ಹಿಂದೂ ಸ್ನೇಹಿತೆಗೆ ಬಿರಿಯಾನಿ ಕೊಟ್ಟಿದ್ದಕ್ಕೆ ಕೊಲೆ ಬೆದರಿಕೆ; ನಾಲ್ವರ ವಿರುದ್ಧ ಎಫ್ಐಆರ್ ದಾಖಲು
ಮನೆಗೆ ಹಿಂದೂ ಸ್ನೇಹಿತೆಯನ್ನು ಕರೆಸಿ ಬಿರಿಯಾನಿ ಕೊಟ್ಟಿದ್ದಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಲ್ವರು ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಗಳೂರು: ಮನೆಗೆ ಹಿಂದೂ ಸ್ನೇಹಿತೆಯನ್ನು ಕರೆಸಿ ಬಿರಿಯಾನಿ ಕೊಟ್ಟಿದ್ದಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ನಿವಾಸಿ ಸಂಶೀನಾ, ಸ್ನೇಹಿತೆ ಕಾವ್ಯಾಳನ್ನು ಮನೆಗೆ ಕರೆಸಿ ಬಿರಿಯಾನಿ ಕೊಡಿಸಿದ್ದಳು. ಇದನ್ನು ಗಮನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಶೀನಾ ಮನೆ ಮುಂದೆ ಗಲಾಟೆ ಮಾಡಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಸಂಶೀನಾ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಸುದರ್ಶನ್ ಗೆಲ್ಗೊಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮ ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಕಾವ್ಯಾಳ ಅಕ್ಕ ಗರ್ಭಿಣಿಯಾಗಿದ್ದು, ಬಿರಿಯಾನಿ ತಿನ್ನುವ ಆಸೆಯಿಂದ ನಮ್ಮ ಮನೆಯಿಂದ ಬಿರಿಯಾನಿ ತೆಗೆದುಕೊಂಡು ಹೋಗಲು ನಾನು ಮತ್ತು ಕಾವ್ಯ ಆಟೋದಲ್ಲಿ ಹೋಗುತ್ತಿದ್ದೇವು. ಈ ವೇಳೆ ಸುದರ್ಶನ್ ಗೆಲ್ಗೊಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮ ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ಸೇರಿದಂತೆ ಇತರರು ಮನೆ ಮುಂದೆ ಅಕ್ರಮ ಕೂಟವಾಗಿ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡಿದ್ದಾರೆ ಎಂದು ಆರೋಪಿಸಿ ಗುರುವಾರದಂದು ಸಂಶೀನಾ ದೂರು ನೀಡಿದ್ದು, ಇಂದು ಪ್ರಕರಣ ದಾಖಲಾಗಿದೆ.
ಜು.12ರಂದು ಕೊಯಿಲಾದ ಮುಸ್ಲಿಂ ಯುವತಿ ಸಂಶೀನಾ ತನ್ನ ಮನೆಗೆ ಕಾವ್ಯಾಳನ್ನು ಆಟೋದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ಹಿಂದೂ ಕಾರ್ಯಕರ್ತರು ಕಾರು, ಬೈಕ್ಗಳಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಆಟೋ ಮನೆ ಬಳಿ ತಲುಪುತ್ತಿದ್ದಂತೆ ಅಡ್ಡ ಹಾಕಿ ನೈತಿಕ ಪೊಲೀಸ್ ಗಿರಿ ಮಾಡಿದ್ದರು.
ಅಧಿಕಾರಿ ರಾಜಕುಮಾರ ವಿರುದ್ಧ ನವ್ಯಶ್ರೀ ದೂರು
ಬೆಳಗಾವಿ: ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಬೇರೆ ವೆಬ್ಸೈಟ್ಗಳಿಗೆ ಮಾರಾಟ ಮಾಡಿ ಹನಿಟ್ರ್ಯಾಪ್ ಮಾಡಿದ ಅಧಿಕಾರಿ ರಾಜಕುಮಾರ ವಿರುದ್ಧ ದೂರು ನೀಡುವುದಾಗಿ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಹೇಳಿದ್ದಾರೆ. ಕಿಡ್ನಾಪ್, ಸಾರ್ವಜನಿಕ ಜೀವನಕ್ಕೆ ತೊಂದರೆ ಕೊಟ್ಟು ಮಾನ ಹರಣ, ಅಶ್ಲೀಲ ವಿಡಿಯೋ ಚಿತ್ರೀಕರಣ, ಹನಿಟ್ರ್ಯಾಪ್ ಮಾಡಲಾಗಿದ್ದು, ಈ ಎಲ್ಲದರ ಬಗ್ಗೆ ದೂರು ದಾಖಲಿಸಲಾಗುವುದು. ಕುಮಾರಕೃಪಾ ಗೆಸ್ಟ್ ಹೌಸ್ನಲ್ಲಿ ಒಂದು ವಿಡಿಯೋ ಮಾಡಿದ್ದಾನೆ. ಸರ್ಕಾರಿ ಬಂಗಲೆ ದುರುಪಯೋಗ ಮಾಡಿಕೊಂಡಿದ್ದರ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಿನ್ನೆ ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಬಂದಿದ್ದೇನೆ. ಇಂದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದಿದ್ದಾರೆ.
ಆಪರೇಷನ್ ಕಮಲದ ವೇಳೆ ಅತೃಪ್ತ ಶಾಸಕರನ್ನ ಬೆಂಬಲಿಸಿದ ವಿಚಾರದ ಬಗ್ಗೆ ಮಾತನಾಡಿದ ನವ್ಯಶ್ರೀ, ಮುಂಬೈಗೆ ಹೋದ ಶಾಸಕರ ಚಲನವಲನಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪಕ್ಷದ ಪ್ರಭಾವಿ ನಾಯಕರೇ ನಮಗೆ ಟಾಸ್ಕ್ ನೀಡಿದ್ದರು. ಅವರಿದ್ದ ಹೊಟೆಲ್ನಲ್ಲಿದ್ದುಕೊಂಡು ಅತೃಪ್ತ ಶಾಸಕರ ಚಲನವಲನ ಗಮನಿಸಿವುದು ಟಾಸ್ಕ್ನ ಉದ್ದೇಶವಾಗಿತ್ತು. ಹನಿ ಟ್ಯ್ರಾಪ್ ಮಾಡುವ ಉದ್ದೇಶ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಆಸ್ತಿ ಆಸೆಗೆ ಪತಿಯಿಂದ ಪತ್ನಿ ಮೇಲೆ ವಾಮಾಚಾರ
ರಾಯಚೂರು: ಆಸ್ತಿ ಆಸೆಗೆ ಬಿದ್ದ ಪತಿಮಹಾಶಯನೊಬ್ಬ ಪತ್ನಿಗೆ ಕಿರುಕುಳ ನೀಡಿದ ಪರಿಣಾಮ ಆಕೆ ಮನನೊಂದು ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ರಾಯಚೂರು ತಾಲ್ಲೂಕಿನ ಬಾಪೂರಿನಲ್ಲಿ ನಡೆದಿದೆ. ನವಿತಾ (23)ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆಯಾಗಿದ್ದಾಳೆ. ಘಟನೆ ಬೆಳಕಿಗೆ ಬರ್ತಿದ್ದಂತೆಯೇ ಆಂದ್ರಪ್ರದೇಶಕ್ಕೆ ತಲೆಮರೆಸಿಕೊಂಡಿರುವ ನವಿತಾಳ ಪತಿ ಶ್ರೀರಾಮುಲು ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನವಿತಾಳ ಪೋಷಕರು ಮಾಡಿದ್ದ 9 ಎಕರೆ ಆಸ್ತಿ ಮೇಲೆ ಕಣ್ಣು ಹಾಕಿದ್ದ ಶ್ರೀರಾಮುಲು ಆಸ್ತಿಯ ಆಸೆಗೆ ಬಿದ್ದು ನವಿತಾಳನ್ನು 2022ರ ಫೆ.13ರಂದು ವಿವಾಹವಾಗಿದ್ದನು. ಕೇವಲ ಮೂರೇ ದಿನ ಪತ್ನಿ ಜೊತೆಗಿದ್ದ ಪತಿ ಶ್ರೀರಾಮುಲು, ಆಕೆಯ ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡುವ ರಕ್ಕಸ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾನೆ. ಅಲ್ಲದೆ ಪತಿಯ ಅರಸಿಗೇರಾ ಗ್ರಾಮದಲ್ಲಿ ನವಿತಾಳ ತಾಯಿ ಹೆಸರಿನಲ್ಲಿ 9 ಎಕರೆ ಆಸ್ತಿಯಲ್ಲಿ ಪಾಲು ಕೇಳುವಂತೆ ಕಾಟ ನೀಡುತ್ತಿದ್ದದ್ದಲ್ಲದೆ, ಪತ್ನಿಯ ಮೇಲೆ ವಾಮಾಚಾರ, ಮಾಟ-ಮಂತ್ರ ಪ್ರಯೋಗ ನಡೆಸುತ್ತಿದ್ದನು.
ನಿತ್ಯ ತಲೆಗೆ ನಿಂಬೆಹಣ್ಣು ಇಟ್ಟುಕೊಳ್ಳುವುದು, ಕೈಗೆ ತಾಯತ ಕಟ್ಟಿ ಮಾಟ-ಮಂತ್ರ ಪ್ರಯೋಗ ನಡೆಸುತ್ತಿದ್ದನು. ಪತಿಯ ನಿತ್ಯ ಕಿರುಕುಳದಿಂದ ಹಿಂಸೆ ಅನುಭವಿಸಿ 8 ಪುಟಗಳ ಡೆತ್ ನೋಟ್ ಬರೆದಿಟ್ಟು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.