ತಾಯಿ ಅಂದ್ರೆ ಪ್ರೀತಿ, ಮಮಕಾರಗಳ ಸಾಕಾರ ಮೂರ್ತಿ. ತನ್ನ ಬದುಕನ್ನೇ ಮಕ್ಕಳಿಗಾಗಿ ಸವೆಸುವ ಕರುಣಾ ಸಾಗರ. ತಾಯಿ ಅಂದರೆ ದೇವರು, ತಾಯಿ ಅಂದರೆ ಸರ್ವಸ್ವ. ಆದರೆ ತಾಯಿ ಅನ್ನೋ ಇಂಥ ಅದ್ಭುತ ಪದಕ್ಕೆ ಧಾರವಾಡದಲ್ಲಿನ ಓರ್ವ ಮಹಿಳೆ (Dharwad woman) ಅಪಚಾರ ಎಸಗಿದ್ದಾಳೆ. ತನ್ನ ಕಾಮದಾಹಕ್ಕೆ (Illicit Relation) ಮಗು (daughter) ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ತನ್ನ ರಕ್ತವನ್ನೇ ಹಂಚಿಕೊಂಡು ಹುಟ್ಟಿದ್ದ ಮಗುವನ್ನು ಭೀಕರವಾಗಿ ಕೊಂದು ಹಾಕಿದ್ದಾಳೆ. ಅಂಥ ನೌಟಂಕಿ ಹೆಣ್ಣಿನ ಆಟವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಆ ಮಹಿಳೆ ಪೊಲೀಸರ ಮುಂದೆ ಕರುಳು ಹಿಂಡುವ ಹಾಗೆ ಅಳುತ್ತಿದ್ದಳು. ಅದ ನೋಡಿದ ಯಾರಿಗೆ ಆಗಲಿ ನೋವಾಗುವುದರಲ್ಲಿ ಅನುಮಾನವಿಲ್ಲ. ಆದರೆ ಈ ಮಹಿಳೆಗೆ ಯಾವುದೋ ತೊಂದರೆಯಾಗಿದೆ ಅಂತಾ ನೀವು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಈಕೆ ಮಾಡಬಾರದ ಕೆಲಸವನ್ನು ಮಾಡಿ ಅಮಾಯಕಳಂತೆ ಅಳುತ್ತಿದ್ದಳು. ಹೌದು, ಏಳು ವರ್ಷಗಳ ಹಿಂದೆ ಸವದತ್ತಿಯ ಕಲ್ಲಯ್ಯ ಹಿರೇಮಠ ಹಾಗೂ ಧಾರವಾಡ ನಗರದ ಕಮಲಾಪುರ ಬಡಾವಣೆಯ ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಐದು ವರ್ಷಗಳ ಹಿಂದೆ ಅವಳಿ-ಜವಳಿ ಹೆಣ್ಣು ಮಕ್ಕಳಾಗಿದ್ದವು.
ಅದರಲ್ಲಿ ಒಂದು ಹೆಣ್ಣು ಮಗು ಸಹನಾಳಿಗೆ ಎರಡೂ ಕಾಲುಗಳೇ ಇರಲಿಲ್ಲ. ಅಲ್ಲದೇ ಆಕೆ ಕೊಂಚ ಮಂದಬುದ್ಧಿಯವಳೂ ಆಗಿದ್ದಳು. ಆದರೆ ದಂಪತಿ ಮಧ್ಯೆ ಜಗಳ ಶುರುವಾಗಿ ಅದು ಡೈವೋರ್ಸ್ ವರೆಗೆ ಬಂತು. ಕೊನೆಗೆ ಕಲ್ಲಯ್ಯನಿಂದ ಡೈವೋರ್ಸ್ ಪಡೆದ ಜ್ಯೋತಿ ಮಕ್ಕಳೊಂದಿಗೆ ಬಂದು ತಾಯಿಯ ಮನೆಯಲ್ಲಿಯೇ ವಾಸವಾಗಿದ್ದಳು.
ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯ ನವನಗರದ ರಾಹುಲ್ ತೆರದಾಳ್ ಅನ್ನೋ 22 ವರ್ಷದ ಯುವಕನೊಂದಿಗೆ ದೋಸ್ತಿ ಶುರುವಾಗಿದೆ. ಆತ ಆಗಾಗ ಮನೆಗೆ ಬಂದು ಜ್ಯೋತಿ ಜೊತೆಗೆ ಸಮಯ ಕಳೆದು ಹೋಗುತ್ತಿದ್ದ. ಗುರುವಾರವೂ ಸಂಜೆ ಹೊತ್ತಿಗೆ ರಾಹುಲ್ ಮನೆಗೆ ಬಂದಿದ್ದ. ಇದೇ ವೇಳೆ ಸಹನಾಳ ಕತ್ತು ಕತ್ತರಿಸಿ ಹೋಗಿತ್ತು. ಮಗು ಮೇಲಿಂದ ಬಿದ್ದಿದೆ ಅಂತಾ ತಾಯಿ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದಳು. ಆದರೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿ ಜ್ಯೋತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಮಗುವಿನ ಕತ್ತನ್ನು ಕೊಯ್ದಿರೋದು ಗೊತ್ತಾಗಿದೆ ಎಂದು ರೇಣುಕಾ ಸುಕುಮಾರ್, ಹು-ಧಾ ಪೊಲೀಸ್ ಆಯುಕ್ತೆ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದಿನಿಂದಲೂ ರಾಹುಲ್ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದ ಜ್ಯೋತಿ ತನ್ನ ಮನೆಯವರೊಂದಿಗೆ ಚೆನ್ನಾಗಿ ಇರಲಿಲ್ಲ. ಇವರ ಸಂಬಂಧಕ್ಕೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರಿಗೂ ಈಕೆ ಬೆದರಿಕೆ ಹಾಕಿ, ಸುಮ್ಮನೆ ಇರುವಂತೆ ಮಾಡಿದ್ದಳು. ಮನೆಯವರ ಕಿರಿಕಿರಿ ಹೆಚ್ಚಾಗುತ್ತಿದ್ದಂತೆಯೇ ಈಕೆ ಅದೇ ಮನೆಯಲ್ಲಿನ ಮೇಲಿನ ಮನೆಗೆ ಶಿಫ್ಟ್ ಆಗಿದ್ದಾಳೆ.
Also Read: ಸಹ ಶಿಕ್ಷಕನಿಂದ ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ಆರೋಪ; ಶಿಕ್ಷಕನನ್ನು ಟರ್ಮಿನೇಟ್ ಮಾಡಿದ ಶಾಲಾ ಆಡಳಿತ ಮಂಡಳಿ
ಇದೇ ವೇಳೆ ರಾಹುಲ್ಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯ ಮಾಡಲು ಶುರು ಮಾಡಿದ್ದಾಳೆ. ಆದರೆ ಈಗಾಗಲೇ ನಿನಗೆ ಎರಡು ಮಕ್ಕಳಿದ್ದು, ಅದರಲ್ಲಿ ಒಂದು ಮಗು ವಿಶೇಷ ಚೇತನ ಇದೆ. ಇಂಥ ವೇಳೆಯಲ್ಲಿ ಮದುವೆಯಾಗೋದು ಹೇಗೆ ಅಂತಾ ರಾಹುಲ್ ಪ್ರಶ್ನಿಸಿದ್ದಾನೆ. ಅಲ್ಲದೇ ವಿಶೇಷ ಚೇತನ ಮಗು ಸಹನಾಳನ್ನು ನೋಡಿಕೊಳ್ಳಲು ಒಬ್ಬರು ಇರಲೇಬೇಕಿತ್ತು. ಹೀಗಾಗಿ ಜ್ಯೋತಿಗೂ ಕೂಡ ಈ ಮಗು ತನ್ನ ಸಂತೋಷಕ್ಕೆ ಅಡ್ಡಿಯಾಗುತ್ತಿದೆ ಅನ್ನಿಸಿತಂತೆ.
ಇದೇ ಕಾರಣಕ್ಕೆ ಗುರುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಹುಲ್ ಆಗಮಿಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ಪ್ಲ್ಯಾನ್ ಪ್ರಕಾರ ಮಗುವನ್ನೇ ಹತ್ಯೆ ಮಾಡಿದ್ದಾಳೆ. ಮಗುವನ್ನು ತರಕಾರಿ ಕತ್ತರಿಸಲು ಬಳಸೋ ಈಳಿಗೆಯಿಂದ ಕುತ್ತಿಗೆ ಕೊಯ್ದು ಜ್ಯೋತಿಯೇ ಕೊಂದು ಹಾಕಿದ್ದಾಳೆ. ಬಳಿಕ ಮಗು ಮೇಲಿನಿಂದ ಬಿದ್ದು ಗಾಯ ಮಾಡಿಕೊಂಡಿದೆ ಅಂತಾ ಕಥೆ ಕಟ್ಟಿದ್ದಳು. ಆದರೆ ಇದೀಗ ಎಲ್ಲವೂ ಬಯಲಾಗಿದೆ.
ಈ ಮಧ್ಯೆ ಕಲ್ಲಯ್ಯನನ್ನು ಪ್ರೀತಿಸಿ ಮದುವೆಯಾಗೋದಕ್ಕೂ ಮುಂಚೆ ಜ್ಯೋತಿ ಮತ್ತೊಂದು ಮದುವೆ ಆಗಿದ್ದಳಂತೆ. ಆತನೊಂದಿಗೂ ಸಂಸಾರ ಮಾಡದೇ ಕಲ್ಲಯ್ಯನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳು. ಆಕೆಯ ಪ್ರೀತಿಯ ಜಾಲಕ್ಕೆ ಬಿದ್ದ ಕಲ್ಲಯ್ಯ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದ. ಆದರೆ ಇದೀಗ ಆತನಿಗೂ ಡೈವೋರ್ಸ್ ಕೊಟ್ಟು ಮತ್ತೊಬ್ಬನ ಸಂಗ ಮಾಡಿ, ಕೊನೆಗೆ ತನ್ನ ಮಗಳನ್ನೇ ಕೊಲೆಗೈದು ತಾಯಿ ಅನ್ನೋ ಪದಕ್ಕೆ ಅಪವಾದ ತಂದಿದ್ದಾಳೆ. ಇದೀಗ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜ್ಯೋತಿ ಹಾಗೂ ರಾಹುಲ್ನನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ