ಎಗ್​ರೈಸ್ ಅಂಗಡಿ ಸೇರಿ ಎರಡು ಕಡೆಗಳಲ್ಲಿ ಸಿಲಿಂಡರ್ ಸ್ಫೋಟ, ಇಬ್ಬರು ಸಾವು!

| Updated By: Rakesh Nayak Manchi

Updated on: Jun 05, 2022 | 7:34 PM

ಎಗ್​ರೈಸ್ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಘಟನೆಯಲ್ಲಿ ಮೃತರ ದೇಹ ಛಿದ್ರಗೊಂಡಿದೆ.

ಎಗ್​ರೈಸ್ ಅಂಗಡಿ ಸೇರಿ ಎರಡು ಕಡೆಗಳಲ್ಲಿ ಸಿಲಿಂಡರ್ ಸ್ಫೋಟ, ಇಬ್ಬರು ಸಾವು!
ಸಾಂದರ್ಭಿಕ ಚಿತ್ರ
Follow us on

ವಿಜಯನಗರ: ಎಗ್​ರೈಸ್ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ (Cylinder blast)ಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಬಳಿಯ ಸಂಕ್ಲಾಪುರದಲ್ಲಿ ನಡೆದಿದೆ. ಮೊಂಡ ಬೋರಯ್ಯ ಎಂಬುವವರ ಎಗ್​ರೈಸ್ ಅಂಗಡಿಯಲ್ಲಿ ಮೊದಲು ಶಾರ್ಟ್​ಸರ್ಕ್ಯೂಟ್ ಆಗಿದೆ. ಕೂಡಲೇ ಎಚ್ಚೆತ್ತ ಕೆಲಸಗಾರರು ಬೆಂಕಿ ನಂದಿಸಲು ಮುಂದಾಗಿದ್ದು, ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಬೆಂಕಿ ಬಿದ್ದಿದ್ದನ್ನು ನೋಡಲು ಬಂದ ಇಬ್ಬರು ಯುವಕರು ಸಿಲಿಂಡರ್ ಸ್ಫೋಟಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರ ದೇಹ ಛಿದ್ರಗೊಂಡಿದೆ. ಮೃತರನ್ನು ಶಿವಪ್ಪ(28) ಹಾಗೂ ಶ್ರೀಕಾಂತ್(23) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕ್ರೈಂ: ನೈಟಿ ಹಾಕಿಕೊಂಡ ಬಂದು ಮಣಪ್ಪುರಂ ಫೈನಾನ್ಸ್​ ಕಂಪನಿ ಅಂಗಡಿ ದೋಚಲು ಯತ್ನಿಸಿದ್ದವರ ಸೆರೆ, ಬೈಕ್​ಗಳ ಡಿಕ್ಕಿ-ದಂಪತಿ ಸೇರಿ ಮೂವರ ಸಾವು

ಕಾರಿನಲ್ಲಿ ಸಿಲಿಂಡರ್ ಸ್ಫೋಟ

ಹಾಸನ: ಕಾರಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಹಾಸನ ತಾಲೂಕಿನ ಶಾಂತಿ ಗ್ರಾಮದಲ್ಲಿ ನಡೆದಿದೆ. ಮನೆ ಮುಂಭಾಗದಲ್ಲಿ ಇರಿಸಿದ್ದ ಕಾರಿನಲ್ಲಿ ಸಿಲಿಂಡರ್​ ಸ್ಫೋಟಗೊಂಡಿದೆ. ಅದರಂತೆ ಕಾರಿಗೆ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿದೆ. ಹೀಗೆ ಉರಿದ ಬೆಂಕಿ ಮನೆಯ ಮುಂಭಾಗಕ್ಕೂ ಆವರಿಸಿದೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ತಂಡ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿತು. ಆದರೆ ಕಾರು ಸಂಪೂರ್ಣ ಭಸ್ಮವಾಗಿ ಹೋಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಂತಿ ಗ್ರಾಮ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಪೊಲೀಸ್​ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್​

ಜೆಸಿಬಿ ಡಿಕ್ಕಿಯಾಗಿ ಬಾಲಕ ಸಾವು

ದಕ್ಷಿಣ ಕನ್ನಡ: ಜೆಸಿಬಿ ಡಿಕ್ಕಿಯಾಗಿ ಸೈಕಲ್​​ ಸವಾರ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕಣಿಯೂರು ಬಳಿ ನಡೆದಿದೆ. ಕಣಿಯೂರು ನಿವಾಸಿ ಹಸೈನಾರ್ ಪುತ್ರ  ಮೊಹ್ಮದ್ ಅಖಿಲ್(8) ಸಾವನ್ನಪ್ಪಿದ ಬಾಲಕ. ಸೈಕಲ್​ನಲ್ಲಿ ಬಾಲಕ ಹೋಗುತ್ತಿದ್ದಾಗ ಜೆಸಿಬಿ ಡಿಕ್ಕಿ ಹೊಡೆದಿದೆ. ಘಟನೆ ವೇಳೆ ಜೆಸಿಬಿ ಚಾಲಕ ಮದ್ಯ ಸೇವನೆ ಮಾಡಿದ್ದನು ಎನ್ನಲಾಗುತ್ತಿದೆ. ಮದ್ಯದ ಅಮಲಿನಲ್ಲಿದ್ದ ಚಾಲಕ, ರಸ್ತೆಯಲ್ಲಿ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ ಸರಿಸಿ ಸ್ಥಳದಿಂದ ತೆರಳಿದ್ದಾನೆ. ಘಟನೆಯಿಂದ ಕೆರಳಿದ ಸ್ಥಳೀಯರು ಜೆಸಿಬಿ ಚಾಲಕನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಟ್ಲಾ ಠಾಣಾ ಪೊಲೀಸರು ಗದಗ ಮೂಲದ ಚಾಲಕನ ಸಹಿತ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪ್ರಕರಣ ಕೂಡ ದಾಖಲಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ