ಹಣಕಾಸು ಸಲಹೆಗಾರನ ಸೋಗಿನ ವ್ಯಕ್ತಿಯ ಮಾತಿಗೆ ಮರುಳಾದ ಧಾರವಾಡದ ವೈದ್ಯ: ಬರೋಬ್ಬರಿ 1.79 ಕೋಟಿಗೆ ಕನ್ನ

|

Updated on: Jan 16, 2024 | 7:37 AM

ಧಾರವಾಡದಲ್ಲೊಂದು ಅಪರೂಪದ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹಣಕಾಸು ಸಲಹೆಗಾರ ಎಂದು ಬಿಂಬಿಸಿದ್ದ ಅಪರಿಚಿತನ ಮಾತು ನಂಬಿ ಕೆಲವೊಂದು ವಿವರಗಳನ್ನು ನೀಡಿದ ವೈದ್ಯರೊಬ್ಬರು ಬರೋಬ್ಬರಿ 1.79 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದೀಗ ಘಟನೆ ಸಂಬಂಧ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಣಕಾಸು ಸಲಹೆಗಾರನ ಸೋಗಿನ ವ್ಯಕ್ತಿಯ ಮಾತಿಗೆ ಮರುಳಾದ ಧಾರವಾಡದ ವೈದ್ಯ: ಬರೋಬ್ಬರಿ 1.79 ಕೋಟಿಗೆ ಕನ್ನ
ಸಾಂದರ್ಭಿಕ ಚಿತ್ರ
Follow us on

ಹುಬ್ಬಳ್ಳಿ, ಜನವರಿ 16: ಧಾರವಾಡದ (Dharawad) ವೈದ್ಯರೊಬ್ಬರು ಸೈಬರ್ ವಂಚಕರ (Cyber Crime) ಬಲೆಗೆ ಬಿದ್ದು ಬರೋಬ್ಬರಿ 1.79 ಕೋಟಿ ರೂ. ಕಳೆದುಕೊಂಡ ಘಟನೆ ಇತ್ತೀಚೆಗೆ ನಡೆದಿದೆ. ಎರಡು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರ ಫೋನ್ ಕರೆ ಮಾಡಿದ ನಂತರದ ಬೆಳವಣಿಗೆಯಲ್ಲಿ ವೈದ್ಯರು ಹಣ ಕಳೆದುಕೊಂಡಿದ್ದು, ಸದ್ಯ ಈ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫೋನ್ ಕರೆ ಮಾಡಿದ್ದ ಸೈಬರ್ ವಂಚಕ, ಹಣಕಾಸು ಸಲಹೆಗಾರ ಎಂದು ಬಿಂಬಿಸಿದ್ದ. ಷೇರು ಮಾರುಕಟ್ಟೆಯಲ್ಲಿ ತನ್ನ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ತಂದುಕೊಡಲಾಗುವುದು ಎಂದು ವೈದ್ಯರನ್ನು ನಂಬಿಸಿದ್ದ. ಹೆಚ್ಚಿನ ಲಾಭಕ್ಕಾಗಿ ‘ಪ್ಲಾನೆಟ್ ಇಮೇಜ್ ಇಂಟರ್ನ್ಯಾಷನಲ್’ ಕಂಪನಿಯ ಐಪಿಒ (IPO) ದಲ್ಲಿ ಹೂಡಿಕೆ ಮಾಡಲು ವೈದ್ಯರಿಗೆ ಸಲಹೆ ನೀಡಿದ್ದ. ಆತನ ಸಲಹೆಯನ್ನು ನಂಬಿದ ವೈದ್ಯರು ಆತನ ಸಾಮಾಜಿಕ ಮಾಧ್ಯಮ ತಾಣಕ್ಕೆ ಸೇರಿಕೊಂಡಿದ್ದಾರೆ.

ಇದಾದ ನಂತರ ಸೈಬರ್ ವಂಚಕರು ವೈದ್ಯರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಡೇಟಾವನ್ನು ಯಶಸ್ವಿಯಾಗಿ ಹೊರತೆಗೆದರು. ನಂತರ ವೈದ್ಯರಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ ವಂಚಕರು 1.79 ಕೋಟಿ ರೂ. ಎಗರಿಸಿದ್ದಾರೆ.

ಅಪರಾಧಿಗಳು ವೈದ್ಯರ ಬ್ಯಾಂಕ್ ಸಂಬಂಧಿತ ಡೇಟಾ ಹಾಗೂ ಗೋಪ್ಯ ವೈಯಕ್ತಿಕ ವಿವರಗಳನ್ನು ಹೇಗೆ ಪೂರ್ತಿಯಾಗಿ ಪಡೆದರು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಫೋನ್ ಕರೆ ಮಾಡಿ ವಂಚನೆ ಮಾಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮಗಳ ಕಾಲೇಜು ಸೀಟ್‌ಗಾಗಿ ಅಡ್ಡದಾರಿ ಹಿಡಿದ ಉದ್ಯಮಿ, ಕೊನೆಗೆ ಆತನೇ ಕಿಡ್ನಾಪ್!

ಕರ್ನಾಟಕದಲ್ಲಿ ಹೆಚ್ಚಾದ ಸೈಬರ್ ಅಪರಾಧ

ಕರ್ನಾಟಕದಲ್ಲಿ ಕಳೆದ ಸೈಬರ್ ಅಪರಾಧದ ಪ್ರಕರಣಗಳು ಶೇ 50ರಷ್ಟು ಹೆಚ್ಚಾಗಿದ್ದು, ಪೊಲೀಸರು 12,556 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂಬುದು ಕಳೆದ ತಿಂಗಳು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (NCRB) ಬಿಡುಗಡೆ ಮಾಡಿದ್ದ ವರದಿಯಿಂದ ತಿಳಿದುಬಂದಿತ್ತು. ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ, 28 ರಾಜ್ಯಗಳ ಪೈಕಿ ತೆಲಂಗಾಣವು ಕಳೆದ ವರ್ಷ 15,297 ಪ್ರಕರಣಗಳೊಂದಿಗೆ ಅತಿ ಹೆಚ್ಚು ಸೈಬರ್ ಅಪರಾಧಗಳನ್ನು ದಾಖಲಿಸಿದೆ. ಕರ್ನಾಟಕವು 12,556 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ ಮತ್ತು ಉತ್ತರ ಪ್ರದೇಶ 10,117 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ