ಹೈದರಾಬಾದ್: ತೆಲುಗು ದೇಶಂ ಪಕ್ಷದ (TDP) ನಾಯಕ ವೆನ್ನಾ ಬಾಲಕೋಟಿ ರೆಡ್ಡಿ (Venna Balakoti Reddy) ಮೇಲೆ ಬುಧವಾರ ಅವರ ನಿವಾಸದಲ್ಲಿ ಗುಂಡು ಹಾರಿಸಲಾಗಿದೆ. ಈ ಗುಂಡಿನ ದಾಳಿಯಿಂದ ಬಾಲಕೋಟಿ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಗೆ ವೈಎಸ್‌ಆರ್‌ಸಿಪಿ (YSRCP) ಜವಾಬ್ದಾರಿ ಎಂದು ಟಿಡಿಪಿ ನಾಯಕ ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಬುಧವಾರ ರಾತ್ರಿ 10.30ರ ಸುಮಾರಿಗೆ ಟಿಡಿಪಿ ನಾಯಕ ಮತ್ತು ಮಾಜಿ ಸಂಸದ ವೆನ್ನಾ ಬಾಲಕೋಟಿ ರೆಡ್ಡಿ ಅವರ ಮೇಲೆ ಪಿ. ವೆಂಕಟೇಶ್ವರ್ ರೆಡ್ಡಿ ಗುಂಡು ಹಾರಿಸಿದ್ದಾರೆ. ರಾತ್ರಿ ವೆಂಕಟೇಶ್ವರ್ ರೆಡ್ಡಿ ಅವರು ಬಾಲಕೋಟಿ ರೆಡ್ಡಿ ಮನೆಯ ಬಾಗಿಲು ತಟ್ಟಿದ್ದಾರೆ ಎನ್ನಲಾಗಿದೆ. ಬಾಲಕೋಟಿ ರೆಡ್ಡಿ ಬಾಗಿಲು ತೆರೆದ ಕೂಡಲೇ ಗುಂಡು ಹಾರಿಸಿದ್ದು, ಗುಂಡು ಅವರ ಹೊಟ್ಟೆಗೆ ತಗುಲಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲೊಂದು ಭೀಕರ ಘಟನೆ; ಗರ್ಲ್ಫ್ರೆಂಡ್ನ 3 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾರೆ. ದಾಳಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಳೆದ ವರ್ಷವೂ ಬಾಲಕೋಟಿ ರೆಡ್ಡಿ ವಾಕಿಂಗ್‌ಗೆ ತೆರಳಿದ್ದ ವೇಳೆ ಅವರ ಮೇಲೆ ಚಾಕು ಮತ್ತು ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಯತ್ನ ನಡೆದಿತ್ತು.