ದೀಪ ಕಾಯುವ ನೆಪದಲ್ಲಿ‌ ಇಸ್ಪೀಟ್ ಆಡಿದರೆ ಕಾನೂನು ಕ್ರಮ

| Updated By: Rakesh Nayak Manchi

Updated on: Oct 21, 2022 | 10:14 AM

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೀಪ ಕಾಯುವ ನೆಪದಲ್ಲಿ ಇಸ್ಪೀಟ್ ಆಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಎಸ್​ಪಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ದೀಪ ಕಾಯುವ ನೆಪದಲ್ಲಿ‌ ಇಸ್ಪೀಟ್ ಆಡಿದರೆ ಕಾನೂನು ಕ್ರಮ
ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟ್ ಆಡದಂತೆ ಕೊಪ್ಪಳ ಎಸ್​ಪಿ ಎ.ಗಿರಿ ಎಚ್ಚರಿಕೆ
Follow us on

ಕೊಪ್ಪಳ: ದೀಪಾವಳಿ ಹಬ್ಬದಂದು ದೀಪ ಕಾಯುವ ನೆಪದಲ್ಲಿ ಒಂದಷ್ಟು ಮಂದಿ ಇಸ್ಪೀಟ್ ಆಡುತ್ತಾರೆ. ಈ ಬಗ್ಗೆ ಜಿಲ್ಲಾ ಪೊಲೀಸರು ಜಾಗೃತಿ ಮೂಡಿಸುತ್ತಿದ್ದು, ಹಬ್ಬದ ನೆಪದಲ್ಲಿ ಇಸ್ಪೀಟ್ ಆಟವಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಾಮೂಹಿಕ ಇಸ್ಪೀಟ್ ಆಡುವ ಜಾಗದಲ್ಲಿ ಡಂಗೂರ ಸೇರಿದಂತೆ ಧ್ವನಿವರ್ಧಕಗಳ ಮೂಲಕ ಸೂಚನೆ ಎಚ್ಚರಿಕೆ ನೀಡಲಾಗುತ್ತಿದೆ. ಕೊಪ್ಪಳ, ಗಂಗಾವತಿ, ಮುನಿರಾಬಾದ್ ಸೇರಿದಂತೆ ವಿವಿಧೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಕೂಡ ಮೈಕ್ ಮೂಲಕ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇ

ಬೆಂಗಳೂರು: ಗುತ್ತಿಗೆದಾರರ ಬಳಿ 50 ಸಾವಿರ ಲಂಚ ಪಡೆಯುವಾಗ ಬೆಸ್ಕಾಂ ಎಇ ನಾಗರಾಜ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಂಜೂರಾದ ಕೆಲಸಕ್ಕೆ ಎಕ್ಸಿಕ್ಯೂಟ್​ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಿಳೇಕಹಳ್ಳಿಯ ಬೆಸ್ಕಾಂ ಇಲಾಖೆ ಎಇ ನಾಗರಾಜ್ ಆರ್.ಆರ್.ನಗರ ಮನೆ ಬಳಿ ಹಣ ಪಡೆಯುತ್ತಿದ್ದಾಗ ಅಧಿಕಾರಿಗಳು ಬಂಧಿಸಿದ್ದಾರೆ.

ಅಫೀಮು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಬೆಳಗಾವಿ: ಆಟೋನಗರದಲ್ಲಿ ಅಫೀಮು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೋಧಪುರದ ಮೂಲದ ರೋಹಿತಾಶ್ವ ಬಿಷ್ಣೋಯಿ ಮತ್ತು ರುಕ್ಮಿಣಿ ನಗರ ನಿವಾಸಿ ರಾಜಕುಮಾರ್ ಬಿಷ್ಣೋಯಿ ಎಂಬ ಬಂಧಿತ ಆರೋಪಿಗಳಿಂದ 2.7 ಲಕ್ಷ ಮೌಲ್ಯದ 315 ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯ ಆಟೋನಗರದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಅಫೀಮು ಮಾರಾಟ ಮಾಡುತ್ತಿದ್ದ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶಾಲೆಗೆ ಹೋಗದ್ದಕ್ಕೆ ಹೊಡೆದ ತಾಯಿ; ಬಾಲಕ ಆತ್ಮಹತ್ಯೆ

ನೆಲಮಂಗಳ: ಶಾಲೆಗೆ ಹೋಗದ ಹಿನ್ನೆಲೆ ತಾಯಿ ಹೊಡೆದಿದ್ದಕ್ಕೆ 12 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಜಿಲ್ಲೆಯ ಕಡಬಗೆರೆ ಗ್ರಾಮದಲ್ಲಿ ನಡೆದಿದೆ. ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕಡಬಗೆರೆ ನಿವಾಸಿ ಮಂಜುನಾಥ್ ಮತ್ತು ಸವಿತಾ ದಂಪತಿ ಮಗ ಪೃಥ್ವಿರಾಜ್(12) ಆತ್ಮಹತ್ಯೆ ಮಾಡಿಕೊಂಡ ಬಾಲಕನಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಸಹಾಯವಾಣಿ

ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Fri, 21 October 22