ರಾಯಚೂರು: ಗ್ರಾಮ ಪಂಚಾಯತ್ ಎಲೆಕ್ಷನ್ ದ್ವೇಷ; ಕಾಲು ಕತ್ತರಿಸಿ ವ್ಯಕ್ತಿಯ ಭೀಕರ ಕೊಲೆ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 29, 2023 | 5:20 PM

ಬಿಸಿಲುನಾಡು ರಾಯಚೂರಿನಲ್ಲಿ ವ್ಯಕ್ತಿಯ ಭೀಕರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಲ್ಲಿ ರಕ್ಕಸರು ಬರೀ ಕೊಚ್ಚಿ ಕೊಲೆ ಮಾಡಿಲ್ಲ. ಬದಲಾಗಿ ಅದಕ್ಕೂ ಮೊದಲು ಬೈಕ್​ನಲ್ಲಿ ಹೋಗುತ್ತಿದ್ದವನಿಗೆ ಟ್ರಾಕ್ಟರ್​ನಿಂದ ಗುದ್ದಿಸಿ, ನೆಲಕ್ಕೆ ಬಿದ್ದ ಮೇಲೆ ಬರೋಬ್ಬರಿ ಒಂಬತ್ತು ಜನ ಸೇರಿ ಹತ್ಯೆ ಮಾಡಿದ್ದಾರೆ ಎನ್ನುವುದು ಪೊಲೀಸ್​ ತನಿಖೆ ವೇಳೆ ಬೆಳಕಿಗೆ ಬಂದಿದೆ.ಅಷ್ಟಕ್ಕು ಅಲ್ಲಿ ಹತ್ಯೆಗೆ ಕಾರಣವೇನು ಅಂತೀರಾ? ಇಲ್ಲಿದೆ.

ರಾಯಚೂರು: ಗ್ರಾಮ ಪಂಚಾಯತ್ ಎಲೆಕ್ಷನ್ ದ್ವೇಷ; ಕಾಲು ಕತ್ತರಿಸಿ ವ್ಯಕ್ತಿಯ ಭೀಕರ ಕೊಲೆ!
ಮೃತ ವ್ಯಕ್ತಿ
Follow us on

ರಾಯಚೂರು, ಡಿ.29: ಜಿಲ್ಲೆಯ ದೇವದುರ್ಗ(Devadurga) ತಾಲ್ಲೂಕಿನ ನಿಲವಂಜಿ ಬಳಿ ನಿನ್ನೆ(ಡಿ.28) ರಣಭೀಕರ ಘಟನೆ ನಡೆದಿತ್ತು. ಇದೇ ನಿಲವಂಜಿ ಗ್ರಾಮದ ಮಾರ್ಕಂಡಯ್ಯ ಅಲಿಯಾಸ್​ ಕಂಡೆಪ್ಪ ಎನ್ನುವ ವ್ಯಕ್ತಿಯನ್ನ ಬೀಕರವಾಗಿ ಕೊಲೆ ಮಾಡಲಾಗಿತ್ತು. ಕೂಡಲೇ ಸ್ಥಳೀಯರು ದೇವದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೂ ಒಮ್ಮೆ ಜುಮ್​ ಅನ್ನಿಸಿತ್ತು. ‘ಬೈಕ್​ನಲ್ಲಿ ಮಾರ್ಕಂಡಯ್ಯ ತನ್ನ ಸಂಬಂಧಿ ಆದಪ್ಪ ಎಂಬಾತನನ್ನು ಕರೆದುಕೊಂಡು ನಿಲವಂಜಿ ಗ್ರಾಮದಿಂದ ದೇವದುರ್ಗ ಪಟ್ಟಣಕ್ಕೆ ಹೊರಟಿದ್ದ. ಈ ವೇಳೆ ಧುರುಳರು ಆತನ ಬರುವಿಕೆಗಾಗಿ ಕಾದು, ಬೈಕ್​ ಹಿಂಬಾಲಿಸಿ ಟ್ರಾಕ್ಟರ್​ನಿಂದ ಆತನ ಬೈಕ್​ಗೆ ಗುದ್ದಿ ನೆಲಕ್ಕೆ ಕೆಡವಿದ್ದಾರೆ. ಬಳಿಕ ಆತನ ರಸ್ತೆ ಪಕ್ಕದ ಹೊಲದಲ್ಲಿ ಬಿದ್ದ ಬಳಿಕ ಆತನ ಮೇಲೆ ಕೊಡಲಿ, ಮಚ್ಚು ಹಾಗೂ ಇತರೇ ಮಾರಕಾಸ್ತ್ರಗಳಿಂದ ಆತನನ್ನ ಮನಬಂದಂತೆ ಕೊಚ್ಚಿ ಕೊಂದಿದ್ದಾರೆ ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ಹತ್ಯೆಗೆ ಗ್ರಾಮ ಪಂಚಾಯತಿ ಚುನಾವಣೆ ಕಾರಣನಾ?

ಇನ್ನು ಮಾರ್ಕಂಡಯ್ಯ ಹತ್ಯೆಗೆ ಸಂಬಂಧಿಸಿ ದಾಖಲಾಗಿರುವ ಒಂಬತ್ತು ಜನರ ಪೈಕಿ A-1 ಆರೋಪಿ ಹುಚ್ಚಪ್ಪ ಎನ್ನುವವನೇ ಇದಕ್ಕೆಲ್ಲ ಸೂತ್ರದಾರ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದಾರೆ. ಮೊದಲಿನಿಂದಲೂ ಮೃತ ಮಾರ್ಕಂಡಯ್ಯನ ಕುಟುಂಬಕ್ಕೂ ಹಾಗೂ ಆರೋಪಿ ಹುಚ್ಚಪ್ಪನ ಕುಟುಂಬಸ್ಥರ ನಡುವೆ ಹೊಲದ ವಿಚಾರವಾಗಿ ಈ ಹಿಂದಿನಿಂದಲೂ ಮನಸ್ತಾಪ ಇತ್ತಂತೆ. ಆಗಾಗ ಸಣ್ಣ ಪುಟ್ಟ ಗಲಾಟೆಗಳು ನಡೆದಿವೆಯಂತೆ. ಈ ಮಧ್ಯೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೃತ ಮಾರ್ಕಂಡಯ್ಯನ ಸಹೋದರ ಗೆದ್ದಿದ್ದ, ಆರೋಪಿ ಹುಚ್ಚಪ್ಪನ ಅಳಿಯ ಸೋಲು ಕಂಡಿದ್ದ. ಇವೆಲ್ಲದರ ದ್ವೇಷದಿಂದಲೇ ಮಾರ್ಕಂಡಯ್ಯನನ್ನ ಹತ್ಯೆ ಮಾಡಲಾಗಿದೆ ಎಂದು ಮೃತನ ಕುಟುಂಬಸ್ಥರು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು, ಶವ ಸುಟ್ಟ ಆರೋಪಿಗಳ ಬಂಧನ

ಸದ್ಯ ಘಟನೆ ಸಂಬಂಧ ದೇವದುರ್ಗ ಪೊಲೀಸರು ವಿಶೇಷ ತಂಡಗಳ ಮೂಲಕ ಹಂತಕರ ಪತ್ತೆಗೆ ಶೋಧ ಕಾರ್ಯ ನಡೆಸ್ತಿದ್ದಾರೆ. ಹತ್ಯೆಗೆ ಬಳಸಲಾದ ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದ್ದು, ಇದಷ್ಟೇ ಅಲ್ಲ, ಕೆಲ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಸಲಿಗೆ ಹತ್ಯೆಗೆ ಗ್ರಾಮ ಪಂಚಾಯತಿ ಚುನಾವಣೆ ಕಾರಣವಾ?, ಅಥವಾ ಬೇರೆ ಏನಾದರೂ ಉದ್ದೇಶ ಇದೆಯಾ ಎನ್ನುವುದರ ಬಗ್ಗೆ ತನಿಖೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ