ಕನ್ಯೆ ಸಿಗದ ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ ಜಾಲ?
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯುವರೈತನಿಗೆ ಮದುವೆ ಹೆಸರಿನಲ್ಲಿ ಸಾವಿರ ರೂ ವಂಚಿಸಲಾಗಿದೆ. ಆರೋಪಿಗಳು ಕನ್ಯೆಯೆಂದು ಹೇಳಿಕೊಂಡ ಮಹಿಳೆ ಈಗಾಗಲೇ ಎರಡು ಮದುವೆ ಆಗಿ, ಮಕ್ಕಳು ಮತ್ತು ಮೊಮ್ಮಕ್ಕಳನ್ನು ಹೊಂದಿದ್ದಾಳೆ ಎಂದು ಬಹಿರಂಗವಾಗಿದೆ. ಸದ್ಯ ಜಿಲ್ಲೆಯಲ್ಲಿ ಇದು ವ್ಯವಸ್ಥಿತ ವಂಚನೆಯ ಜಾಲವಾಗಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ.
ಬಾಗಲಕೋಟೆ, ಜನವರಿ 05: ಕನ್ಯೆ ಸಿಗದ ರೈತನಿಗೆ (Farmers) ಮೋಸದ ಮದುವೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಯುವ ರೈತನಿಗೆ ಮೋಸ ಮಾಡಿದವಳು ಎರಡು ಮದುವೆ, ಎರಡು ಹೆಣ್ಮಕ್ಕಳು, ಅಷ್ಟೇ ಅಲ್ಲ ಇಬ್ಬರು ಮೊಮ್ಮಕ್ಕಳು ಹೊಂದಿದ ಅಜ್ಜಿ ಎಂದು ಗೊತ್ತಾಗಿದೆ. ಮೇಲಾಗಿ ಮೋಸ ಹೋದ ರೈತನಿಗೆ 55 ಸಾವಿರ ರೂ. ಬೇಡಿಕೆ ಇಡುವುದರ ಮೂಲಕ ಮತ್ತೊಂದು ಮದುವೆ ಆಫರ್ ನೀಡಿದ್ದು ಬೆಳಕಿಗೆ ಬಂದಿದೆ.
ಜಿಲ್ಲೆಯ ಮುಧೋಳ ತಾಲ್ಲೂಕಿನ ಬಿದರಿ ಗ್ರಾಮದ ಸೋಮಶೇಖರ್ಗೆ ಕಳೆದ ಐದ ವರ್ಷದಿಂದ ಕನ್ಯೆ ಹುಡುಕುತ್ತಿದ್ದರು. ಆದರೆ ಸಿಕ್ಕರಲಿಲ್ಲ. ಇದನ್ನೆ ಅಸ್ತ್ರ ಮಾಡಿಕೊಂಡ ಆರೋಪಿಗಳಾದ ಸತ್ಯಪ್ಪ, ಸಂಜು ಸಿದ್ದಪ್ಪ, ರವಿ ಮದುವೆಯಾದ ಮಂಜುಳಾ, ಸಂಬಂಧಿಕರ ಸೋಗಿನಲ್ಲಿ ಬಂದ ಲಕ್ಷ್ಮಿ, ನಾಗವ್ವ ಸೇರಿ ಏಳು ಜನರು ವಂಚನೆ ಎಸಗಿದ್ದಾರೆ.
ಇದನ್ನೂ ಓದಿ: ಅಬಕಾರಿ ಸಚಿವರ ತವರಲ್ಲಿ ಇದೆಂಥಾ ಕೃತ್ಯ: ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ್ದಕ್ಕೆ ಕರೆಂಟ್ ಶಾಕ್ ನೀಡಿ ಹತ್ಯೆ
ಸೋಮಶೇಖರ್ ಕಡೆಯಿಂದ 4-5 ಸಾವಿರ ರೂ. ಹಣ ಪಡೆದು ವಂಚಿಸಿದ್ದಾರೆ. ಮದುವೆಯಾಗಿ ತಿಂಗಳ ನಂತರ ಮಂಜುಳಾ ಎರಡು ಮದುವೆಯಾಗಿದ್ದು, ಇಬ್ಬರು ಹೆಣ್ಮಕ್ಕಳು, ಇಬ್ಬರು ಮೊಮ್ಮಕ್ಕಳು ಹೊಂದಿದ್ದಾಳೆ ಎಂದು ಗೊತ್ತಾಗಿದೆ. ತನಗಾದ ಅನ್ಯಾಯ ವಂಚನೆ ಬಗ್ಗೆ ಎಳೆ ಎಳೆಯಾಗಿ ಸೋಮಶೇಖರ್ ಟಿವಿ9 ಎದುರು ಬಿಚ್ಚಿಟ್ಟಿದ್ದಾರೆ.
ಕನ್ಯೆ ಸಿಗದ ಯುವ ರೈತರೆ ಟಾರ್ಗೆಟ್
ಕನ್ಯೆ ಸಿಗದ ಯುವ ರೈತರಿಗೆ ವಂಚನೆ ಮಾಡುವ ವ್ಯವಸ್ಥಿತ ಜಾಲ ಉತ್ತರ ಕರ್ನಾಟಕದಲ್ಲಿ ಬೀಡುಬಿಟ್ಟಿದೆ ಎಂಬ ಸಂಶಯ ಶುರುವಾಗಿದೆ. ಯುವ ರೈತರಿಗೆ ವಂಚನೆ ಮಾಡುವ ಜಾಲ ಸದ್ದಿಲ್ಲದೆ ಬೀಡುಬಿಟ್ಟ ಲಕ್ಷಣಗಳು ಕಂಡುಬಂದಿವೆ. ಇವರು ಎಷ್ಟು ಭಂಡರೆಂದರೆ ಸೋಮಶೇಖರ್ಗೆ ಮಂಜುಳಾ ಕೈಕೊಟ್ಟ ಬೆನ್ನಲ್ಲೇ ಇನ್ನು 55 ಸಾವಿರ ರೂ. ಕೊಡು ಇನ್ನೊಬ್ಬಳ ಜೊತೆ ಮದುವೆ ಮಾಡಿಸುತ್ತೇವೆ ಎಂದು ಮತ್ತೊಬ್ಬ ಯುವತಿ ಕರೆತಂದು ನಿಲ್ಲಿಸಿದ್ದರಂತೆ.
ಕನ್ಯೆ ಸಿಗದ ಯುವರೈತರೇ ಇವರ ಟಾರ್ಗೆಟ್ ಆಗಿದ್ದಾರೆ. ಕನ್ಯೆ ಸಿಗದ ಯುವ ರೈತರ ಆಪ್ತರು, ಸಂಬಂಧಿಕರಿಗೆ ಆಮಿಷ ನೀಡಿ ಲಕ್ಷ ಲಕ್ಷ ರೂ. ಡೀಲ್ ಮಾಡ್ತಾರೆ. ಮೋಸ ಮಾಡೋದಕ್ಕೆ ಸೃಷ್ಟಿಯಾಗ್ತಾರೆ ವಧುವಿನ ನಕಲಿ ಸಂಬಂಧಿಕರು. ಇಲ್ಲಿ ನಕಲಿ ಚಿಕ್ಕಮ್ಮ, ದೊಡ್ಡಮ್ಮಂದಿರ ವೇಷದಲ್ಲಿ ಲಕ್ಷ್ಮಿ ಹಾಗೂ ನಾಗವ್ವ ಎಂಟ್ರಿ ಕೊಡ್ತಾರೆ. ಈ ಹಿಂದೆಯೂ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ.
ವ್ಯವಸ್ಥಿತ ದಂದೆ?
ಲಕ್ಷ್ಮಿ ಹಾಗೂ ನಾಗವ್ವ ಹುಬ್ಬಳ್ಳಿ ಮೂಲದವರಾಗಿದ್ದು, ಉತ್ತರ ಕರ್ನಾಟಕದಲ್ಲಿ ಕನ್ಯೆ ಸಿಗದ ರೈತರಿಗೆ ಪಂಗನಾಮ ಹಾಕುವ ವ್ಯವಸ್ಥಿತ ಜಾಲದ ಸಂಶಯ ಇದೆ. ಇದು ವ್ಯವಸ್ಥಿತ ದಂದೆಯಾ? ಹೇಗೆ ಎಂಬುದರ ಬಗ್ಗೆ ಮುಧೋಳ ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಇಬ್ಬರು ಬಾಲಕರು ನದಿಪಾಲು, ಮಗನ ರಕ್ಷಣೆಗೆ ಹೋದ ತಾಯಿ ಜಲಸಮಾಧಿ
ಇನ್ನು ಸೋಮಶೇಖರ್ ತಂದೆ ಮಲ್ಲಪ್ಪ ಹೊಲ ಅಡವಿಟ್ಟು ಹಣ ಕೊಟ್ಟೆವು, ಹಣವೂ ಇಲ್ಲ ಮದುವೆಯೂ ಹಾಳಾಯ್ತು, ರೈತರಿಗೆ ಕನ್ಯೆ ಕೊಡದೆ ಇರೋದು ತಪ್ಪು. ಹೀಗೆ ಮುಂದುವರೆದರೆ ರೈತರ ಮಕ್ಕಳ ಗತಿ ಏನು ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಹಣ ನಮಗೆ ಕೊಡಿಸಿ ಮೋಸ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಇದೊಂದು ವ್ಯವಸ್ಥಿತ ಜಾಲ ಆಗಿದ್ದು, ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ಮಾಡದೆ ಕಠಿಣ ಕ್ರಮ ಕೈಗೊಂಡು ವಂಚಕರ ಹೆಡೆಮುರಿ ಕಟ್ಟಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.