ಎಚ್ಚರ ಎಚ್ಚರ: ಕರ್ನಾಟಕದಲ್ಲಿ ಅಮಲು ಬರುವ ಸಿರಪ್​ ಮಾರಾಟ ಗ್ಯಾಂಗ್ ಪತ್ತೆ

ಅಮಲು ಬರುವ ಸಿರಪ್​ಗಳನ್ನ ಅಕ್ರಮವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್​ನ ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 1.24 ಲಕ್ಷ ರೂಪಾಯಿ ಮೌಲ್ಯದ ಸಿರಪ್​ ಹಾಗೂ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಹು ದಿನಗಳಿಂದ ಈ ಕೃತ್ಯ ನಡೆಸಿಕೊಂಡು ಬಂದಿರೋದು ತನಿಖೆ ವೇಳೆ ಗೊತ್ತಾಗಿದೆ.

ಎಚ್ಚರ ಎಚ್ಚರ: ಕರ್ನಾಟಕದಲ್ಲಿ ಅಮಲು ಬರುವ ಸಿರಪ್​ ಮಾರಾಟ ಗ್ಯಾಂಗ್ ಪತ್ತೆ
ಬಂಧಿತ ಆರೋಪಿಗಳು
Edited By:

Updated on: Oct 14, 2025 | 7:55 PM

ದಾವಣಗೆರೆ, ಅಕ್ಟೋಬರ್​ 14: ಕೆಮ್ಮಿನ ಸಿರಪ್​ನಿಂದಾಗಿ ಮಕ್ಕಳ ಸರಣಿ ಸಾವಿನ ಘಟನೆ ಮಾಸುವ ಮುನ್ನವೇ ಅಮಲು ಬರುವ ಸಿರಪ್​ಗಳನ್ನ ಅಕ್ರಮವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್​ನ ದಾವಣಗೆರೆಯಲ್ಲಿ (Davanagere) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಘಟನೆ ಸಂಬಂಧ ಐವರು ಆರೋಪಿಗಳನ್ನ ಬಂಧಿಸಲಾಗಿದ್ದು, ಬಂಧಿತರಿಂದ 1.24 ಲಕ್ಷ ರೂಪಾಯಿ ಮೌಲ್ಯದ ಸಿರಪ್​ ಹಾಗೂ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ವಿದ್ಯಾವಂತರ ನಗರ ಎಂದು ಖ್ಯಾತಿ ಪಡೆದಿರೋ ದಾವಣಗೆರೆಯಲ್ಲಿ ಇಂತಹ ಘಟನೆ ನಡೆದಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಮಲು ಬರುವ ಸಿರಪ್​ ಬಾಟಲ್ಗಳನ್ನ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಯುವಕರನ್ನ ಟಾರ್ಗೆಟ್​ ಮಾಡಿ, ವೈದ್ಯರ ಸಲಹೆ ಇಲ್ಲದೆ ಹೆಚ್ಚಿನ ಬೆಲೆಗೆ ಸಿರಪ್​ ಮಾರುತ್ತಿದ್ದ ತಂಡವನ್ನ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದ ಮಾದಕ ದ್ರವ್ಯ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಬಂಧಿತರನ್ನು ನಗರದ ಎಸ್​ಪಿಎಸ್​ ನಗರದ ನಿವಾಸಿ ಶಿವಕುಮಾರ್​, ಮಹಬೂಬ್ ನಗರದ ನಿವಾಸಿ ಅಜಿಮುದ್ದೀನ್, ದೇವರಾಜ ಅರಸ್​ ಬಡಾವಣೆಯ ಮಹಮದ್ ಶಾರೀಕ್, ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸೈಯದ್ ಬಾಬು ಅಲಿಯಾಸ್ ಯೂನೂಸ್ ಹಾಗೂ ಚನ್ನಗಿರಿ ಟೌನ್ ನಿವಾಸಿ ಅಬ್ದುಲ್ ಗಫರ್ ಎಂದು ಗರುತಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಶಾಲಾ ಕಟ್ಟಡದಿಂದ ಹಾರಿ 17 ವರ್ಷದ ಬಾಲಕ ಸಾವು

ಆರೋಪಿಗಳು ಬಹು ದಿನಗಳಿಂದ ಈ ಕೃತ್ಯ ನಡೆಸಿಕೊಂಡು ಬಂದಿರೋದು ತನಿಖೆ ವೇಳೆ ಗೊತ್ತಾಗಿದೆ. ಬಂಧಿತರಿಂದ 100 ಎಂ.ಎಲ್​.ನ ಒಟ್ಟು 340 Broncof-C cough Syrup ಬಾಟಲ್‌, Edex Cd Syrupನ 15 ಬಾಟಲ್​, 20 ಸಣ್ಣ ಬಾಕ್ಸ್​ಗಳಲ್ಲಿದ್ದ Aceclofenac + paracetamol + serratiopeptidase ಮಾತ್ರೆಗಳು ಸೇರಿ 1200 ನಗದನ್ನ ವಶ ಪಡಿಸಿಕೊಳ್ಳಲಾಗಿದೆ. ಕೂಲಿ ಕಾರ್ಮಿಕರು ಮತ್ತು ಬಡವರ ಮಕ್ಕಳೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಇಂತಹ ಸಿರಪ್​ಗಳ ಮಾರಾಟ ಮೆಡಿಕಲ್​ಗಳಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿದ್ದು, ಅವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 7:45 pm, Tue, 14 October 25