ನಾ ವಿಕೃತಕಾಮಿ ಅಲ್ಲ ಅನ್ನುತ್ತಲೇ ಧಾರವಾಡದ ಅಮಾಯಕ ಯುವಕ ಆತ್ಮಹತ್ಯೆ ಮಾಡಿಕೊಂಡ! ಏನಿದರ ವೃತ್ತಾಂತ? ಇಲ್ಲಿದೆ ಸವಿಸ್ತಾರ ವರದಿ
ಅಲ್ಲಿಗೆ ಪವನ್ ನ ಕಿರಿಕಿರಿಯಿಂದಾಗಿ ಒಂದು ಜೀವ ಹಾರಿ ಹೋದಂತಾಗಿದೆ. ಇದೀಗ ಯಾಸೀನ್ ತಂದೆ ರಫಿಕ್ ನೀಡಿರೋ ದೂರಿನ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋಚನೆ ನೀಡಿದ ಆರೋಪದಡಿ ಉಪನಗರ ಠಾಣೆ ಪೊಲೀಸರು ಪವನ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅವರಿಬ್ಬರದ್ದೂ ಬಿಟ್ಟಿರಲಾಗದ ಸ್ನೇಹ. ಪರಿಚಯವಾಗಿ ಕೆಲವೇ ತಿಂಗಳಾಗಿದ್ದರೂ ಅವರಲ್ಲಿ ಅತಿಯಾದ ಅನ್ಯೋನ್ಯತೆ ಬೆಳೆದಿತ್ತು. ಆ ಅನ್ಯೋನ್ಯತೆ ಹಿಂದೆ ಪರಸ್ಪರ ಸಹಾಯ ಮಾಡೋ ಗುಣ ಇತ್ತು. ಆ ಗುಣವೊಂದೇ ಇದ್ದಿದ್ದರೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅದಕ್ಕಿಂತಲೂ ಮತ್ತೊಂದು ದೊಡ್ಡ ಕಾರಣ ಅವರಿಬ್ಬರ ನಡುವಿನ ಅನ್ಯೋನ್ಯತೆ ಹೆಚ್ಚಾಗಲು ಕಾರಣವಾಗಿತ್ತು. ಅದೇ ಇದೀಗ ಓರ್ವನ ಸಾವಿಗೆ ಕಾರಣವಾದರೆ, ಮತ್ತೊಬ್ಬ ಜೈಲು ಸೇರುವಂತಾಗಿದೆ. ಅಷ್ಟಕ್ಕೂ ಯಾವ ಗುಣ ಇಂಥ ಸಮಸ್ಯೆಯಾಗಲು ಕಾರಣವಾಯಿತು? ಮುಂದೆ ಓದಿ.
ಇತ್ತೀಚಿನ ದಿನಗಳಲ್ಲಿ ಯುವಕರು ನಾನಾ ಚಟಗಳ ಹಿಂದೆ ಬಿದ್ದು ತಮ್ಮ ಬದುಕನ್ನು ಹಾಳು ಮಾಡಿಕೊಂಡಿರೋದನ್ನು ಕಂಡಿದ್ದೇವೆ. ಇನ್ನು ವಯೋಸಹಜ ಕಾಮದ ಹಿಂದೆ ಬಿದ್ದರೂ ಅದು ಕೂಡ ಸಮಸ್ಯೆಯನ್ನು ತರಬಲ್ಲದು. ಅದರಲ್ಲೂ ಅಪ್ರಕೃತಿಕ ಚಟಗಳಿಂದ ದೊಡ್ಡ ಸಮಸ್ಯೆಗಳೇ ಸೃಷ್ಟಿಯಾಗುತ್ತವೆ. ಇಂಥ ಅಪ್ರಾಕೃತಿಕ ಘಟನೆಯಿಂದ ಧಾರವಾಡದಲ್ಲಿ ಜೀವವೊಂದು ಬಲಿಯಾಗಿರೋ ಕಥೆ ಇಲ್ಲಿದೆ…
ಮೇಲಿನ ಚಿತ್ರದಲ್ಲಿ ಕಾಣುತ್ತಿರೋ ಯುವಕನ ಹೆಸರು ಮಹಮ್ಮದ್ ಯಾಸಿನ್. ವಯಸ್ಸು 24 ವರ್ಷ. ಧಾರವಾಡ ನಗರದ ದಾನೂನಗರ ಬಡಾವಣೆಯ ಈ ಯುವಕ ಅಟೋ ಚಾಲಕ. ತಂದೆ ಮಹಮ್ಮದ್ ರಫಿಕ್ ಕೂಡ ಅಟೋ ಚಾಲನೆ ಮಾಡುತ್ತಿದ್ದರಿಂದ ಮಗನೂ ಕೂಡ ಇದೇ ವೃತ್ತಿಗೆ ಅಂಟಿಕೊಂಡಿದ್ದ. ತಾನಾಯಿತು ತನ್ನ ಕೆಲಸವಾಯಿತು ಅಂದುಕೊಂಡು ಬದುಕುತ್ತಿದ್ದ ಯಾಸೀನ್ ಗೆ ಯಾವುದೇ ಚಟಗಳಿರಲಿಲ್ಲ. ಅಲ್ಲದೇ ಎಲ್ಲರೊಂದಿಗೆ ನಗುನಗುತ್ತಾ ಮಾತಾಡಿಕೊಂಡು ಜೀವನ ಸಾಗಿಸೋ ಮನಸ್ಸಿನವನು ಕೂಡ. ಇನ್ನು ಯಾಸೀನ್ ಯಾರಾದರನ್ನೂ ಹಚ್ಚಿಕೊಂಡರೆ ಸಾಕು, ಜೀವಕ್ಕೆ ಜೀವ ಕೊಡುವ ಮನಸ್ಸಿನವನಾಗಿದ್ದ. ತಂದೆ-ತಾಯಿ ಒಬ್ಬನೇ ಮಗನಾಗಿದ್ದರಿಂದ ಮನೆಯಲ್ಲಿಯೂ ಆರ್ಥಿಕವಾಗಿ ಅಂಥ ಸಮಸ್ಯೆ ಏನೋ ಇರಲಿಲ್ಲ. ತಂದೆ-ಮಗ ಇಬ್ಬರೂ ದುಡಿಯುತ್ತಿದ್ದರಿಂದ ಆದಾಯಕ್ಕೆ ಕೊರತೆ ಇರಲಿಲ್ಲ. ಅದರಲ್ಲೂ ಯಾಸೀನ್ ಗೆ ಕೆಲವು ಪರ್ಮನೆಂಟ್ ಗ್ರಾಹಕರಿದ್ದರು. ಅವರು ಎಲ್ಲಿಯೇ ಹೋದರೂ ಯಾಸೀನನಿಗೆ ಫೋನ್ ಹಚ್ಚಿ, ಆತನಿಂದ ಅಟೋ ಸರ್ವೀಸ್ ಪಡೆಯುತ್ತಿದ್ದರು. ಇಂಥ ವೇಳೆಯೇ ಆತನ ಮತ್ತೊಬ್ಬ ಅಟೋ ಚಾಲಕ ಗೆಳೆಯ, ಯುವಕನೊಬ್ಬನ ಪರಿಚಯ ಮಾಡಿಕೊಡುತ್ತಾನೆ. ಆತನ ಹೆಸರು ಪವನ್ ಬ್ಯಾಳಿ. ಆತನೂ ಕೆಲ ತಿಂಗಳ ಹಿಂದಷ್ಟೇ ಯಾಸೀನ್ ಗೆ ಪರಿಚಯವಾಗಿದ್ದ. ಪವನ್ ಬ್ಯಾಳಿ ಮೂಲತಃ ಬಡ್ಡಿ ವ್ಯವಹಾರದ ಕುಳ. ಹೀಗೆ ಬಡ್ಡಿ ನೀಡಿದ ಬಳಿಕ ಹಣ ನೀಡದವರ ಮನೆಗೆ ಹೋಗಲು ಅಟೋ ಬಳಸುತ್ತಿದ್ದ ಪವನ್, ಅವಕಾಶ ಬಿತ್ತೆಂದರೆ ಎಂಥವರಿಗೂ ಬೆದರಿಕೆ ಹಾಕುತ್ತಿದ್ದ. ಮೀಟರ್ ಬಡ್ಡಿ ದಂಧೆಯಲ್ಲಿ ಪಳಗಿದವನಾಗಿದ್ದರಿಂದ ಆತನಿಂದ ಸಾಲ ಪಡೆದವರು ಪವನ್ ಗೆ ಹೆದರುತ್ತಿದ್ದರು. ಇನ್ನು ಪವನ್ ತನ್ನ ಗೆಳೆಯರಿಗೆ ಹಣ ಖರ್ಚು ಮಾಡುವಲ್ಲಿ ದೊಡ್ಡ ಕೈ. ಹೀಗಾಗಿ ಪವನ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಗೆಳೆಯರಿದ್ದಾರೆ. ಇಂಥ ಪವನ್ ತನ್ನ ಕೆಲಸಕ್ಕೆಂದು ಪದೇ ಪದೇ ಫೋನ್ ಮಾಡುತ್ತಿದ್ದುದು ಇದೇ ಯಾಸೀನ್ ಗಾಗಿ. ಪವನ್-ಯಾಸೀನ್ ಸಂಬಂಧ ಏಳೆಂಟು ತಿಂಗಳದ್ದಷ್ಟೇ. ಆದರೆ ಇಬ್ಬರೂ ಅದ್ಯಾವಪರಿ ಆತ್ಮೀಯರಾಗಿದ್ದರೆಂದರೆ, ಕುಟುಂಬದವರು ಕೂಡ ಅಚ್ಚರಿಪಡುವಂತಾಗಿತ್ತು. (ವಿಶೇಷ ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ)
ಇಂಥ ದಿನಗಳಲ್ಲಿಯೇ ಪವನ್ ಕೆಲವರ ಮುಂದೆ ಯಾಸೀನ್ ಬಗ್ಗೆ ಅಸಮಾಧಾನದ ಮಾತುಗಳನ್ನು ಆಡಲು ಶುರು ಮಾಡಿದ್ದ. ಅದು ಯಾಸೀನ್ ಕಿವಿಗೂ ಬಿದ್ದಿತ್ತು. ಅಷ್ಟಕ್ಕೂ ಆ ಮಾತು ಬೇರೆ ಏನೂ ಆಗಿರಲಿಲ್ಲ. ತಾನು ಯಾಸೀನ್ ಗೆ ಸಾಕಷ್ಟು ಹಣ ಕೊಟ್ಟಿರೋದಾಗಿಯೂ, ಆದರೂ ಆತ ತನ್ನ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ತೋರಿಸುತ್ತಿಲ್ಲ ಅನ್ನೋದೇ ಆ ಅಸಮಾಧಾನದ ಮಾತುಗಳಾಗಿದ್ದವು. ಈ ಮಾತುಗಳು ಯಾಸೀನ್ ಕಿವಿಗೆ ಬಿದ್ದವಾದರೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಆತ ಸುಮ್ಮನಾಗಿಬಿಡುತ್ತಿದ್ದ. ಹಾಗಂತ ಇಬ್ಬರ ನಡುವೆ ಆತ್ಮೀಯತೆ ಕಡಿಮೆಯಾಗಿತ್ತು ಅನ್ನೋ ಹಾಗೆಯೂ ಇಲ್ಲ. ಪವನ್ ಫೋನ್ ಮಾಡುತ್ತಲೇ ಅಟೋ ಇಲ್ಲವೇ ಬೈಕ್ ಏರಿ ಯಾಸೀನ್ ಆತನ ಬಳಿ ಓಡಿ ಹೋಗುತ್ತಿದ್ದ. ಇಬ್ಬರೂ ಎಲ್ಲೆಂದರಲ್ಲೇ ಸುತ್ತಾಡುತ್ತಿದ್ದರು. ಮೋಜು-ಮಸ್ತಿ ಮಾಡುತ್ತಿದ್ದರು. ಈ ಬಗ್ಗೆ ಇಬ್ಬರ ನಡುವೆ ಯಾವುದೇ ತಂಟೆ ತಕರಾರುಗಳೇ ಇರಲಿಲ್ಲ. ಆದರೆ ಇತ್ತೀಚೆಗೆ ನಿಧಾನವಾಗಿ ಒಳಗೊಳಗೇ ಪವನ್ ಬಗ್ಗೆ ಯಾಸೀನ್ ಗೆ ಕಿರಿಕಿರಿಯಾಗತೊಡಗಿತ್ತು. ಅದನ್ನು ಆತ ಕೆಲವರ ಮುಂದೆ ತೋಡಿಕೊಂಡಿದ್ದ ಕೂಡ. ಆದರೂ ಪವನ್ ಫೋನ್ ಮಾಡಿದಾಗ ತಡ ಮಾಡದೇ ಓಡಿ ಹೋಗುತ್ತಿದ್ದ. ಹೀಗಾಗಿ ಎಲ್ಲರೂ ಇಬ್ಬರ ನಡುವಿನ ಅಸಮಾಧಾನದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಅವತ್ತು ಅಕ್ಟೋಬರ್ 12. ಸಂಜೆ ಯಾಸೀನ್ ಮನೆಯ ಬಳಿ ಬಂದ ಪವನ್ ಆತನನ್ನು ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗುತ್ತಾನೆ. ಅದನ್ನು ಸ್ಥಳೀಯರು ನೋಡಿದ್ದೂ ಹೌದು. ಆಗಾಗ ಇದೇ ರೀತಿ ಇಬ್ಬರೂ ಓಡಾಡಿದ್ದರಿಂದ ಇದೇನೋ ಹೊಸ ಸಂಗತಿಯೂ ಆಗಿರಲಿಲ್ಲ. ಆದರೆ ಸಂಜೆ ಎಷ್ಟೊತ್ತಾದರೂ ಬಾರದೇ ಇದ್ದಾಗ, ಮನೆಯವರು ಆತಂಕಗೊಂಡು ಫೋನ್ ಮಾಡುತ್ತಾರೆ. ಮನೆಗೆ ಬರೋದಾಗಿ ಹೇಳಿದ್ದಕ್ಕೆ ಸುಮ್ಮನಾಗೋ ತಂದೆ ರಫಿಕ್, ಒಂದೆರಡು ಗಂಟೆ ಕಳೆದರೂ ಬಾರದೇ ಇದ್ದಿದ್ದಕ್ಕೆ ಮತ್ತೆ ಫೋನ್ ಮಾಡುತ್ತಾರೆ. ಆಗ ಸಮಯ ಹತ್ತು ಗಂಟೆ ಆಗಿರುತ್ತೆ. ಆಗ ತಾನು ಎಪಿಎಂಸಿ ಬಳಿ ಇರೋದಾಗಿ ಹೇಳಿದ ಯಾಸಿನ್, ಮನೆಗೆ ಹೋಗುತ್ತಿರೋದಾಗಿಯೂ ಹೇಳುತ್ತಾನೆ. ಮತ್ತೆ ಎಷ್ಟೊತ್ತಾದರೂ ಮಗ ಮನೆಗೆ ಬಾರದೇ ಇದ್ದಿದ್ದಕ್ಕೆ ಮತ್ತೆ ಫೋನ್ ಮಾಡುತ್ತಾರೆ. ಆಗ ಅದೇ ಕಥೆ ಹೇಳೋ ಯಾಸಿನ್ ಬರೋದಾಗಿ ಹೇಳುತ್ತಾನೆ. ತಂದೆ ಕೂಡಲೇ ಹೋಗಿ ಎಪಿಎಂಸಿ ಹತ್ತಿರ ನೋಡಿದರೆ ಅಲ್ಲಿ ಆತ ಸಿಗೋದಿಲ್ಲ. ಇದರಿಂದ ಆತಂಕಗೊಂಡ ತಂದೆ ಗೆಳೆಯರೊಂದಿಗೆ ಎಲ್ಲ ಕಡೆ ಹುಡುಕಾಡುತ್ತಾರೆ. ಅದರಲ್ಲೂ ಧಾರವಾಡದ ಕೆಲಗೇರಿ ಕೆರೆಯಲ್ಲಿ ಆಗಾಗ ಆತ್ಮಹತ್ಯೆ ಕೇಸುಗಳು ವರದಿಯಾಗುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ನೋಡಿದಾಗ ಯಾಸೀನ್ ಬೈಕ್ ಅಲ್ಲಿಯೇ ದಂಡೆಯಲ್ಲಿ ನಿಂತಿರೋದು ಕಾಣುತ್ತೆ. ಗೆಳೆಯರೊಂದಿಗೆ ಇಲ್ಲೆಲ್ಲೋ ದಂಡೆಗೆ ಕುಳಿತಿರಬೇಕು ಅಂತಾ ಹುಡುಕಾಡಿದಾಗ ಆತಂಕಕಾರಿ ಸಂಗತಿಯೊಂದು ಕಣ್ಣಿಗೆ ಬೀಳುತ್ತೆ. ಯಾಸೀನ್ ನ ಜರ್ಕಿನ್, ಶೂ ದಂಡೆಯಲ್ಲಿಯೇ ಕಾಣುತ್ತವೆ. ಇದೇ ವೇಳೆ ಬೇರೆ ಬೇರೆ ಕಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ವಿದ್ಯಾಗಿರಿ ಠಾಣೆಯಲ್ಲಿ ಅಕ್ಟೋಬರ್ 12 ರಂದು ಮಿಸ್ಸಿಂಗ್ ದೂರು ದಾಖಲಾಗುತ್ತದೆ. ಅದಾಗಿ ಎಷ್ಟೇ ಪ್ರಯತ್ನಿಸಿದರೂ ಯಾಸೀನ್ ಪತ್ತೆಯಾಗೋದೇ ಇಲ್ಲ. ಇನ್ನು ಅಕ್ಟೋಬರ್ 15 ರ ಮಧ್ಯಾಹ್ನ ಇದೇ ಕೆಲಗೇರಿ ಕೆರೆಯಲ್ಲಿ ಯುವಕನ ಮೃತದೇಹವೊಂದು ಪತ್ತೆಯಾಗುತ್ತೆ. ಕೂಡಲೇ ಪೊಲೀಸರು ಮಹಮ್ಮದ್ ರಫೀಕ್ ಗೆ ಫೋನ್ ಮಾಡಿ ಕರೆಯಿಸಿಕೊಳ್ಳುತ್ತಾರೆ. ಆಗ ಅದು ತಮ್ಮದೇ ಮಗನ ಶವ ಅನ್ನೋದನ್ನು ರಫೀಕ್ ಖಚಿತಪಡಿಸುತ್ತಾರೆ. ಅಲ್ಲಿಗೆ ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿರೋದು ಖಚಿತವಾಗುತ್ತೆ. ಕೂಡಲೇ ಈ ಆತ್ಮಹತ್ಯೆಗೆ ಕಾರಣ ಪವನ್ ಅಂತಾ ಯಾಸೀನ್ ತಂದೆ ರಫಿಕ್ ಉಪನಗರ ಠಾಣೆಯಲ್ಲಿ ದೂರನ್ನು ದಾಖಲಿಸುತ್ತಾರೆ. ಅಷ್ಟಕ್ಕೂ ಯಾಸೀನ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ಏನು ಅನ್ನೋದೇ ಅಚ್ಚರಿಯ ಸಂಗತಿ.
ಇನ್ನು ಯಾಸೀನ್ ತಾನು ಸಾಯೋದಕ್ಕೂ ಮುನ್ನ ಅನೇಕರೊಂದಿಗೆ ಮಾತನಾಡಿದ್ದರ ಬಗ್ಗೆಯೂ ತಂದೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಕೆಲವರಿಗೆ ಯಾಸೀನ್ ನೇರವಾಗಿ ಮೆಸೇಜ್ ಕಳಿಸಿ, ಅದರಲ್ಲಿ ತನಗೆ ಪವನ್ ಸಾಕಷ್ಟು ಕಿರಿಕಿರಿ ಮಾಡುತ್ತಿದ್ದಾನೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿಯೂ ಹೇಳಿಕೊಂಡಿದ್ದಾನೆ. ಅಷ್ಟಕ್ಕೂ ಪವನ್ ಯಾವ ರೀತಿ ಕಿರುಕುಳ ಕೊಡುತ್ತಿದ್ದ ಅನ್ನೋದನ್ನು ಕೇಳಿದರೆ, ಅವರಿಬ್ಬರ ಮಧ್ಯೆ ಇದ್ದ ನಿಜವಾದ ಸಂಬಂಧ ಹೊರಗೆ ಬರುತ್ತೆ. ಅಷ್ಟಕ್ಕೂ ಅವರಿಬ್ಬರ ನಡುವೆ ಇದ್ದ ಸಂಬಂಧವೇನು? ಬರೀ ಗೆಳೆತನವಷ್ಟೇ ಇತ್ತಾ? ಅಥವಾ ಹಣಕಾಸಿನ ವ್ಯವಹಾರವೂ ಇತ್ತಾ? ಅಥವಾ ಇವೆಲ್ಲಕ್ಕಿಂತ ಮತ್ತೊಂದು ವಿಚಿತ್ರವಾದ ಸಂಬಂಧ ಅವರಿಬ್ಬರ ನಡುವೆ ಇತ್ತಾ? ಅನ್ನೋದೇ ಇದೀಗ ಉದ್ಭವಿಸಿರೋ ಹೊಸ ಪ್ರಶ್ನೆ.
ಮೂಲತಃ ಬಡ್ಡಿ ವ್ಯವಹಾರ ಮಾಡುತ್ತಿದ್ದ ಪವನ್, ಸಾಕಷ್ಟು ಸಮಯ ಇಬ್ಬರೂ ಜೊತೆಯಾಗಿ ಕಳೆಯುತ್ತಿದ್ದರಿಂದಾಗಿ ಇಬ್ಬರ ನಡುವೆ ಬೇರೆ ಥರದ ಗೆಳೆತನ ಶುರುವಾಗಿದೆ. ಇಂಥ ಅವಿವಾಹಿತರನ್ನೇ ಟಾರ್ಗೆಟ್ ಮಾಡುತ್ತಿದ್ದ ಪವನ್ ಅವರಿಗೆ ಹಣ ನೀಡಿ, ಸಲುಗೆ ಬೆಳೆಸಿಕೊಳ್ಳುತ್ತಿದ್ದನಂತೆ. ಬಳಿಕ ಅವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿಕೊಳ್ಳುತ್ತಿದ್ದ. ಪವನ್ ನೋಡಲಷ್ಟೇ ಯುವಕನಂತಿದ್ಧಾನೆ. ಆದರೆ ಈತ ಮೂಲತಃ ‘ಗೇ’ ಅಂತಾ ಅನೇಕರು ಹೇಳುತ್ತಾರೆ. ಯುವಕರೊಂದಿಗೆ ಕಾಮಕೇಳಿ ಮಾಡೋ ದೃಶ್ಯಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು, ಆ ವೀಡಿಯೋಗಳನ್ನೇ ಬಳಸಿಕೊಂಡು ತನಗೆ ಬೇಕಾದಾಗ ಅವರನ್ನು ಬೇಕಾದಲ್ಲಿಗೆ ಕರೆಯಿಸಿಕೊಂಡು ಖುಷಿ ಪಡೋ ವಿಕೃತ ಕಾಮಿ ಈ ಪವನ್. ಯಾಸಿನ್ ಕೇಸ್ ನಲ್ಲಿಯೂ ಇದೇ ಆಗಿದೆಯಂತೆ. ಯಾಸೀನ್ ಕೇಳಿದಾಗಲೆಲ್ಲಾ ಆತನಿಗೆ ಬೇಕಾದಷ್ಟು ಹಣ ನೀಡುತ್ತಿದ್ದನಂತೆ. ಬಳಿಕ ನಿನ್ನನ್ನು ಇಷ್ಟಪಡುತ್ತೇನೆ ಅಂದು ಆತನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿಕೊಂಡಿದ್ದಾನೆ. ಕೆಲವರ ಬಳಿ ತಾವು ಅದಾಗಲೇ ಮದುವೆ ಕೂಡ ಆಗಿದ್ದಾಗಿಯೂ ಹೇಳುತ್ತಿದ್ದ ಪವನ್, ಇತ್ತೀಚಿನ ದಿನಗಳಲ್ಲಿ ಬೇರೆ ಮನೆ ಮಾಡಿಕೊಂಡು ನಾವಿಬ್ಬರೂ ಇದ್ದುಬಿಡೋಣ ಅಂತಾ ಯಾಸೀನ್ ಗೆ ದುಂಬಾಲು ಬಿದ್ದಿದ್ದನಂತೆ. ಇದರಿಂದಾಗಿ ಬೇಸತ್ತು ಹೋದ ಯಾಸಿನ್, ತನ್ನ ತಂದೆ ಹಾಗೂ ಮನೆಯವರ ಮುಂದೆ ಪವನ್ ಕಿರಿಕಿರಿ ಮಾಡುತ್ತಿದ್ದ ಹಾಗೂ ಫೋಟೋ ತೋರಿಸಿ ಬೆದರಿಸುತ್ತಿದ್ದ ವಿಚಾರವನ್ನು ಹೇಳಿದ್ದಾನೆ. ಆದರೆ ಸಾಮಾಜಿಕವಾಗಿ ಇದು ಸಾಧ್ಯವಿಲ್ಲ ಅನ್ನೋದು ಯಾಸಿನ್ ವಾದವಾಗಿತ್ತು. ಅಲ್ಲದೇ ಹೀಗೆ ಯುವಕರಿಬ್ಬರು ಮದುವೆಯಾಗಿ, ಪ್ರತ್ಯೇಕ ಮನೆಯಲ್ಲಿ ಇದ್ದರೆ ತನ್ನ ಮನೆತನದ ಗತಿ ಏನು? ಅನ್ನೋದು ಯಾಸೀನ್ ನ ಪ್ರಶ್ನೆಯಾಗಿತ್ತು. ಅವತ್ತು ಅಕ್ಟೋಬರ್ 12 ರಂದು ಕೂಡ ಇದೇ ರೀತಿ ಆಗಿದೆಯಂತೆ. ಪದೇ ಪದೇ ಇಬ್ಬರೂ ಜೊತೆಯಾಗಿ ಇದ್ದುಬಿಡೋಣ ಅಂದ ಪವನ್ ಗೆ ಯಾಸೀನ್ ಸಾಧ್ಯವೇ ಇಲ್ಲ ಅಂದಿದ್ಧಾನೆ. ಅದಾಗಲೇ ಆತನ ಕಿರಿಕಿರಿಯಿಂದಾಗಿ ಹಾಗೂ ಎಲ್ಲ ಕಡೆ ತಮ್ಮಿಬ್ಬರ ಸಂಬಂಧದ ವಿಚಾರವಾಗಿ ಏನೇನೋ ಹೇಳೋದನ್ನು ಕೇಳಿ ಕೇಳಿ ನೊಂದಿದ್ದ ಯಾಸೀನ್ ತನ್ನ ಆತ್ಮೀಯರಿಗೆ ಈ ವಿಚಾರವಾಗಿ ವಾಟ್ಸ್ಪ್ ಸಂದೇಶ ಕಳಿಸಿದ್ದಾನೆ. ಅಲ್ಲದೇ ತಾನು ಇನ್ನು ಮುಂದೆ ಬದುಕೋದಿಲ್ಲ. ಆತನ ಕಾಟದಿಂದಾಗಿ ತಾನು ಸಾಯಲು ನಿರ್ಧರಿಸಿದೋದಾಗಿಯೂ ಹೇಳಿದ್ದಾನೆ. ಬಳಿಕ ಧಾರವಾಡದ ಕೆಲಗೇರಿ ಕೆರೆಗೆ ಬೈಕ್ ಮೇಲೆ ತೆರಳಿದ್ದಾನೆ. ಕೆರೆ ಬಳಿ ಬೈಕ್ ನಿಲ್ಲಿಸಿ, ಜರ್ಕಿನ್ ಹಾಗೂ ಶೂ ಬಿಚ್ಚಿಟ್ಟು ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಅಲ್ಲಿಗೆ ಪವನ್ ನ ಕಿರಿಕಿರಿಯಿಂದಾಗಿ ಒಂದು ಜೀವ ಹಾರಿ ಹೋದಂತಾಗಿದೆ. ಇದೀಗ ಯಾಸೀನ್ ತಂದೆ ರಫಿಕ್ ನೀಡಿರೋ ದೂರಿನ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋಚನೆ ನೀಡಿದ ಆರೋಪದಡಿ ಉಪನಗರ ಠಾಣೆ ಪೊಲೀಸರು ಪವನ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಘಟನೆ ಎಲ್ಲ ಪಾಲಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಏಕೆಂದರೆ ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡದಿದ್ದರೆ ಏನೆಲ್ಲಾ ಅನಾಹುತಗಳಾಗುತ್ತವೆ ಅನ್ನೋದಕ್ಕೆ ಈ ಘಟನೆಯೊಂದು ಉದಾಹರಣೆಯಾಗಿದೆ. ಒಟ್ಟಿನಲ್ಲಿ ಸಮಾಜ ಒಪ್ಪದ ಸಂಬಂಧವೊಂದರಲ್ಲಿ ಸಿಕ್ಕಿ ಹಾಕಿಕೊಂಡು ಯುವಕನೊಬ್ಬ ಪ್ರಾಣ ಬಿಟ್ಟಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ.
Published On - 5:53 pm, Mon, 24 October 22