ತನ್ನ 20 ಸೆಂಟ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿರೋಧಿಸಿ ಮಹಿಳೆ ಆತ್ಮಹತ್ಯೆ
ಆ ಕುಟುಂಬ ಇದ್ದ ತುಂಡು ಭೂಮಿಯನ್ನ ನಂಬಿ ಜೀವನ ನಡೆಸುತ್ತಿತ್ತು. ಆದರೆ, ಅದೇ ಜಮೀನಿನಲ್ಲಿ ಈಗ ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನ ನಿರ್ಮಿಸಲು ಮುಂದಾಗಿದೆ. ತನ್ನ ಜಮೀನಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿರೋಧಿಸಿ ಮಹಿಳೆ ಶನಿವಾರ ನೇಣಿಗೆ ಶರಣಾಗಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ.

ಚಾಮರಾಜನಗರ, ಆಗಸ್ಟ್ 16: ಚಾಮರಾಜನಗರ (Chamrajanagar) ಜಿಲ್ಲೆಯ ಹನೂರು (Hanuru) ತಾಲೂಕಿನ ದೊಡ್ಡ ಆಲತ್ತೂರು ಗ್ರಾಮದಲ್ಲಿ ರಾಜಮ್ಮ ಎಂಬುವವರ ಜಮೀನಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ಬೇಸತ್ತ ರಾಜಮ್ಮ ಅವರು ನುಗ್ಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೊಡ್ಡ ಆಲತ್ತೂರು ಗ್ರಾಮದಲ್ಲಿ ರಾಜಮ್ಮ ಅವರದ್ದು 90 ಸೆಂಟ್ ಜಾಗವಿದೆ. ಈ ಜಾಗದಲ್ಲಿ ರಾಜಮ್ಮ ಅವರು ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಇದರಲ್ಲಿ 20 ಸೆಂಟ್ ಜಾಗ ಸರ್ಕಾರದ್ದು ಎಂದು ಹೇಳಿದ ಅಧಿಕಾರಿಗಳು ಏಕಾಏಕಿ ಬಂದು ಜಾಗ ಅಳತೆ ಮಾಡಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮುಂದಾದರು.
ರಾಜಮ್ಮನ ಕುಟುಂಬಸ್ಥರು ಎಷ್ಟೇ ಪರಿ ಪರಿಯಾಗಿ ಬೇಡಿಕೊಂಡರು ಕರುಣೆ ತೋರದೆ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮುಂದಾದ ಪರಿಣಾಮ ಈಗ ರಾಜಮ್ಮ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತರ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಅಧಿಕಾರಿಗಳೇ ಈ ಸಾವಿಗೆ ನೇರವಾದ ಹೊಣೆಯೆಂದು ಆರೋಪಿಸಿದರು.
ಇದನ್ನೂ ಓದಿ: ಉದ್ಯಮಿಯಿಂದ 3.70 ಲಕ್ಷ ರೂ. ಕಿತ್ತುಕೊಂಡು ಪರಾರಿಯಾದ ಪೊಲೀಸ್ ಆ್ಯಂಡ್ ಟೀಂ
ಶಾಸಕ ಎಂ ಆರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಕುಟುಂಬಸ್ಥರು ಮೃತ ರಾಜಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಿದರು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನಾದಾರಕ್ಕೆ ಇದ್ದ ತುಂಡು ಭೂಮಿಯನ್ನ ಕಿತ್ತು ಕೊಳ್ಳಲು ಯತ್ನಿಸಿದ ಅಧಿಕಾರಿಗಳ ಈ ವರ್ತನೆಯಿಂದು ಒಂದು ಜೀವ ಬಲಿಯಾಗಿದ್ದು ನಿಜಕ್ಕೂ ದುರಂತವೇ ಸರಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Sat, 16 August 25



