ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ಟೆಕ್ಕಿಗೆ ಪಂಗನಾಮ
ಬೆಂಗಳೂರಿಲ್ಲಿ ಹನಿಟ್ರ್ಯಾಪ್ ಜಾಲ ಪಕ್ರರಣಗಳು ಮೇಲಿಂದ ಮೇಲೆ ದಾಖಲಾಗುತ್ತಿವೆ. ಇತ್ತೀಚಿಗಷ್ಟೇ ಓರ್ವ ಶಿಕ್ಷಕಿ ಹನಿಟ್ರ್ಯಾಪ್ ಮಾಡಿ ಓರ್ವ ಪೋಷಕನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಳು. ಈ ಬೆನ್ನಲ್ಲೇ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ದಾಖಲಾಗಿವೆ. ಆರೋಪಿಗಳು ಟೆಕ್ಕಿಯನ್ನು ತಮ್ಮ ಖೆಡ್ಡಗೆ ಕೆಡವಿಕೊಂಡು ಹೆದರಿಸಿ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ.

ಬೆಂಗಳೂರು, ಜುಲೈ 28: ಹನಿಟ್ರ್ಯಾಪ್ (Honeytrap) ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರಿನ (Bengaluru) ಯಲಹಂಕ ನ್ಯೂಟೌನ್ ಪೊಲೀಸರು ಬಂಧಸಿದ್ದಾರೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್, ಬೀರಬಲ್ ಹಾಗೂ ಸಂಗೀತಾ ಬಂಧಿತ ಆರೋಪಿಗಳು. ಆರೋಪಿಗಳು ಹನಿಟ್ರ್ಯಾಪ್ ಹೆಸರಿನಲ್ಲಿ ಟೆಕ್ಕಿ ರಾಕೇಶ್ ರೆಡ್ಡಿ ಎಂಬುವರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದರು. ಆರೋಪಿ ಸಂಗೀತಾ ಪಂಬಲ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಸಂತ್ರಸ್ತ ರಾಕೇಶ್ ರೆಡ್ಡಿ ಅವರನ್ನು ಪರಿಚಯ ಮಾಡಿಕೊಂಡಿದ್ದಾಳೆ.
ನಂತರ, ರಾಕೇಶ್ ರೆಡ್ಡಿ ಅವರನ್ನು ರೂಂಗೆ ಕರೆಸಿಕೊಂಡು ಮದ್ಯಪಾನ ಮಾಡಿಸಿದ್ದಾಳೆ. ಇದೇ ವೇಳೆ ರೂಂಗೆ ಉಳಿದ ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ಬಳಿಕ, ಸಂಗೀತಾಳ ಬ್ಯಾಗ್ನಲ್ಲಿದ್ದ ಬೇಕಿಂಗ್ ಸೋಡಾವನ್ನು ತೋರಿಸಿ, “ನೀವು ಡ್ರಗ್ ಪಾರ್ಟಿ ಮಾಡುತ್ತಿದ್ದೀರಾ? ನಿಮ್ಮನ್ನು ಪೊಲೀಸರಿಗೆ ಹಿಡಿದು ಕೊಡುತ್ತೇವೆ” ಎಂದು ರಾಕೇಶ್ ರೆಡ್ಡಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಹೀಗೆ ಬೆದರಿಸಿ ರಾಕೇಶ್ ರೆಡ್ಡಿ ಅವರಿಂದ ಆರೋಪಿಗಳು ಎರಡು ಲಕ್ಷ ಹಣ ದರೋಡೆ ಮಾಡಿದ್ದಾರೆ. ಈ ಬಗ್ಗೆ ಟೆಕ್ಕಿ ರಾಕೇಶ್ ರೆಡ್ಡಿ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಒಂದು ಕಿಸ್ಗೆ 50 ಸಾವಿರ ರೂ! ಲಕ್ಷಾಂತರ ರೂ. ಸುಲಿಗೆ: ಬೆಂಗಳೂರಿನಲ್ಲಿ ಖತರ್ನಾಕ್ ಟೀಚರ್, ಹನಿಟ್ರ್ಯಾಪ್ ಗ್ಯಾಂಗ್ ಬಂಧನ
ಹನಿಟ್ರ್ಯಾಪ್ ಸುಂದರಿಯ ಬಂಧನ
ಮೈಸೂರು: ಹನಿಟ್ರ್ಯಾಪ್ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿಗಳಾದ ಕವನ, ಸೈಫ್ರನನ್ನು ಪೊಲೀಸರು ಕೇರಳದ ಕಣ್ಣೂರಿನ ಲಾಡ್ಜ್ನಲ್ಲಿ ಬಂಧಿಸಿದ್ದರು.
ಆರೋಪಿಗಳು ಕಂಪಲಾಪುರದ ಬಟ್ಟೆ ಅಂಗಡಿ ಮಾಲೀಕ ದಿನೇಶ್ ಅವರನ್ನು ತಮ್ಮ ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿಕೊಂಡು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದೇ ಪ್ರಕರಣದಲ್ಲಿ ಹುಣಸೂರು ಪೊಲೀಸ್ ಪೇದೆ ಸಹ ಶಿವಣ್ಣ ಭಾಗಿಯಾಗಿದ್ದನು. ಪ್ರಕರಣ ಸಂಬಂಧ ಬೈಲಕುಪ್ಪೆ ಠಾಣೆ ಪೊಲೀಸರು ಈಗಾಗಲೆ ಪೊಲೀಸ್ ಪೇದೆ ಶಿವಣ್ಣ, ಆನಂದ್ ಹಾಗೂ ಮೂರ್ತಿಯನ್ನು ಬಂಧಿಸಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪೊಲೀಸ್ ಪೇದೆ ಶಿವಣ್ಣ ಸುಂದರ ಯುವತಿಯನ್ನು ಮುಂದೆ ಬಿಟ್ಟು ಶ್ರೀಮಂತ ವ್ಯಕ್ತಿಗಳನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದನು. ಪ್ರಕರಣದಲ್ಲಿ ಎ1 ಮೂರ್ತಿ, ಎ2 ಪೊಲೀಸ್ ಪೇದೆ ಶಿವಣ್ಣ ಹಾಗೂ ಕವನ ಮತ್ತು ಸೈಫರ್. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದ ನಿವಾಸಿಯಾದ ದಿನೇಶ್ ಕುಮಾರ್ ವಂಚನೆಗೆ ಒಳಗಾದವರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Mon, 28 July 25







