ಭೂತ-ಪ್ರೇತ, ಭಾನಮತಿ, ಮಾಟ-ಮಂತ್ರ, ಬಲಿಕೊಡುವ ಪದ್ಧತಿ, ಮೂಢನಂಬಿಕೆಗಳು (superstitions) ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ ಬೇರೆ ದೇಶಗಳಲ್ಲೂ ವ್ಯಾಪಕವಾಗಿವೆ ಮಾರಾಯ್ರೇ. ಎಲ್ಲಾ ಆಯಾಮಗಳಲ್ಲೂ ಇತರ ದೇಶಗಳಿಗಿಂತ ತಾನು ಮುಂದೆ ಎಂದು ಹೇಳಿಕೊಳ್ಳುವ ಅಮೆರಿಕಾದಲ್ಲೂ ಇವೆಲ್ಲ ನಡೆಯುತ್ತವೆ. ಅಲ್ಲಿನ ಮ್ಯಾಸಾಚ್ಯೂಸೆಟ್ಸ್ (Massachusetts), ಒರೆಗಾನ್ ರಾಜಧಾನಿ ಸಲಮ್ ನಲ್ಲಿ (salem) ಮಾಟ-ಮಂತ್ರ, ಬಲಿಕೊಡೋದು ಮೊದಲಾದವೆಲ್ಲ ಜಾಸ್ತಿ. ಆದರೆ ನಾವಿಲ್ಲಿ ಹೇಳುತ್ತಿರುವ ಕತೆ ಆ ಭಾಗದ್ದಲ್ಲ, ಬದಲಿಗೆ ನ್ಯೂ ಜರ್ಸಿಯ ಸ್ಪ್ರಿಂಗ್ ಫೀಲ್ಡ್ ನಲ್ಲಿ ನಡೆದಿದ್ದು.
ಅದು ಡಿಪಾಲ್ಮಳ ದೇಹ!
1972 ರಲ್ಲಿ ಅದೊಂದು ದಿನ ನಾಯಿಯೊಂದು ಕೊಳೆತು ನಾರುತ್ತಿದ್ದ ಮಾನವ ಮುಂಗೈಯನ್ನು ಬಾಯಲ್ಲಿ ಕಚ್ಚಿಕೊಂಡು ಸ್ಪ್ರಿಂಗ್ ಫೀಲ್ಡ್ ನ ಬೀದಿಗಳಲ್ಲಿ ಓಡಾಡುತ್ತಾ ತನ್ನ ಮಾಲೀಕನ ಮನೆಗೆ ವಾಪಸ್ಸಾಗಿತ್ತು. ಪೊಲೀಸರು ನಾಯಿ ಓಡಾಡಿರಬಹುದಾದ ಜಾಡನ್ನು ಹುಡುಕುತ್ತಾ ಹೋದಾಗ ಅವರು ತಲುಪಿದ್ದು ದೊಡ್ಡ ಬಂಡೆಯೊಂದರ ಮೇಲ್ಭಾಗವನ್ನು. 6-ವಾರಗಳಿಂದ ನಾಪತ್ತೆಯಾಗಿದ್ದ 16-ವರ್ಷ-ವಯಸ್ಸಿನ ಜಾನೆಟ್ ಡಿಪಾಲ್ಮ ಹೆಸರಿನ ಯುವತಿಯ ದೇಹ ಅಲ್ಲಿ ಪತ್ತೆಯಾಯಿತು.
ದೇಹ ಪತ್ತೆಯಾದ ಸಂಗತಿ ಹಬ್ಬುತ್ತಿದ್ದಂತೆಯೇ ಅವಳ ಸಾವಿನ ಬಗ್ಗೆ ನೂರಾರು ಕತೆಗಳು ಹುಟ್ಟಿಕೊಂಡು ಹರಿದಾಡಲಾರಂಭಿಸಿದವು. ಅವಳ ದೇಹ ಬಂಡೆಯ ಮೇಲಿದ್ದ ಕಂಬವೊಂದರ ಮೇಲೆ ನೇತು ಹಾಕಲಾಗಿತ್ತು ಅಂತ ಕೆಲವರು ಹೇಳಿದರು. ಅವಳ ದೇಹದ ಮೇಲೆ ವಾಮಾಚಾರ ನಡೆದ ಗುರುತುಗಳಿದ್ದವು.
ಡಿಪಾಲ್ಮಳ ನರಬಲಿ?
ಸ್ಪ್ರಿಂಗ್ ಫೀಲ್ಡ್ ನ ಹಲವಾರು ನಿವಾಸಿಗಳ ಹಾಗೆ ಪೊಲೀಸರು ಕೂಡ ಡಿಪಾಲ್ಮಳನ್ನು ನರಬಲಿಯಾಗಿ ಅರ್ಪಿಸಲಾಗಿದೆ ಅಂತ ಹರಿದಾಡುತ್ತಿದ್ದ ಸುದ್ದಿಯನ್ನು ನಂಬಿದರು. ಅಮೆರಿಕದಲ್ಲಿ ವಾಮಾಚಾರ, ಭಾನಾಮತಿ ನಡೆಸುವವರನ್ನು ಮತ್ತು ಮಾಂತ್ರಿಕರೆಂದು ಹೇಳಿಕೊಳ್ಳುವವರನ್ನು ಸೆಟಾನಿಸ್ಟ್ ಗಳೆಂದು ಕರೆಯುತ್ತಾರೆ.
ಡಿಪಾಲ್ಮಳ ದೇಹ ಸಿಕ್ಕ ದಿನಗಳಲ್ಲೇ ಸ್ಪ್ರಿಂಗ್ ಫೀಲ್ಡ್ ಪ್ರದೇಶದಲ್ಲಿ ಪ್ರವಾಹ ಬಂದಿದ್ದರಿಂದ ಸಾಕ್ಷ್ಯಗಳು ನಾಶವಾಗಿದ್ದವು. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಡಿಪಾಲ್ಮಳ ದೇಹ ಕೊಳೆತಿದ್ದರಿಂದ ಪೊಲೀಸರಿಗೆ ಸಾವಿನ ಕಾರಣ ಪತ್ತೆ ಮಾಡುವುದು ಕಷ್ಟವಾಯಿತು.
ನಿರಾಶ್ರಿತನ ಮೇಲೆ ಸಂಶಯ!
ಸ್ಪ್ರಿಂಗ್ ಫೀಲ್ಡ್ ನ ಏರಿಯಾವೊಂದರಲ್ಲಿ ನಿರಾಶ್ರಿತನಾಗಿ ಒಬ್ಬಂಟಿ ಬದುಕು ನಡೆಸುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಪ್ರಬಲ ಶಂಕಿತನಾಗಿ ಕಂಡ. ಆದರೆ ಅವನ ವಿರುದ್ಧ ಯಾವುದೇ ಪುರಾವೆ ಸಿಗಲಿಲ್ಲ.
ಮಾಟಮಂತ್ರದ ವಿಷಯಕ್ಕೆ ಬಂದರೆ, ಡಿಪಾಲ್ಮ ಆ ಸಂಗತಿಗಳನ್ನು ದ್ವೇಷಿಸುತ್ತಿದ್ದಳು ಮತ್ತು ಸೈತಾನ-ಆರಾಧಕರನ್ನು ದೇವರೆಡೆ ತಿರುಗಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಳು. ವಾಮಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ದೇವರನ್ನು ನಂಬುವಂತೆ ಜನರಿಗೆ ಬೋಧಿಸುತ್ತಿದ್ದ ಧಾರ್ಮಿಕ ಸಂಸ್ಥೆಯೊಂದರ ಸದಸ್ಯೆಯಾಗಿದ್ದಳು.
ಸತ್ಯ ಹೊರಬೀಳಲಿಲ್ಲ!
ಸಂಸ್ಥೆಯನ್ನು ನಡೆಸುತ್ತಿದ್ದ ಪ್ರೀಚರೊಬ್ಬರ ಪ್ರಕಾರ ಸೈತಾನ ಆರಾಧಕರು ಡಿಪಾಲ್ಮಳನ್ನು ನರಬಲಿಯಾಗಿ ಅರ್ಪಿಸಿದ್ದರು. ನರಬಲಿಯ ಭಾಗವಾಗಿಯೇ ಅವಳ ಹತ್ಯೆಯಾಯಿತೆ? ಅಥವಾ ನಿಜವಾದ ಹಂತಕನ್ನು ಉಳಿಸಲು ನರಬಲಿಯ ಕತೆ ಹರಿಬಿಡಲಾಯಿತೇ?
ಸತ್ಯ ಹೊರಬೀಳಲೇ ಇಲ್ಲ!