ಧಾರವಾಡ: ತನ್ನ ಗಂಡನನ್ನು ಕಳೆದುಕೊಂಡಾಕೆಗೆ ಆನಂದ ಎಂಬವನು ಹತ್ತಿವಾಗಿದ್ದಾನೆ. ಈತನ ಬಣ್ಣಬಣ್ಣದ ಮಾತುಗಳನ್ನು ನಂಬಿದ ಆಕೆ ತನ್ನ ಪೋಷಕರಲ್ಲಿ ಮಾಹಿತಿ ನೀಡಿದ್ದಾಳೆ. ಅದರಂತೆ ಮದುವೆಗೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತು. ಮೊದಮೊದಲು ಸಂಸಾರ ಚೆನ್ನಾಗಿಯೇ ಸಾಗಿದರೂ ನಂತರ ಆನಂದ ಮದ್ಯದ ಚಟಕ್ಕೆ ಬೀಳುತ್ತಾನೆ. ಬಳಿಕ ಸಂಸಾರದಲ್ಲಿ ಬಿರುಗಾಳಿ ಏಳಲು ಆರಂಭವಾಯಿತು. ಹೀಗೆ ತವರು ಸೇರಿದಾಕೆ ಮೊಬೈಲ್ ರಿಪೇರಿ ಹೋಗಿ ಬರುವುದಾಗಿ ಹೋದವಳು ಮರಳಿ ಬಾರಲೇ ಇಲ್ಲ. ಇತ್ತ ಮಗಳ ಹುಡುಕಾಟದಲ್ಲಿದ್ದ ಆಕೆಯ ಪೋಷಕರನ್ನು ಭೇಟಿಯಾದ ಪೊಲೀಸರು, ಕೊಲೆಯಾದ ಮಹಿಳೆಯ ಫೋಟೋವೊಂದನ್ನು ತೋರಿಸಿದ್ದಾರೆ. ಇದನ್ನು ನೋಡಿದ ಪೋಷಕರು ತನ್ನ ಮಗಳೆಂದು ತಿಳಿದು ಶಾಕ್ ಆಗಿದ್ದಾರೆ.
ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರ್ಲಾನಳ್ಳಿ ಗ್ರಾಮದ ಸವಿತಾ, ರವಿ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕೆಲವೇ ವರ್ಷಗಳಲ್ಲಿ ಆತ ಅನಾರೋಗ್ಯದಿಂದ ನಿಧನ ಹೊಂದಿದ್ದನು. ಹೀಗೆ ಒಂಟಿಯಾಗಿದ್ದ ಸವಿತಾ ಜೀವನಕ್ಕಾಗಿ ನಗರದ ಹಳಿಯಾಳ ರಸ್ತೆಯಲ್ಲಿರುವ ಕಾಲೇಜೊಂದರಲ್ಲಿ ಕೆಲಸಕ್ಕೆ ಸೇರಿದಳು. ಹೀಗೆ ಜೀವನ ಸಾಗಿಸುತ್ತಿದ್ದ ಸವಿತಾಳ ಬಾಳಿನಲ್ಲಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಆನಂದ ದೂದಾನಿ ಎಂಬವನ ಎಂಟ್ರಿಯಾಗುತ್ತದೆ. ನಗರದ ಮತ್ತೊಂದು ಶಿಕ್ಷಣ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತ ನಿಧಾನವಾಗಿ ಸವಿತಾಳ ಬದುಕಿನಲ್ಲಿ ಎಂಟ್ರಿ ಕೊಟ್ಟಿದ್ದಾನೆ.
ಇವರಿಬ್ಬರ ನಡುವೆ ಆರಂಭದಲ್ಲಿ ಇದ್ದ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿತ್ತು. ಈ ವಿಚಾರವನ್ನು ಸವಿತಾ ಮನೆಯಲ್ಲಿ ಹೇಳಿದ್ದಳು. ಹೇಗಿದ್ದರೂ ಸವಿತಾ ಗಂಡನನ್ನು ಕಳೆದುಕೊಂಡು ಒಬ್ಬಂಟಿ ಜೀವನ ನಡೆಸುತ್ತಿದ್ದಾಳೆ. ಆಕೆಯ ಬದುಕಿಗೊಂದು ಆಸರೆ ಸಿಕ್ಕರೆ ತಪ್ಪೇನು ಅಂದುಕೊಂಡು ತಂದೆ-ತಾಯಿ ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದರು. ಇನ್ನು ಆನಂದ ಕೂಡ ತನ್ನ ಬಣ್ಣಬಣ್ಣದ ಮಾತುಗಳಿಂದ ಸವಿತಾಳ ಮನೆಯವರ ಮನಸ್ಸನ್ನು ಗೆದ್ದಿದ್ದ. ಅಲ್ಲದೇ ಮದುವೆಯಾದ ಬಳಿಕ ಎಲ್ಲರನ್ನು ತಾನೇ ನೋಡಿಕೊಳ್ಳೋದಾಗಿ ಹೇಳಿ ಎಲ್ಲರಿಂದ ಒಳ್ಳೆಯವನೆನಿಸಿಕೊಂಡ. ಒಂದು ದಿನ ಇಬ್ಬರೂ ಮದುವೆ ಮಾಡಿಕೊಂಡು ಬಂದು ಬಿಟ್ಟರು. ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಸವಿತಾಳ ತಂದೆ ಕರಿಯಪ್ಪ ಮತ್ತು ತಾಯಿ ಲಲಿತಾ, ಆದದ್ದೆಲ್ಲಾ ಒಳ್ಳೆಯದ್ದೇ ಅಂತಾ ಸುಮ್ಮನಾದರು. ಆದರೆ ತನಗೆ ಮೊದಲೇ ಒಂದು ಮದುವೆಯಾಗಿತ್ತು ಎಂಬ ಸತ್ಯವನ್ನು ಮುಚ್ಚಿಟ್ಟಿದ್ದನು.
ಆರಂಭದಲ್ಲಿ ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಆನಂದ ದಿನಗಳು ಕಳೆದಂತೆ ಕುಡಿತದ ಚಟಕ್ಕೆ ಬಿದ್ದ. ಈ ವೇಳೆ ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯ ಮೇಲೆ ಅನುಮಾನ ಹುಟ್ಟಿಕೊಳ್ಳಲು ಆರಂಭವಾಯಿತು. ತನ್ನಂತೆಯೇ ಸವಿತಾ ಕೆಲಸಕ್ಕೆಂದು ಹೊರಗಡೆ ಹೋಗುತ್ತಾಳೆ. ಅಲ್ಲಿ ಅನೇಕರೊಂದಿಗೆ ಮಾತನಾಡಬೇಕಾಗುತ್ತದೆ ಅನ್ನೋದು ಗೊತ್ತಿದ್ದರೂ ಆನಂದ ಆಕೆಯ ಮೇಲೆ ವಿಪರೀತವಾಗಿ ಅನುಮಾನಿಸಲು ಆರಂಭಿಸಿದ್ದಾನೆ. ಇದು ಸಹಜವಾಗಿ ಸವಿತಾಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.
ಇದೇ ವೇಳೆ ತಾನು ಸವಿತಾ ಹಾಗೂ ಆಕೆಯ ಮನೆಯವರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದಾಗಿಯೂ ಅನೇಕರ ಮುಂದೆ ಹೇಳಿಕೊಂಡಿದ್ದ. ಆದರೆ ಅಷ್ಟೊಂದು ಹಣ ಆತನ ಬಳಿ ಇದ್ದಿದ್ದಾದರೂ ಸತ್ಯವಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಈ ಸಂದರ್ಭದಲ್ಲಿ ಆನಂದನ ಕುಡಿತದ ಚಟ ಹೆಚ್ಚಾಗಿತ್ತು. ಇದೇ ವೇಳೆ ಆತನಿಗೆ ಈ ಮೊದಲೇ ಒಂದು ಮದುವೆಯಾಗಿತ್ತು ಎಂಬ ಸತ್ಯ ಸವಿತಾಳಿಗೆ ತಿಳಿದುಬಂತು. ಅದರಂತೆ ಸವಿತಾ ಆನಂದನಿಂದ ದೂರವಿರಲು ತವರು ಮನೆ ಸೇರಿದ್ದಾಳೆ.
ಈ ಎಲ್ಲ ಘಟನೆಯಿಂದ ಆನಂದ ಹುಚ್ಚನಂತಾಗಿ ಹೋಗಿದ್ದ. ಮೊದಲಿಗೆ ತಾನೇ ಇಡೀ ಮನೆಯನ್ನು ನಡೆಸುತ್ತೇನೆ ಅಂದಿದ್ದ ಆನಂದ, ಇತ್ತೀಚಿಗೆ ಪದೇ ಪದೇ ಹಣವನ್ನು ನೀಡುವಂತೆ ಸವಿತಾಳಿಗೆ ಕಾಡುತ್ತಿದ್ದ. ಅಲ್ಲದೇ ತಾನು ನೀಡಿದ್ದ ಹಣವನ್ನು ಮರಳಿ ನೀಡುವಂತೆ ಕಿರಿಕಿರಿ ಮಾಡುತ್ತಿದ್ದ. ಇಂಥ ದಿನಗಳಲ್ಲಿಯೇ ಆನಂದನಿಂದ ದೂರವಿದ್ದರೂ ಸವಿತಾಳಿಗೆ ನೆಮ್ಮದಿ ಇರಲೇ ಇಲ್ಲ.
ಅಕ್ಟೋಬರ್ 14 ರಂದು ಸಂಜೆ ಎಂದಿನಂತೆ ಕೆಲಸ ಮುಗಿಸಿಕೊಂಡು ತಾಯಿಯನ್ನು ಭೇಟಿಯಾಗಲು ಸವಿತಾ ಜಿಲ್ಲಾಸ್ಪತ್ರೆಗೆ ಬಂದಳು. ಕೆಲ ಹೊತ್ತು ಕಳೆದ ಬಳಿಕ ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರೋದಾಗಿ ಹೇಳಿ ಹೋದಾಕಿ ವಾಪಸ್ ಬರಲಿಲ್ಲ. ಅದರಂತೆ ತಂದೆ ಹುಡುಕಾಟದಲ್ಲಿ ತೊಡಗಿದರು. ಈ ವೇಳೆ ಸವಿತಾಳ ಪೋಷಕರನ್ನು ಭೇಟಿಯಾದ ಉಪನಗರ ಠಾಣೆ ಪೊಲೀಸರು ಕೊಲೆಯಾದ ಮಹಿಳೆಯ ಶವದ ಫೋಟೋ ತೋರಿಸಿದ್ದರು. ಆಗಲೇ ಸವಿತಾಳ ತಂದೆ-ತಾಯಿಗೆ ಈಕೆ ತನ್ನ ಮಗಳು ಎಂದು ತಿಳಿದು ಕಣ್ಣೀರು ಸುರಿಸಿದರು.
ಅಷ್ಟಕ್ಕೂ ಮೊಬೈಲ್ ಸರಿಪಡಿಸಲು ಹೋಗಿದ್ದಾಗ ನಡೆದಿದ್ದೇನು?
ಅಷ್ಟಕ್ಕೂ ಅಲ್ಲಿ ನಡೆದ್ದಾದರೂ ಏನು ಅಂದರೆ ಈಕೆ ಆಸ್ಪತ್ರೆಯಿಂದ ಹೊರಗೆ ಬರುತ್ತಲೇ ಅಲ್ಲಿಗೆ ಆನಂದ ಬಂದಿದ್ದಾನೆ. ಆಕೆ ಶಾಶ್ವತವಾಗಿ ತನ್ನನ್ನು ಬಿಟ್ಟಿದ್ದಕ್ಕೆ ಆನಂದನಿಗೆ ಕೋಪವೂ ಬಂದಿತ್ತು. ಅಲ್ಲದೇ ತನಗೆ ಕೇಳಿದಾಗಲೆಲ್ಲಾ ಹಣ ಕೊಡದೇ ಇದ್ದಿದ್ದಕ್ಕೆ ಕೂಡ ಆನಂದ ಸಾಕಷ್ಟು ಸಿಟ್ಟಿಗೆದ್ದಿದ್ದ. ಎರಡು ದಿನಗಳ ಹಿಂದೆಯೂ ಆಸ್ಪತ್ರೆಗೆ ಬಂದಿದ್ದನಂತೆ. ಆಗ ಸವಿತಾಳೊಡನೆ ಜಗಳ ತೆಗೆದು ಆಕೆಯನ್ನು ಹೊಡೆದಿದ್ದನಂತೆ. ಅದನ್ನು ತಂದೆ-ತಾಯಿ ಮುಂದೆ ಸವಿತಾ ಹೇಳಿರಲಿಲ್ಲ. ಈ ವಿಚಾರವನ್ನು ಹೇಳಿದರೆ ಅವರು ಮತ್ತೆಲ್ಲಿ ನೊಂದುಕೊಳ್ಳುತ್ತಾರೋ ಎಂದು ಆಕೆ ಇಂಥ ವಿಚಾರಗಳನ್ನು ಮೊದಲಿನಿಂದಲೂ ಮುಚ್ಚಿಡುತ್ತಲೇ ಬಂದಿದ್ದಳು.
ಇನ್ನು ಅಕ್ಟೋಬರ್ 14 ಸಂಜೆಯೂ ಹೀಗೆಯೇ ಆಗಿದೆ. ಆಕೆ ಹೊರಗೆ ಬರುತ್ತಲೇ ಅದನ್ನು ಹಲವಾರು ದಿನಗಳಿಂದ ಗಮನಿಸುತ್ತಿದ್ದ ಆನಂದ, ನಿನ್ನೊಂದಿಗೆ ಕೊಂಚ ಮಾತನಾಡಲು ಇದೆ ಅಂತಾ ಸಂದಿಯೊಂದರ ಬಳಿ ಆಕೆಯನ್ನು ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಮತ್ತೆ ಆಕೆಯೊಂದಿಗೆ ಜಗಳ ಶುರು ಮಾಡುತ್ತಾನೆ. ನೀನು ಅನೇಕರೊಂದಿಗೆ ಅಕ್ರಮ ಸಂಬಂಥ ಇಟ್ಟುಕೊಂಡಿದ್ದೀಯಾ ಅಂತಾ ಗಲಾಟೆ ಮಾಡುತ್ತಾನೆ. ಅಲ್ಲದೇ ತಾನು ನೀಡಿದ ಹಣವನ್ನು ಮರಳಿ ಕೊಡು ಅಂತಾ ಪದೇ ಪದೇ ಕೇಳುತ್ತಾನೆ.
ಆಕೆ ಯಾವುದಕ್ಕೂ ಜಗ್ಗದಿದ್ದಾಗ ಅದಾಗಲೇ ತನ್ನೊಂದಿಗೆ ತಂದಿದ್ದ ಮಚ್ಚಿನಿಂದ ಆಕೆಯ ತಲೆಗೆ ಹೊಡೆಯುತ್ತಾನೆ. ಸವಿತಾ ಕೆಳಗೆ ಬೀಳುತ್ತಲೇ ಆಕೆಯ ಮುಖಕ್ಕೆ ಹತ್ತಾರು ಬಾರಿ ಕೊಚ್ಚಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡುತ್ತಾನೆ. ಬಳಿಕ ಅಲ್ಲಿಂದ ಪರಾರಿಯಾಗುತ್ತಾನೆ. ಸವಿತಾಳ ಎಲ್ಲ ಮಾಹಿತಿಯನ್ನು ಪಡೆದ ಉಪನಗರ ಠಾಣೆ ಪೊಲೀಸರು ಕೊನೆಗೂ ಆರೋಪಿ ಪತಿ ಆನಂದನನ್ನು ಪತ್ತೆ ಹಚ್ಚಿ ಜೈಲಿಗೆ ಕಳಿಸುತ್ತಾರೆ.
ತನ್ನ ಜೀವನವನ್ನೂ ಕೊನೆಕಾಣಿಸಿದ ಕೊಲೆಗಾರ
ಪತ್ನಿಯನ್ನೇ ಕೊಲೆ ಮಾಡಿ ಜೈಲು ಸೇರಿದ ಆನಂದನನ್ನು ಜೈಲಿನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಅಕ್ಟೋಬರ್ 19 ರ ರಾತ್ರಿ ಎಂದಿನಂತೆ ಜೈಲು ಸಿಬ್ಬಂದಿ ಈತನಿಗೆ ಊಟ ನೀಡಿ ಹೋಗುತ್ತಾರೆ. ಇನ್ನು ಮಧ್ಯರಾತ್ರಿ ಮತ್ತೊಮ್ಮೆ ಬಂದು ಈತನನ್ನು ನೋಡಿ ಹೋಗುತ್ತಾರೆ. ಈ ಎಲ್ಲಾ ಪ್ರಕ್ರಿಯೆಯ ನಡುವೆ ಆನಂದ ಆ ರಾತ್ರಿ ಬೆಡ್ ಶೀಟ್ ಅನ್ನು ಹರಿದು ಹಗ್ಗದ ಥರ ಮಾಡಿಕೊಂಡು ಶೌಚಾಲಯದ ಕಿಟಿಕಿಯ ರಾಡ್ಗೆ ಕಟ್ಟಿ ನೇಣು ಹಾಕಿಕೊಂಡಿದ್ದಾನೆ. ಈ ವೇಳೆ ಕೆಳಗೆ ಬೀಳುವ ಒಂದು ಶಬ್ದ ಅಕ್ಕಪಕ್ಕದ ಕೈದಿಗಳು ಕೂಡಲೇ ಜೈಲು ಸಿಬ್ಬಂದಿಗೆ ಹೇಳಿದ್ದಾರೆ. ಈ ವೇಳೆ ನೇಣು ಬಿಗಿದುಕೊಂಡಿರುವುದು ತಿಳಿದುಬರುತ್ತದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿತಾದರೂ ಆತ ಸಾವನ್ನಪ್ಪುತ್ತಾನೆ. ನಿನ್ನ ಇಡೀ ಕುಟುಂಬವನ್ನು ನೋಡಿಕೊಳ್ಳುವುದಾಗಿ ಹೇಳಿದ್ದ ಆನಂದ ಸವಿತಾಳನ್ನು ಕೊಲೆ ಮಾಡಿ ತನ್ನ ಜೀವನವನ್ನೂ ಕೊನೆಗಾಣಿಸಿ ಸವಿತಾಳ ಕುಟುಂಬವನ್ನು ಬೀದಿಗೆ ತಂದಿದ್ದು ವಿಪರ್ಯಾಸವೇ ಸರಿ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Mon, 24 October 22