ಚಾಮರಾಜನಗರ: ಉದ್ಯಮಿಯಿಂದ 3.70 ಲಕ್ಷ ರೂ. ಕಿತ್ತುಕೊಂಡು ಪರಾರಿಯಾದ ಪೊಲೀಸ್ ಆ್ಯಂಡ್ ಟೀಂ
ಚಾಮರಾಜನಗರದ ಸೈಬರ್ ಕ್ರೈಂ ಪಿಎಸ್ಐ ಅಯ್ಯನಗೌಡ ಮತ್ತು ಅವರ ತಂಡವು ತಮಿಳುನಾಡು ಮೂಲದ ಉದ್ಯಮಿಯೊಬ್ಬರಿಂದ 3.7 ಲಕ್ಷ ರೂಪಾಯಿಗಳನ್ನು ಹೆದರಿಸಿ ವಸೂಲಿ ಮಾಡಿದೆ. ಈ ಪ್ರಕರಣದಲ್ಲಿ ಪಿಎಸ್ಐ ಮತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಪೊಲೀಸರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. ಪ್ರಕರಣ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಚಾಮರಾಜನಗರ, ಜುಲೈ 28: ಚಾಮರಾಜನಗರ (Chamrajnagar) ಸೈಬರ್ ಕ್ರೈಂ ಪೊಲೀಸ್ (Cyber Crime Police) ಠಾಣೆಯ ಪಿಎಸ್ಐ ಅಯ್ಯನಗೌಡ ಮತ್ತು ಈತನ ಗ್ಯಾಂಗ್ ತಮಿಳುನಾಡು ಮೂಲದ ಉದ್ಯಮಿಯೊಬ್ಬರಿಗೆ ಹೆದರಿಸಿ 3 ಲಕ್ಷದ 70 ಸಾವಿರ ರೂ. ವಸೂಲಿ ಮಾಡಿದೆ. ಪ್ರಕರಣ ಸಂಬಂಧ ಪಿಎಸ್ಐ ಅಯ್ಯನಗೌಡ, ಪೊಲೀಸ್ ಪೇದೆಗಳಾದ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಪೊಲೀಸ್ ಪೇದೆ ಬಸವಣ್ಣ, ಸೈಯದ್ ಅನ್ಸಾರಿ ಹಾಗೂ ಇಮ್ರಾನ್ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿಟಿ ಕವಿತಾ ಆದೇಶ ಹೊರಡಿಸಿದ್ದಾರೆ.
ತಮಿಳನಾಡು ಉದ್ಯಮಿ ಸಚ್ಚಿದಾನಂದ ಮೂರ್ತಿ ಅವರಿಗೆ ಆರೋಪಿಗಳಾದ ಸೈಯದ್ ಅನ್ಸಾರಿ ಹಾಗೂ ಇಮ್ರಾನ್ ಕರೆ ಮಾಡಿ, 3 ಲಕ್ಷ ಹಣ ತೆಗೆದುಕೊಂಡು ಬನ್ನಿ ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಇವರ ಮಾತು ನಂಬಿದ ಉದ್ಯಮಿ ಸಚ್ಚಿದಾನಂದ ಜುಲೈ 26 ರಂದು 3 ಲಕ್ಷ ಹಣ ತಗೆದುಕೊಂಡು ಚಾಮರಾಜನಗರದ ಡೆಲ್ಲಿ ದರ್ಬಾರ್ ಹೋಟೇಲ್ಗೆ ಬಂದಿದ್ದಾರೆ.
ಸಚ್ಚಿದಾನಂದ ಮೂರ್ತಿ ಹಣ ತಂದಿರುವ ವಿಚಾರವನ್ನು ಅನ್ಸಾರಿ ಹಾಗೂ ಸೈಯದ್ ಸಿಇಎನ್ ಠಾಣೆಯ ಪಿಎಸ್ಐ ಅಯ್ಯನಗೌಡಗೆ ತಿಳಿಸಿದ್ದಾರೆ. ಬಳಿಕ, ಪಿಎಸ್ಐ ಅಯ್ಯನಗೌಡ ಮೂರು ಜನ ಪೇದೆಗಳನ್ನು ಕರೆದುಕೊಂಡು ಡೆಲ್ಲಿ ದರ್ಬಾರ್ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಉದ್ಯಮಿ ಸಚ್ಚಿದಾನಂದ ಅವರಿಗೆ ಧಮ್ಕಿ ಹಾಕಿ, “ಕೇಸ್ ರಿಜಿಸ್ಟರ್ ಆಗಬಾರದು ಅಂದ್ರೆ 4 ಲಕ್ಷ ರೂ. ಕೊಡು ಎಂದು ಹೇಳಿದ್ದಾರೆ. ನಂತರ, ಉದ್ಯಮಿ ಸಚ್ಚಿದಾನಂದ ಬಳಿ ಇದ್ದ 3 ಲಕ್ಷ ರೂ. ಕಿತ್ತುಕೊಂಡಿದ್ದಾರೆ. ಅಲ್ಲದೆ 70 ಸಾವಿರ ಹಣವನ್ನ ಫೋನ್ ಪೇ ಮೂಲಕ ಅನ್ಸಾರಿ ಖಾತೆಗೆ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಟ್ಟೆ ವ್ಯಾಪರಿಯನ್ನ ಬುಟ್ಟಿಗೆ ಹಾಕಿಕೊಂಡು ಮನೆಗೆ ಕರೆಸಿಕೊಂಡ ಯುವತಿ: ಲಾಕ್ ಆಗಿದ್ದು ಪೊಲೀಸಪ್ಪ
ಈ ಸಂಬಂಧ ಉದ್ಯಮಿ ಸಚ್ಚಿದಾನಂದ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್ನನ್ನು ಬಂಧಿಸಿದ್ದಾರೆ. ಬಂಧನ ವಿಚಾರ ತಿಳಿಯುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಪೊಲೀಸ್ ಪೇದೆಗಳಾದ ಬಸವಣ್ಣ, ರಮೇಶ್ ಹಾಗೂ ಮೋಹನ್ ತಲೆ ಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಪೊಲೀಸರ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧಕಾರ್ಯ ನಡೆಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Mon, 28 July 25







