ಗುಡಿಸಲ ಮುಂದೆ ಮಲಗಿದ್ದಾತನ ಭೀಕರ ಕೊಲೆ; ನಿಗೂಢ ಕೊಲೆ ನೋಡಿ ಮೌನಕ್ಕೆ ಶರಣಾದ ಗ್ರಾಮ
ಈತ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದರಿಂದ ಗ್ರಾಮದಲ್ಲಿ ಈತನಿಗೆ ಯಾರೂ ವೈರಿಗಳಿರಲಿಲ್ಲ. ಅದಾಗ್ಯೂ ರಾತ್ರಿ ಮಲಗಿದ್ದವ ಬೆಳಗ್ಗೆ ಕೊಲೆಯಾಗಿರುವುದನ್ನು ನೋಡಿ ಇಡೀ ಗ್ರಾಮವೇ ಮೌನಕ್ಕೆ ಶರಣಾಗಿದೆ.
ಗದಗ: ಕೊಲೆಯಾದ ವ್ಯಕ್ತಿ ಇಡೀ ಗ್ರಾಮಕ್ಕೆ ಚಿರಪರಿಚಿತ. ಯಾರು ಕೇಳಿದರೂ ಆತ ಒಳ್ಳೆಯವ ಎಂದು ಹೇಳುತ್ತಿದ್ದರು. ಯಾರ ತಂಟೆಗೆ ಹೋಗದ ಆತನ ಭೀಕರ ಕೊಲೆಯ ವಿಷಯ ತಿಳಿದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿ ಹೊಸಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಒಂದು ಸಣ್ಣ ಸಾಕ್ಷಿಯೂ ಪೊಲೀಸರಿಗೆ ಸಿಗದಂತೆ ಮಾಡಿ ಹಂತಕರು ಪರಾರಿಯಾಗಿದ್ದರು. ಆದರೆ ಪೊಲೀಸ್ ರಾಂಬೋ ಕ್ಷಣಾರ್ಧದಲ್ಲಿ ಪ್ರಕರಣವನ್ನು ಪತ್ತೆಹಚ್ಚಿದ್ದಾನೆ. ಅದರಂತೆ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ವ್ಯಕ್ತಿಯ ನಿಗೂಢ ಕೊಲೆಯ ಹಿಂದಿನ ಕಾರಣ ತಿಳಿದು ಜನರು ಬೆಚ್ಚಿಬಿದ್ದಿದ್ದಾರೆ.
ಈರಪ್ಪ ಸೂರಪ್ಪನವರ (60) ಡಂಬಳ ಗ್ರಾಮದಲ್ಲಿ ಅಕ್ಟೋಬರ್ 22ರಂದು ತನ್ನ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿ ರಾತ್ರಿಯೇ ಹೊಸಳ್ಳಿ ಗ್ರಾಮಕ್ಕೆ ಬಂದಿದ್ದ. ನಾಳೆ ತಾಯಿಯ ದಿನದ ಕಾರ್ಯಮುಗಿಸಿಕೊಂಡು ಹೋಗುವಂತೆ ಸಹೋದರರು ಹೇಳಿದ್ದರೂ ಯಾರೂ ಮಾತು ಕೇಳದ ಈರಪ್ಪ ಹೊಸಳ್ಳಿ ಗ್ರಾಮಕ್ಕೆ ಬಂದಿದ್ದ. ರಾತ್ರಿ ತನ್ನ ಗುಡಿಸಲು ಮುಂದೆಯೇ ಮಲಗಿದ್ದ. ಆದರೆ ಮುಂಜಾನೆ ಜನರು ಬಂದು ನೋಡಿದಾಗ ಈರಪ್ಪ ಬರ್ಬರವಾಗಿ ಕೊಲೆಯಾಗಿದ್ದ. ರಕ್ತಸಿಕ್ತ ದೇಹ ನೋಡಿ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು.
ಕೊಲೆಯಾದ ಈರಪ್ಪ ಸೂರಪ್ಪನವರ ಮೂಲತಃ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ನಿವಾಸಿ. ಕಳೆದ 30 ವರ್ಷಗಳಿಂದ ಹೊಸಳ್ಳಿ ಗ್ರಾಮದಲ್ಲಿ ಬೋರವೇಲ್ ದುರಸ್ತಿ ಕಾರ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಅದೇ ರೀತಿ ಜಮೀನಿನಲ್ಲೂ ಕೆಸಲ ಮಾಡಿಕೊಂಡಿದ್ದ. ಆದರೆ ಈರಪ್ಪನ ಮಕ್ಕಳು ಹಾಗೂ ಪತ್ನಿ ತಮ್ಮೂರಲ್ಲಿದ್ದರು. ಇಡೀ ಗ್ರಾಮದ ಜನರೊಂದಿಗೆ ಬಹಳ ಅನ್ಯೋನ್ಯತೆಯಿಂದಿದ್ದ ಈತನಿಗೆ ವೈರಿಗಳಿರಲಿಲ್ಲ. ಆದರೆ ಈತನ ಕೊಲೆ ಯಾಕಾಯ್ತು ಎಂದು ಇಡೀ ಗ್ರಾಮವೇ ಮಾತನಾಡಿಕೊಳ್ಳುತ್ತಿತ್ತು.
ಕೊಲೆಗೂ ಮುನ್ನ ಈರಪ್ಪ ಮಗ ಅಂದಪ್ಪನ ಜೊತೆ ಮೊಬೈಲ್ನಲ್ಲಿ ಮಾತನಾಡಿದ್ದಾನೆ. ಆದರೆ ಮುಂಜಾನೆ ಸಾವಿನ ಸುದ್ದಿ ಕೇಳಿ ಸಂಬಂಧಿಕರಿಗೆ ಶಾಕ್ ಆಗಿದೆ. ಈರಪ್ಪ ಸೂರಪ್ಪನವರ ಹತ್ತಿರ ಇತ್ತೀಚೆಗೆ ಶೇಂಗಾ ಮರಾಟ ಮಾಡಿದ ಹಣ ಇತ್ತು. ಹಣಕ್ಕಾಗಿ ಕೊಲೆ ಮಾಡಿರುವ ಅಥವಾ ಬೇರೆ ಕಾರಣಕ್ಕೆ ಕೊಲೆ ಮಾಡಿರಬಹುದೇ ಎಂಬ ಹತ್ತಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಮಾಹಿತಿ ತಿಳಿದ ಶಿರಹಟ್ಟಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ಸಣ್ಣ ಸಾಕ್ಷಿಯೂ ಸಿಗದ ಹಿನ್ನೆಲೆ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೆ ತಲೆ ನೋವಾಗಿತ್ತು.
ಅಷ್ಟಕ್ಕೂ ಸುಮ್ಮನಾಗದ ಪೊಲೀಸರು ಸ್ಥಳಕ್ಕೆ ರಾಂಬೋ ಎನ್ನುವ ಶ್ವಾನವನ್ನು ಕರೆತಂದರು. ಈ ಶ್ವಾನ ಕ್ಲಿಷ್ಟಕರ ಕೊಲೆ ಪ್ರಕರಣದ ರಹಸ್ಯವನ್ನು ಬೇಧಿಸುವಲ್ಲಿ ಯಶಸ್ವಿಯೂ ಆಗಿದೆ. ಕೊಲೆಯಾದ ಸ್ಥಳಕ್ಕೆ ಬಂದ ರಾಂಬೋ ನೇರವಾಗಿ ಹಂತಕರ ಮನೆ ಮುಂದೆಯೇ ನಿಂತು ಕೊಲೆಗಾರರನ್ನು ತೋರಿಸಿದ್ದಾನೆ. ಅದರಂತೆ ಶ್ವಾನ ನಿಂತ ಮನೆಯ ಸದಸ್ಯರಾದ ಮಾರ್ತಾಂಡ ಬಂಡಿವಡ್ಡರ್, ಮಲ್ಲೇಶಿ ಬಂಡಿವಡ್ಡರ್, ಹುಚ್ಚಪ್ಪ ಬಂಡಿವಡ್ಡರ್, ದೇವಕ್ಕ ಬಂಡಿವಡ್ಡರ್ ಎನ್ನುವ ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡು ತೀವ್ರ ತನಿಖೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಯಾರ ಜೊತೆಯೂ ವೈಶಮ್ಯವನ್ನು ಹೊಂದಿರದಿದ್ದ ಈರಪ್ಪ ಅಕ್ರಮ ಸಂಬಂಧವನ್ನು ಹೊಂದಿರುವುದು ತನಿಖೆ ವೇಳೆ ತಿಳಿದುಬಂದಿದೆ. ಅದೇ ಗ್ರಾಮದ ದೇವಕ್ಕ ಬಂಡಿವಡ್ಡರ್ ಎನ್ನುವ ಮಹಿಳೆ ಜೊತೆ ಈರಪ್ಪ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದನಂತೆ. ಮೊನ್ನೆ ಕೂಡಾ ಇಬ್ಬರು ಏಕಾಂತದಲ್ಲಿದ್ದಾಗ ದೇವಕ್ಕನ ಮೂರು ಜನ ಮೈದುನರು ನೋಡಿದ್ದಾರೆ. ಇಬ್ಬರಿಗೂ ಥಳಿಸಿ ಎಚ್ಚರಿಕೆಯೂ ನೀಡಿದ್ದರು. ಆದರೆ ತಡರಾತ್ರಿ 1.30 ರ ಸುಮಾರಿಗೆ ಈರಪ್ಪ ಮಲಗಿದ್ದಾಗಲೇ ಕಲ್ಲಿನಿಂದ ಹೊಡೆದ ಕೊಲೆ ಮಾಡಿದ್ದಾರೆ. ಈ ಕೊಲೆಯಲ್ಲಿ ದೇವಕ್ಕ ಕೂಡ ಕೈ ಜೋಡಿಸಿದ್ದಾಳೆ.
ಇನ್ನೂ ಕೊಲೆಯಾದ ಈರಪ್ಪ ಸೂರಪ್ಪನವರ ಇತ್ತಿಚೆಗೆ ಶೇಂಗಾ ಮಾರಾಟ ಮಾಡಿದ್ದ, ಅದರಿಂದ ಬಂದ ಸಾಕಷ್ಟು ಹಣ ಇವನ ಬಳಿ ಇತ್ತು. ಹೀಗಾಗಿ ಹಣಕ್ಕಾಗಿ ಕೊಲೆಯಾಗಿತ್ತು ಎನ್ನುವ ಶಂಕೆ ವ್ಯಕ್ತವಾಗಿತ್ತು. ಆದರೆ ಅಣ್ಣನ ಹೆಂಡತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಈರಪ್ಪನನ್ನು ಆವಳ ಮೈದುನರರು ಭೀಕರವಾಗಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬರುತ್ತದೆ. ಇತ್ತ ಕ್ಲಿಷ್ಟಕರ ಪ್ರಕಣವನ್ನು ಬೇಧಿಸಿದ ಪೊಲೀಸ್ ಶ್ವಾನಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಹಂತಕರನ್ನು ಜೈಲು ಪಾಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:26 am, Fri, 28 October 22