ಮಂಗಳೂರು: ಒಂದಾಗಿ ಬಾಳಬೇಕಾದ ಜೀವಗಳ ನಡುವೆ ವಿರಸ ಮೂಡಿದರೆ ಎಂತಹ ವಿಕೋಪಕ್ಕೂ ದಾರಿ ಮಾಡಿಕೊಡಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ಬರೋಬ್ಬರಿ 26 ವರ್ಷಗಳ ದಾಂಪತ್ಯವೊಂದು ಕೊಲೆ ಹಾಗೂ ಆತ್ಮಹತ್ಯೆಯಲ್ಲಿ ದಾರುಣ ಅಂತ್ಯ ಕಂಡ ಘಟನೆಯೊಂದು ಮಂಗಳೂರು ನಗರ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಪಿಲಾರ್ ಎಂಬಲ್ಲಿ ನಡೆದಿದೆ. ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನ ಹೊಂದಿದ್ದ ಪತಿಯು ಆಕೆಯನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.
ಮೃತ ಪತ್ನಿಯನ್ನು 46 ವರ್ಷದ ಶೋಭಾ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ಪೋಷಕರಾದ ಶೋಭಾ ಹಾಗೂ 55 ವರ್ಷದ ಶಿವಾನಂದ ದಾಪಂತ್ಯದಲ್ಲಿ ಮದುವೆಯಾದ ದಿನದಿಂದಲೂ ವಿರಸವಿತ್ತಂತೆ. ಪತ್ನಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಭೂತ ಶಿವಾನಂದನನ್ನೂ ಕಾಡುತ್ತಿತ್ತು. ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದ ಶೋಭಾ ಹಾಗೂ ಶಿವನಾಂದ ಪುತ್ರನ ಜೊತೆಯಲ್ಲಿ ಮನೆಯಲ್ಲಿ ವಾಸವಿದ್ದ. ಅದರಂತೆ ಅ.27ರಂದು ಬೆಳಗ್ಗೆ ಪುತ್ರ ಕಾರ್ತಿಕ್ ಕೆಲಸಕ್ಕೆ ತೆರಳಿದ ಬಳಿಕ ಪತ್ನಿಯ ಜೊತೆ ಜಗಳ ಮಾಡಲು ಆರಂಭಿಸಿದ್ದಾನೆ. ಇದು ವಿಕೋಪಕ್ಕೆ ತಿರುಗಿದ್ದಲ್ಲದೆ ಶಿವಾನಂದ ಶೋಭಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ಸಂಬಂಧಿಗಳಿಗೆ ಕರೆ ಮಾಡಿ ನಾನು ಸಾಯುತ್ತೇನೆ, ನನ್ನ ಶವಕ್ಕೆ ಮುಡಿಸಲು ಹೂವು ತನ್ನಿ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಬಳಿಕ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಮಕ್ಕಳ ಪ್ರಗತಿಯನ್ನು ನೋಡುತ್ತಾ ಜೊತೆಯಾಗಿ ಬಾಳಬೇಕಿದ್ದ ಈ ಜೋಡಿ ಈ ರೀತಿ ದಾರುಣ ಅಂತ್ಯ ಕಂಡಿದ್ದು ದುರಂತವೇ ಸರಿ.
ವರದಿ: ಅಶೋಕ್ ಟಿವಿ 9 ಮಂಗಳೂರು
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ