ರಾಗಿ ಮುದ್ದೆಯಲ್ಲಿ‌ ನಿದ್ರೆ ಮಾತ್ರೆ ಹಾಕಿ ಅತ್ತೆಯನ್ನ ಕೊಲೆ ಮಾಡಿದ ಸೊಸೆ

ಅವಳದ್ದು ಸುಖ ಸಂಸಾರ, ಗಂಡ, ಮಗ, ಅತ್ತೆ ಮಾವನೊಂದಿಗೆ ನೆಮ್ಮದಿಯ ಬದುಕು. 35 ವರ್ಷದ ಗೃಹಿಣಿಗೆ ಅದೇನು ಕೊರತೆ ಇತ್ತೋ ಗೊತ್ತಿಲ್ಲ. 26 ವರ್ಷದ ಖಾಸಗಿ ಬಸ್ ಚಾಲಕನೊಂದಿಗೆ ಸ್ನೇಹ ಬೆಳೆದಿತ್ತು. ಇದೇ ಸ್ನೇಹ ಪ್ರೇಮವಾಗಿ, ಅನೈತಿಕ ಸಂಬಂಧದವರೆಗೂ ಬಂದು ತಲುಪಿತ್ತು. ತನ್ನ ಪ್ರಿಯಕರನಿಗಾಗಿ ಗಂಡನ ಮನೆಯಲ್ಲಿ ಚಿನ್ನ, ಹಣ ಕದಿಯಲು ಶುರು ಮಾಡಿದವಳೂ, ಕೊನೆಗೆ ಅತ್ತೆಯನ್ನೇ ಕೊಲೆ ಮಾಡಿದ್ದಾಳೆ.

ಚಿಕ್ಕಮಗಳೂರು, ಆಗಸ್ಟ್​ 25: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಜ್ಜಂಪುರ (Ajjampur) ತಾಲೂಕಿನ ತಡಗ ಗ್ರಾಮದ ದೇವಿರಮ್ಮ (75) ಅವರಿಗೆ ಆಗಸ್ಟ್ 11 ರ ರಾತ್ರಿ ಊಟದ ಬಳಿಕ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ರಾತ್ರಿ ಅಸ್ವಸ್ಥರಾಗಿದ್ದ ಅತ್ತೆಯನ್ನು ಬಾಡಿಗೆ ಕಾರು ಮಾಡಿ‌ ಸೊಸೆ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು.

ದಾವಣಗೆರೆಯಲ್ಲಿ ವಾಸವಾಗಿರುವ ದೇವಿರಮ್ಮ ಅವರ ಮಗಳು ವೀಣಾ ಅವರಿಗೆ ಅಶ್ವಿನಿ ಕರೆ ಮಾಡಿ‌ ಅತ್ತೆ ಅಸ್ವಸ್ಥರಾಗಿದ್ದಾರೆ ಅಜ್ಜಂಪುರ ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಳು. ಆತಂಕಗೊಂಡ ವೀಣಾ ತಾಯಿ ದೇವಿರಮ್ಮ ಅವರನ್ನು ದಾವಣಗೆರೆಗೆ ಕರೆತರಲು ಹೇಳಿದ್ದರು. ಅಶ್ವಿನಿ ಅತ್ತೆ ದೇವಿರಮ್ಮ ಅವರನ್ನು ಮಧ್ಯರಾತ್ರಿ 1:30 ಸುಮಾರಿಗೆ ದಾವಣಗೆರೆಗೆ ಕರೆದುಕೊಂಡು ಹೋದಳು. ಆದರೆ, ದಾರಿ ಮಧ್ಯದಲ್ಲೇ ದೇವಿರಮ್ಮ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಮನೆಯ ಹಿರಿಯ ಜೀವ ದೇವಿರಮ್ಮ ಅವರ ದಿಢೀರ್ ಸಾವಿನಿಂದ ಇಡೀ ಕುಟುಂಬ ಕಣ್ಣೀರು ಹಾಕಿತ್ತು. ದಾವಣಗೆರೆಯಿಂದ ತಡಗ ಗ್ರಾಮಕ್ಕೆ ಶವ ತಂದು ಆ.12 ರಂದು ದೇವಿರಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಂಬಂಧಿಕರಿಗೆ ಮನೆಯ ಸೊಸೆ ಅಶ್ವಿನಿ “ಅತ್ತೆ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥಗೊಂಡಿದ್ದರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕ್ಲಿಲ್ಲ” ಎಂದು ಹೇಳಿದ್ದಳು. ಸಂಬಂಧಿಕರು ‌ಕೂಡ ವಯಸ್ಸಾದ ಜೀವ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದು ನಂಬಿ ಮರುಕಪಟ್ಟಿದ್ದರು.

ದೇವಿರಮ್ಮ ಅವರ ಅಂತ್ಯಸಂಸ್ಕಾರ ಮುಗಿಸಿ ವೀಣಾ ಮನೆಯ ಬೀರುವಿನಲ್ಲಿ ಹಣ, ಚಿನ್ನ ಇಟ್ಟು ಲಾಕ್ ಮಾಡಿ ತನ್ನ ಬಳಿ ಬೀರುವಿನ ಕೀ ಇಟ್ಟುಕೊಂಡಿದ್ದರು. ನಾಲ್ಕು ‌ದಿನಗಳ ಬಳಿಕ ವೀಣಾ ಬೀರು ತೆರೆದು ಸಂಬಂಧಿಕರು ನೀಡಿದ್ದ 50 ಸಾವಿರ ಹಣವಿರುವ ಬ್ಯಾಗ್ ಅನ್ನ ವಾಪಸ್ ನೀಡಿದ್ದರು, ಬ್ಯಾಗ್ ಪಡೆದ ಸಂಬಂಧಿಗೆ ಶಾಕ್ ಎದುರಾಗಿತ್ತು. ವೀಣಾ ಅವರಿಗೆ ಕರೆ ಮಾಡಿದ‌ ಸಂಬಂಧಿ ಬ್ಯಾಗ್​ನಲ್ಲಿ ಹಣ ಇಲ್ಲ ಎಂದಿದ್ದರು.

ಆತಂಕಗೊಂಡ ವೀಣಾ, ತಕ್ಷಣ ಬೀರು ತೆರೆದು ನೋಡಿದಾಗ ಮಾಂಗಲ್ಯ ‌ಸರ, ಚಿನ್ನ, ತನ್ನು 35 ಸಾವಿರ ಹಣ ಇರಲಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ವೀಣಾ, ಅಣ್ಣ ರಮೇಶ್, ‌ರಮೇಶ್ ಅವರ ಪತ್ನಿ ‌ಅಶ್ವಿನಿ, ಅಪ್ಪ ಮಲ್ಲೇಶಪ್ಪ ಅವರಿಗೂ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದರು.

ಈ ಹಿಂದೆಯೂ ಮನೆಯಲ್ಲಿ ಇಟ್ಟ ಹಣವನ್ನ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಅಶ್ವಿನಿ ಮೇಲೆ ಮನೆಯವರಿಗೆ ಅನುಮಾನ ಬರತೊಡಗಿತ್ತು. ಆದರೆ, ಅಶ್ವಿನಿ ಮಾತ್ರ ಬೀರುವಿನ ಕೀ ನಿಮ್ಮ ಬಳಿ ಇತ್ತು ನನಗೆ ಗೊತ್ತಿಲ್ಲ, ನಾನು ಮುಟ್ಟಿಲ್ಲ ಎಂದು ವಾದ ಮಾಡಿದ್ದಳು.

ಆ.20 ರಂದು ವೀಣಾ ಅಣ್ಣ ರಮೇಶ್ ಜೊತೆ ತೆರಳಿ ಅಜ್ಜಂಪುರ ಪೊಲೀಸ್ ‌ಠಾಣೆಯಲ್ಲಿ‌ 100 ಗ್ರಾಂ‌‌ ಚಿನ್ನ, 1 ಲಕ್ಷ ಹಣ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಅಜ್ಜಂಪುರ ‌ಪೊಲೀಸರು ಯಾರ ಮೇಲಾದರೂ ಅನುಮಾನ ಇದೆಯಾ ಅನ್ನುತ್ತಿದ್ದಂತೆ ರಮೇಶ್ ತನ್ನ ಪತ್ನಿ ‌ಅಶ್ವಿನಿ ಹೆಸರೇಳಿದ್ದರು. ಬಳಿಕ ಪೊಲೀಸರು ತಡಗ ಗ್ರಾಮದ ರಮೇಶ್ ಮನೆಗೆ ಬಂದು ತಪಾಸಣೆ ನಡೆಸಿದರು. ಅನುಮಾನಗೊಂಡ ಪೊಲೀಸರು ‌ಅಶ್ವಿನಿಯನ್ನ ಪೊಲೀಸ್ ‌ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಅಶ್ವಿನಿ ಹೇಳಿದ ಮುದ್ದೆ ಕಥೆಯನ್ನ ಕೇಳಿದ ಪೊಲೀಸರು ಬೆಚ್ಚಿಬಿದ್ದಿದ್ದರು. ತಕ್ಷಣವೇ ಶಿವನಿ ಗ್ರಾಮದ 26 ವರ್ಷದ ಆಂಜನೇಯ ನನ್ನ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಸತ್ಯ ಬಯಲಾಗಿದೆ.

ಬಯಲಾಯ್ತು ಸತ್ಯ

ಅಜ್ಜಂಪುರ ತಾಲೂಕಿನ ತಡಗ ಗ್ರಾಮದ ಮಲ್ಲೇಶಪ್ಪ ಮತ್ತು ದೇವಿರಮ್ಮ ದಂಪತಿಗಳಿಗೆ ಇಬ್ಬರು ಮಕ್ಕಳು ಇದ್ದಾರೆ. ಹಿರಿಯ ಮಗ ರಮೇಶ ಅವರು ಚೌಳಿಹಿರಿಯೂರು ಗ್ರಾಮದ ಅಶ್ವಿನಿ ಅವರನ್ನು 10 ವರ್ಷಗಳ ಹಿಂದೆ ಮದುವೆಯಾದರು. ರಮೇಶ್ ಮತ್ತು ಅಶ್ವಿನಿ ಸುಖ ಸಂಸಾರಕ್ಕೆ 8 ವರ್ಷದ ಮಗನಿದ್ದಾನೆ. ಮಲ್ಲೇಶಪ್ಪ ಅವರ ಮಗಳು‌ ವೀಣಾ ಅವರನ್ನು ದಾವಣಗೆರೆಗೆ ಮದುವೆ ಮಾಡಿ ಕೊಡಲಾಗಿದೆ.

ನೆಮ್ಮದಿಯಾಗಿದ್ದ ಮಲ್ಲೇಶಪ್ಪ ಮತ್ತು ದೇವಿರಮ್ಮ ಕುಟುಂಬಕ್ಕೆ ಎರಡು ವರ್ಷದಿಂದ ನೆಮ್ಮದಿ ಇಲ್ಲದಂತಾಗಿತ್ತು. ಸೊಸೆಯ ನಡವಳಿಕೆಯಲ್ಲಿ ಬದಲಾವಣೆ ಕಾಣತೊಡಗಿತ್ತು. ಮನೆಯಲ್ಲಿ ಕಳ್ಳತನ ಮಾಡುವುದು, ಗಂಡ ರಮೇಶ್​, ಮಾವ ಮಲ್ಲೇಶಪ್ಪ ಮತ್ತು ದೇವಿರಮ್ಮ ಅವರೊಂದಿಗೆ ಜಗಳವಾಡುತ್ತಿದ್ದಳು.

ತಡಗ ಗ್ರಾಮದಿಂದ ಚೌಳಿಹಿರಿಯೂರು ಗ್ರಾಮದಲ್ಲಿನ ತವರು ಮನೆಗೆ ಖಾಸಗಿ ಬಸ್​ನಲ್ಲಿ ಹೋಗಿ-ಬರುತ್ತಿದ್ದ ಅಶ್ವಿನಿಗೆ ಶಿವನಿ ಗ್ರಾಮದ ಬಸ್ ಚಾಲಕ 26 ವರ್ಷದ ಆಂಜನೇಯ ಪರಿಚಯವಾಗಿದ್ದನು. ಪರಿಚಯ ಪ್ರೇಮವಾಗಿ, ಇಬ್ಬರ ನಡುವಿನ ಅನೈತಿಕ ಸಂಬಂಧದವರೆಗೂ ಬಂದು ನಿಂತಿತ್ತು. ಲವರ್ ಆಂಜನೇಯನಿಗೆ ಅಶ್ವಿನಿ ಕಟ್ಟಿದ ಮಾಂಗಲ್ಯ ಸರವನ್ನು ನೀಡಿದ್ದಳು. ಅಷ್ಟೆ ಅಲ್ಲದೇ, 2 ವರ್ಷದಲ್ಲಿ 20 ಲಕ್ಷ ಮೌಲ್ಯದ 220 ಗ್ರಾಂ ಚಿನ್ನ ಮತ್ತು 5 ಲಕ್ಷ ರೂ. ಗಂಡನ ಮನೆಯಲ್ಲಿ ಕಳ್ಳತನ ಮಾಡಿ ಆಂಜನೇಯನಿಗೆ ನೀಡಿದ್ದಾಳೆ.

ಮನೆಯ ಬೀರುವಿನ ಕೀಯನ್ನ ಪ್ರಿಯಕರನ ಸಹಾಯ ಪಡೆದು ‌ನಕಲಿ‌ ಮಾಡಿಸಿಕೊಂಡ‌ ಅಶ್ವಿನಿ ಮನೆಯಲ್ಲಿ ಕಳ್ಳತನ ‌ಮಾಡಿ ಆಂಜನೇಯನಿಗೆ ಕೊಡುತ್ತಿದ್ದಳು. ಅಶ್ವಿನಿ ಕೊಟ್ಟ ಹಣದಲ್ಲಿ ಆಂಜನೇಯ ‌ಹೊಸ‌ ಟಿಟಿ‌ ವಾಹನ ‌ಖರೀದಿ‌ ಮಾಡಿದ್ದನು. ಅತ್ತೆ ದೇವಿರಮ್ಮ ಅವರ ಬಳಿಯೇ ಇರುತ್ತಿದ್ದ ಬೀರುವಿನ ಕೀ ನಕಲಿ ಮಾಡಿ ಕಳ್ಳತನ ಮಾಡಿರುವ ವಿಚಾರ ಅತ್ತಗೆ ಗೊತ್ತಾದ್ದರೇ ಕಷ್ಟವಾಗುತ್ತೆ ಅಂದುಕೊಂಡ ಅಶ್ವಿನಿ ಆಂಜನೇಯ ‌ಮೂಲಕ‌ ನಿದ್ರೆ ಮಾತ್ರೆ, ವಿಷ ತರಿಸಿಕೊಂಡಿದ್ದಳು.

ಇದನ್ನೂ ಓದಿ: ತನ್ನ 20 ಸೆಂಟ್​ ಜಾಗದಲ್ಲಿ ಅಂಬೇಡ್ಕರ್​ ಭವನ ನಿರ್ಮಾಣಕ್ಕೆ ವಿರೋಧಿಸಿ ಮಹಿಳೆ ಆತ್ಮಹತ್ಯೆ

ಆಂಜನೇಯ ಕೊಟ್ಟ ನಿದ್ರೆ ಮಾತ್ರೆ, ವಿಷವನ್ನು ಅಶ್ವಿನಿ ನಿತ್ಯವೂ ರಾತ್ರಿ ಊಟದಲ್ಲಿ ಹಾಕುತ್ತಿದ್ದಳು. ಅಶ್ವಿನಿ ಆ.11 ರ ರಾತ್ರಿ ಮುದ್ದೆಯಲ್ಲಿ 20 ನಿದ್ರೆ ಮಾತ್ರೆ ಹಾಕಿ ಅತ್ತೆ ದೇವಿರಮ್ಮ ಅವರಿಗೆ ಊಟ ನೀಡಿದ್ದಳು. ಸೊಸೆ ಕೊಟ್ಟ ರಾಗಿ ಮುದ್ದೆ ‌ಊಟ ಮಾಡಿದ ದೇವಿರಮ್ಮ ತೀವ್ರ ಅಸ್ವಸ್ಥರಾಗಿದ್ದರು.‌ ತನ್ನ ಲವರ್ ಆಂಜನೇಯನಿಗೆ ಕರೆ ಮಾಡಿ ಓಮಿನಿ ಕಾರು ತರಿಸಿಕೊಂಡ ಅಶ್ವಿನಿ ಅತ್ತೆ ದೇವಿರಮ್ಮ ಅವರನ್ನ ಆಸ್ಪತ್ರೆಗೆ ಕರೆದೊಯ್ಯುವ ನಾಟಕ ಮಾಡಿದ್ದಳು. ನಾದಿನಿ ವೀಣಾ ಅವರಿಗೆ ಕರೆ ಮಾಡಿ ಅಜ್ಜಂಪುರ ಆಸ್ಪತ್ರೆಗೆ ಕರೆಸಿಕೊಂಡು ಹೋಗಿರುವುದಾಗಿ‌ ಹೇಳಿದ್ದಳು. ಆಸ್ಪತ್ರೆಗೆ ಕರೆ ಮಾಡಿದ ವೀಣಾ ಅವರಿಗೆ ಯಾರು ಬಂದಿಲ್ಲ ಎಂಬ ಮಾಹಿತಿ ‌ಸಿಕ್ಕಿತ್ತು. ತಕ್ಷಣ ಮತ್ತೆ ಅಶ್ವಿನಿಗೆ ಕರೆ ಮಾಡಿದ ವೀಣಾ ದಾವಣಗೆರೆಗೆ ಕರೆ ತರುವಂತೆ ಹೇಳಿದ್ದರು.

1.30 ರ ವರೆಗೆ ದಾವಣಗೆರೆಗೆ ತೆರಳಿದ್ದಳು. ಆದರೆ, ಅಷ್ಟರಲ್ಲಿ ದೇವಿರಮ್ಮ ಮೃತಪಟ್ಟಿದ್ದರು. ಅನಾರೋಗ್ಯದಿಂದ ದೇವಿರಮ್ಮ ಅವರು ಸಾವನ್ನಪ್ಪಿದ್ದಾರೆ ಎಂದೇ ನಂಬಿದ್ದ ಇಡೀ ಕುಟುಂಬಕ್ಕೆ ರಾಗಿ ಮುದ್ದೆಯಲ್ಲಿ 20 ನಿದ್ರೆ ಮಾತ್ರೆ ಹಾಕಿದ್ದ ವಿಷಯ ತಿಳಿದು ಆತಂಕಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ