ಹಿಂಸೆಯಿಂದ ಬೇಸತ್ತ ‘ಕಿಲ್ಲರ್ ಸ್ಯಾಲಿ’  ಅವನನ್ನು ಗುಂಡಿಟ್ಟು ಕೊಂದು ಪೊಲೀಸರಿಗೆ ಫೋನ್ ಮಾಡಿದಳು!

ಆತ್ಮರಕ್ಷಣೆ ಗಾಗಿ ಗುಂಡು ಹಾರಿಸಬೇಕಾಯಿತು ಅಂತ ಸ್ಯಾಲಿ ವಾದಿಸಿದ್ದನ್ನು ಕೋರ್ಟ್ ಅಂಗೀಕರಿಸಲೇ ಇಲ್ಲ. ಸಾಮು ಮಾಡಿದ ಅವಳ ದೇಹ ಮತ್ತು ರೆಸ್ಲಿಂಗ್ ವೃತ್ತಿಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಅವಳ ವಿರುದ್ಧ ಹಿಂಸಾಚಾರ ನಡೆಯುವುದು ಸಾಧ್ಯವೇ ಇಲ್ಲ ಎಂದು ಹೇಳಿತು.

ಗಂಡ ನೀಡುತ್ತಿದ್ದ ಹಿಂಸೆಯಿಂದ ಬೇಸತ್ತ 'ಕಿಲ್ಲರ್ ಸ್ಯಾಲಿ'  ಅವನನ್ನು ಗುಂಡಿಟ್ಟು ಕೊಂದು ಪೊಲೀಸರಿಗೆ ಫೋನ್ ಮಾಡಿದಳು!
ಕಿಲ್ಲರ್ ಸ್ಯಾಲಿ ಮತ್ತು ಅವಳ ಗಂಡ ರೇ ಮ್ಯಾಕ್ನೀಲ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 25, 2022 | 7:58 AM

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ಅಮೇರಿಕದ ಮಹಿಳಾ ಪಾತಕಿ ಮತ್ತು ಬಾಡಿ ಬಿಲ್ಡರ್ ಆಗಿದ್ದ ಸ್ಯಾಲಿ ಮ್ಯಾಕ್ನೀಲ್ (Sally MacNeil) ಕತೆಯನ್ನು ನಿಮಗೆ ಹೇಳುತ್ತಿದ್ದೇವೆ. 1995 ರ ವ್ಯಾಲೆಂಟೈನ್ಸ್ ದಿನದಂದು ಈಕೆ ತನ್ನ ಪತಿ ರೇ ಮ್ಯಾಕ್ನೀಲ್ ನನ್ನು (Ray McNeil) ಗುಂಡಿಟ್ಟು ಕೊಂದಿದ್ದಳು. ಈಕೆಯ ಬದುಕನ್ನಾಧರಿತ ಕ್ರೈಮ್ ಡಾಕ್ಯುಮೆಂಟರಿ ‘ಕಿಲ್ಲರ್ ಸ್ಯಾಲಿ’ (Killer Sally) ಇತ್ತೀಚಿಗೆ ನೆಟ್ ಫ್ಲಿಕ್ಸ್ ಸ್ಟ್ರೀಮಿಂಗ್ ಸರ್ವಿಸ್ ನಲ್ಲಿ ಬಿತ್ತರಗೊಂಡಿತ್ತು. ಸ್ಯಾಲಿ ಯಾರು, ಯಾಕೆ ಗಂಡನನ್ನು ಕೊಂದಳು, ಅವಳು ಅಪರಾಧವೆಸಗಿದಾಗ ಕೇವಲ 12 ಮತ್ತು 9 ವರ್ಷದವರಾಗಿದ್ದ ಅವಳ ಮಕ್ಕಳು ಜಾನ್ ಮತ್ತು ಶಾಂಟಿನಾ ಈಗ ಏನು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಬಾಲ್ಯ ಕೆಟ್ಟದ್ದಾಗಿತ್ತು!

1960ರಲ್ಲಿ ಅಮೆರಿಕ ಪೆನ್ಸಿಲ್ವೇನಿಯಾದ ಅಲ್ಲೆನ್ ಟೌನ್ ನಲ್ಲಿ ಜನಿಸಿದ ಸ್ಯಾಲಿಯ ಬಾಲ್ಯ ಸುಖಕರವಾಗಿರಲಿಲ್ಲ. ಅವಳ ಮನೆಯಲ್ಲಿ ಅದೆಷ್ಟು ಹಿಂಸಾಚಾರ ನಡೆಯುತ್ತಿದ್ದೆಂದರೆ ಎಲ್ಲ ಮನೆಗಳ ಸ್ಥಿತಿ ಹಾಗೆಯೇ ಇರುತ್ತದೆ ಅವಳು ಅಂದುಕೊಂಡುಬಿಟ್ಟಿದ್ದಳು.

ಆ ಸ್ಥಿತಿಯ ಹಿನ್ನೆಲೆಯಲ್ಲೇ ಅವಳು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದರೆ, ಸದೃಢಳಾಗಬೇಕು, ಗಟ್ಟಿಗಿತ್ತಿಯಾಗಿರಬೇಕು ಎಂದು ನಿಶ್ಚಯಿಸಿಕೊಂಡು ಯುಎಸ್ ಮರೀನ್ಸ್ ನಲ್ಲಿ ಹೆಸರು ನೋಂದಾಯಿಸಿಕೊಂಡ ಬಳಿಕ ಬಾಡಿ ಬಿಲ್ಡಿಂಗ್ ನಲ್ಲಿ ತನ್ನನ್ನು ತೊಡಗಿಸಿಕೊಂಡಳು. ಆ ಸಮಯದಲ್ಲೇ ಅವಳು ರೇ ಮ್ಯಾಕ್ನೀಲ್ ನನ್ನು ಭೇಟಿಯಾಗಿದ್ದು.

ಮ್ಯಾಕ್ನೀಲ್  ಸ್ಯಾಲಿಗೆ ಎರಡನೇ ಗಂಡ

ಅದಾಗಲೇ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದ ಸ್ಯಾಲಿ ಮ್ಯಾಕ್ನೀಲ್ ಜೊತೆ ಪ್ರೇಮಪಾಶದಲ್ಲಿ ಸಿಲುಕಿದಳು. ಅವನು ತನ್ನ ಅದ್ಭುತ ಸಂಗಾತಿಯಾಗುವುದರ ಜೊತೆಗೆ ಮಕ್ಕಳಿಗೆ ಉತ್ತಮ ಮಲತಂದೆ ಆಗುತ್ತಾನೆಂದು ಸ್ಯಾಲಿ ಭಾವಿಸಿದ್ದಳು. ಅವನೊಂದಿಗೆ ಕೆಲದಿನ ರೋಮಾನ್ಸ್ ನಡೆಸಿದ ನಂತರ 1987ರಲ್ಲಿ ಮದುವೆಯಾಗಿಬಿಟ್ಟಳು. ತನ್ನ ಸಂಸಾರ ಇನ್ನು ನೆಟ್ಟಗಾಯಿತು ಎಂದು ಭಾವಿಸಿದ್ದವಳಿಗೆ ಮದುವೆಯಾದ ಕೇವಲ ಮೂರನೇ ದಿನಕ್ಕೆ ಕಟುವಾಸ್ತವ ಎದುರಾಯಿತು. ಹೌದು, ಮೂರು ದಿನಗಳ ನಂತರ ಮ್ಯಾಕ್ನೀಲ್ ತನ್ನ ನಿಜ ಬಣ್ಣ ತೋರಲಾರಂಭಿಸಿ ಸ್ಯಾಲಿ ಮತ್ತು ಅವಳ ಇಬ್ಬರು ಮಕ್ಕಳನ್ನು ಹಿಂಸಿಸತೊಡಗಿದ್ದ.

ಮಿಲಿಟರಿ ಸೇವೆಯಿಂದ ನಿವೃತ್ತಳಾದ ನಂತರ ಸ್ಯಾಲಿ ರೆಸ್ಲಿಂಗ್ ನಲ್ಲಿ ವೃತ್ತಿ ಬದುಕು ಪ್ರಾರಂಭಿಸಿದಳು. ಅಲ್ಲಿ ಅವಳಿಗೆ ಪ್ರತಿಗಂಟೆಗೆ ಸುಮಾರು 2,500 ರೂ. ಸಂಭಾವನೆ ಸಿಗುತಿತ್ತು. ಆಗಲೇ ಜನ ಅವಳನ್ನು ‘ಕಿಲ್ಲರ್ ಸ್ಯಾಲಿ’ ಎಂದು ಕರೆಯತೊಡಗಿದ್ದರು. ಅವಳ ಗಳಿಕೆ ಹೆಚ್ಚಾದಾಗ ಮ್ಯಾಕ್ನೀಲ್ ಮರೀನ್ಸ್ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ಬಾಡಿ ಬಿಲ್ಡಿಂಗ್ ನಲ್ಲಿ ವೃತ್ತಿ ಬದುಕು ರೂಪಿಸಿಕೊಳ್ಳಲಾರಂಭಿಸಿದ. ದೇಹ ಸಾಮು ಮಾಡಿಕೊಳ್ಳುವ ಭರದಲ್ಲಿ ಅವನು ಅನಾಬೊಲಿಕ್ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುತ್ತಿದ್ದಿದ್ದು ಸ್ಯಾಲಿಯಲ್ಲಿ ಅಸಮಾಧಾನ ಉಂಟು ಮಾಡಿತ್ತು.

ತುಟಿ ಹರಿಯುವಂತೆ ಹೊಡೆದಿದ್ದ!

ಅವನಲ್ಲಿ ಹಿಂಸಾ ಪ್ರವೃತ್ತಿ ಹುಟ್ಟಲು ಅದೇ ಕಾರಣವಾಗಿತ್ತು ಎಂದು ಸ್ಯಾಲಿ ಭಾವಿಸಿದ್ದಳು. ಒಮ್ಮೆ ಅವನು ಸ್ಯಾಲಿಯ ತುಟಿ ಹರಿದು ಮೂಗು ಮುರಿಯುವ ಹಾಗೆ ಹೊಡೆದಿದ್ದ. ಸ್ಯಾಲಿ ಮನೆಯಲ್ಲಿರದ ಸಮಯದಲ್ಲಿ ಮ್ಯಾಕ್ನೀಲ್, ಅವಳ ಮಕ್ಕಳ ಮೇಲೂ ಹಲ್ಲೆ ನಡೆಸುತ್ತಿದ್ದ.

ಅದೊಂದು ದಿನ ಅವಳ ತಾಳ್ಮೆ ಕಟ್ಟೆಯೊಡೆದಿತ್ತು. ಫೆಬ್ರುವರಿ 14, 1995 ರಂದು ಖುದ್ದು ಅವಳೇ 911 ಗೆ ಕಾಲ್ ಮಾಡಿ, ‘ ನನ್ನ ಗಂಡ ನನ್ನನ್ನು ಹೊಡೆದಿದ್ದರಿಂದ ಅವನನ್ನು ಗುಂಡಿಟ್ಟು ಕೊಂದಿದ್ದೇನೆ!’ ಎಂದು ಹೇಳಿದಳು. ಮ್ಯಾಕ್ನೀಲ್ ಬೇರೆ ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿದಾಗ ಅವನು ಆವೇಶಕ್ಕೊಳಗಾದವರಂತೆ ತನ್ನನ್ನು ಹೊಡೆಯತೊಡಗಿದ್ದರಿಂದ ಆತ್ಮರಕ್ಷಣೆಗಾಗಿ ಅವನ ಮೇಲೆ ಗುಂಡು ಹಾರಿಸಿದೆ ಎಂದು ಸ್ಯಾಲಿ ಪೊಲೀಸರಿಗೆ ತಿಳಿಸಿದಳು ಮತ್ತು ವಿಚಾರಣೆ ನಡೆಯುವ ಸಂದರ್ಭದಲ್ಲೂ ಅದೇ ಮಾತನ್ನು ಪುನರಾವರ್ತಿಸಿದಳು.

ಸ್ಯಾಲಿ ಕೌಟುಂಬಿಕ ಹಿಂಸೆಗೆ ಒಳಗಾಗುವುದು ಸಾಧ್ಯವಿಲ್ಲ?

ಪೊಲೀಸರು ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ, ‘ಮ್ಯಾಕ್ನೀಲ್ ಸ್ಯಾಲಿಯ ಕೆನ್ನೆಗೆ ಬಾರಿಸಿದ, ಅವಳನ್ನು ನೆಲಕ್ಕೆ ಕೆಡವಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಲಾರಂಭಿಸಿದ. ನಂತರ ಅವನು ಬೆಡ್ರೂಮಿಗೆ ಹೋಗಿ ಸ್ಯಾಲಿಯ ಶಾಟ್ ಗನ್ ಹಿಡಿದು ಹೊರಬಂದ.’

ಆದರೆ ಅವನಿಂದ ಗನ್ ಕಸಿದುಕೊಂಡ ಸ್ಯಾಲಿ ಅವನ ಮೇಲೆ ಎರಡು ಬಾರಿ ಗುಂಡು ಹಾರಿಸಿದಳು: ಒಮ್ಮೆ ಹೊಟ್ಟೆಗೆ ಮತ್ತೊಮ್ಮೆ ಅವನ ದವಡೆಗೆ.

Ray McNeill

ರೇ ಮ್ಯಾಕ್ನೀಲ್

ಆತ್ಮರಕ್ಷಣೆ ಗಾಗಿ ಗುಂಡು ಹಾರಿಸಬೇಕಾಯಿತು ಅಂತ ಸ್ಯಾಲಿ ವಾದಿಸಿದ್ದನ್ನು ಕೋರ್ಟ್ ಅಂಗೀಕರಿಸಲೇ ಇಲ್ಲ. ಸಾಮು ಮಾಡಿದ ಅವಳ ದೇಹ ಮತ್ತು ರೆಸ್ಲಿಂಗ್ ವೃತ್ತಿಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಅವಳ ವಿರುದ್ಧ ಹಿಂಸಾಚಾರ ನಡೆಯುವುದು ಸಾಧ್ಯವೇ ಇಲ್ಲ ಎಂದು ಹೇಳಿತು.

19-ವರ್ಷ ಸೆರೆವಾಸದ ಶಿಕ್ಷೆ!

1996ರಲ್ಲಿ ಸ್ಯಾಲಿ ಎರಡನೇ-ಡಿಗ್ರಿ ಹತ್ಯೆ ನಡೆಸಿದ ಅಪರಾಧಿ ಅಂತ ಸಾಬೀತಾಗಿ ಕೋರ್ಟ್ ಅವಳಿಗೆ 19-ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು.

ಶಿಕ್ಷೆಯ ಅವಧಿಯಲ್ಲಿ ಅವಳು ಪರೋಲ್ ಗಾಗಿ ಸಲ್ಲಿಸಿದ ಮನವಿಗಳು ತಿರಸ್ಕೃತಗೊಂಡವು. 2004 ರಲ್ಲಿ ಅವಳ ಶಿಕ್ಷೆಯ ಅವಧಿ ಪರಿಷ್ಕರಣೆಗೊಂಡು 25 ವರ್ಷಗಳಿಗೆ ಹೆಚ್ಚಿಸಲಾಯಿತು. ಅಂತಿಮವಾಗಿ, ಸ್ಯಾಲಿಯನ್ನು ನವೆಂಬರ್ 2, 2020 ರಂದು ಪರೋಲ್ ಮೇಲೆ ಬಿಡುಗಡೆ ಮಾಡಲಾಯಿತು.

ಜೈಲಿನಿಂದ ಹೊರಬಂದ ನಂತರ ಸ್ಯಾಲಿ ಕ್ಯಾಲಿಫೋರ್ನಿಯಾದ ವೆಟೆರನ್ಸ್ ಟ್ರಾನ್ಸಿಷನ್ ಸೆಂಟರ್ ನಲ್ಲಿ (ವಿಟಿಸಿ) ವಾಸವಾಗಿದ್ದುಕೊಂಡು ಗೋದಾಮೊಂದರಲ್ಲಿ ಕೆಲಸ ಮಾಡಿದಳು. ಈಗ ಅವಳು ತನ್ನ ಮೂರನೇ ಪತಿ ಸ್ಟೀವರ್ಟ್ ನೊಂದಿಗೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದಾಳೆ. ಸ್ಟೀವರ್ಟ್ ನನ್ನು ಅವಳು ವಿಟಿಸಿಯಲ್ಲಿ ಭೇಟಿಯಾಗಿದ್ದಳು.

ಜಾನ್ ಮತ್ತು ಶಾಂಟೀನಾ ಎಲ್ಲಿದ್ದಾರೆ, ಏನಾದರು?

ಸ್ಯಾಲಿ ಜೈಲಿಗೆ ಹೋದ ನಂತರ ಅವಳ ಮಕ್ಕಳು ಜಾನ್ ಮತ್ತು ಶಾಂಟೀನಾರನ್ನು ಆಶ್ರಯ ಕೇಂದ್ರವೊಂದಕ್ಕೆ ಸೇರಿಸಲಾಗಿತ್ತಾದರೂ ಕೆಲ ದಿನಗಳ ಬಳಿಕ ಸ್ಯಾಲಿಯ ಅಪ್ಪ-ಅಮ್ಮ ಅವರಿಬ್ಬರನ್ನು ತಮ್ಮೊಂದಿಗೆ ಕರೆದೊಯ್ದರು. ಸ್ಯಾಲಿ ಶಿಕ್ಷೆ ಅನುಭವಿಸುತ್ತಿದ್ದ ಸ್ಥಳದಿಂದ ಜಾನ್ ಮತ್ತು ಶಾಂಟೀರಾ ತೆರಳಿದ ಪ್ರದೇಶ ಸುಮಾರು 4,800 ಕಿಮೀ ದೂರವಿದೆ. ಅಂದರೆ ಮಕ್ಕಳಿಗೆ ತಮ್ಮ ಅಮ್ಮನನ್ನು ಭೇಟಿಯಾಗುವುದು ವರ್ಷಕ್ಕೊಮ್ಮೆ ಮಾತ್ರ ಸಾಧ್ಯವಾಗುತಿತ್ತು.

ಸ್ಯಾಲಿಯ ಮಕ್ಕಳು ಅವಳ ಹಾದಿಯನ್ನೇ ತುಳಿದು ಮಿಲಿಟರಿ ಸೇವೆ ಸೇರಿದರು.

ಅಮೆರಿಕದ ಸೇನೆ ಅಪಘಾನಿಸ್ತಾದಲ್ಲಿದ್ದಾಗ ಜಾನ್ ಅದರ ಭಾಗವಾಗಿದ್ದ. ನಂತರ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಗೆ ತುತ್ತಾದ ಕಾರಣ ಡ್ರಗ್ಸ್ ಸಹವಾಸಕ್ಕೆ ಬಿದ್ದ. ರಿಹ್ಯಾಬ್ ಸೆಂಟರೊಂದರಲ್ಲಿ ಚಿಕಿತ್ಸೆ ಪಡೆದ ಬಳಿಕ ಅವನು ಗುಣಮುಖನಾಗಿದ್ದು ಈಗ ಟೆಕ್ಸಾಸ್ ನಲ್ಲಿ ವಾಸವಾಗಿದ್ದಾನೆ ಮತ್ತು ಗಮನವನ್ನೆಲ್ಲ ತನ್ನ ಮಗನನ್ನು ಬೆಳೆಸುವುದರ ಮೇಲೆ ಕೇಂದ್ರೀಕರಿಸಿದ್ದಾನೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ