ಭೋಪಾಲ್: ಗಂಡ ದಿನವೂ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಕುಡುಕಿ ಹೆಂಡತಿಯ ಕಾಟ ತಾಳಲಾರದೆ ಪೊಲೀಸರ ಮೊರೆ ಹೋಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಗರದ ನಿಶಾತ್ಪುರದ ವಿಶ್ವಕರ್ಮ ನಗರದಲ್ಲಿ ಬುಧವಾರ ಬೆಳಗ್ಗೆ 45 ವರ್ಷದ ಮಹಿಳೆಯೊಬ್ಬರು 61 ವರ್ಷದ ತನ್ನ ಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಆ ಮಹಿಳೆ ತನ್ನ ಪತಿಯನ್ನು ಸುಮಾರು 12 ಸ್ಥಳಗಳಲ್ಲಿ ಕಚ್ಚಿ ಗಾಯಗೊಳಿಸಿದ್ದು, ತನ್ನ ಉಗುರುಗಳಿಂದ ಪರಚಿ ಹಿಂಸಿಸಿದ್ದಾರೆ. ಅಷ್ಟೇ ಅಲ್ಲದೆ ಅವನ ಮೇಲೆ ಆಸಿಡ್ ಕೂಡ ಎರಚಿದ್ದಾರೆ. ಆಸಿಡ್ ಆತನಿಗೆ ತಾಗದಿದ್ದರೂ, ಅವರ ಬಟ್ಟೆಗಳಿಗೆ ಆ್ಯಸಿಡ್ ತಾಗಿ ಹಾಳಾಗಿದೆ. ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದಾರೆ. ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ.
ವಿಶ್ವಕರ್ಮ ನಗರದಲ್ಲಿ ವಾಸವಾಗಿರುವ ಟ್ರಕ್ ಚಾಲಕ 61 ವರ್ಷದ ನಾರಾಯಣ ಲೋಧಿ ತನ್ನ ಎರಡನೇ ಪತ್ನಿ 45 ವರ್ಷದ ದುರ್ಗಾ ಲೋಧಿಯೊಂದಿಗೆ ವಾಸವಾಗಿದ್ದರು. ದುರ್ಗಾಗೆ ಮೊದಲ ಗಂಡನಿಂದ 12 ಮತ್ತು 14 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಾರಾಯಣ ತಮ್ಮ ವೃತ್ತಿಯ ಕಾರಣದಿಂದ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದರು.
ಇದನ್ನೂ ಓದಿ: Child Adoption: ಭಾರತದಲ್ಲಿ ಸಲಿಂಗಕಾಮಿ ದಂಪತಿ ಮಗುವನ್ನು ದತ್ತು ತೆಗೆದುಕೊಳ್ಳಬಹುದೇ?
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಾರಾಯಣ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಮರಳಿದ್ದಾರೆ. ಆಗ ಮನೆಯಲ್ಲಿ ಕೆಲವು ವಸ್ತುಗಳು ಕಾಣೆಯಾಗಿರುವ ಬಗ್ಗೆ ಅವರು ಪತ್ನಿಯೊಂದಿಗೆ ಜಗಳವಾಡಿದ್ದಾರೆ. ವಾಗ್ವಾದ ಎಷ್ಟರಮಟ್ಟಿಗೆ ಏರಿತೆಂದರೆ, ಮದ್ಯವ್ಯಸನಿಯಾಗಿದ್ದ ದುರ್ಗಾ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಹಲವೆಡೆ ಕಚ್ಚಿ, ಪರಚಿದ್ದಾರೆ. ನಾರಾಯಣ ಓಡಿಹೋಗಲು ಯತ್ನಿಸಿದ್ದು, ದುರ್ಗಾ ಆತನ ಮೇಲೆ ಆಸಿಡ್ ಎರಚಿದ್ದಾಳೆ. ಅದೃಷ್ಟವಶಾತ್ ಆ್ಯಸಿಡ್ ನಾರಾಯಣ ಅವರ ಮೈಮೇಲೆ ಬೀಳದೆ ಬಟ್ಟೆ ಮೇಲೆ ಬಿದ್ದಿದೆ. ಇದರಿಂದ ಅವರ ಬಟ್ಟೆ ಸ್ವಲ್ಪ ಸುಟ್ಟಿದೆ.
ಇದನ್ನೂ ಓದಿ: ಕೇರಳ, ಮಣಿಪುರ, ಬಿಹಾರ, ಮಿಜೋರಾಂ, ಒಡಿಶಾಕ್ಕೆ ನೂತನ ರಾಜ್ಯಪಾಲರ ನೇಮಕ; ರಾಷ್ಟ್ರಪತಿ ಆದೇಶ
ದುರ್ಗಾಗೆ ಕುಡಿತದ ಚಟವಿದೆ ಎಂದು ನಾರಾಯಣ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಆಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದಿದ್ದಾರೆ. ದುರ್ಗಾ ವಿರುದ್ಧ ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ. ಹೀಗಾಗಿ, ಆಕೆಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Sat, 4 January 25