ಅಬಕಾರಿ ಸಚಿವರ ತವರಲ್ಲಿ ಇದೆಂಥಾ ಕೃತ್ಯ: ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ್ದಕ್ಕೆ ಕರೆಂಟ್ ಶಾಕ್ ನೀಡಿ ಹತ್ಯೆ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ವಿವಾದದಿಂದಾಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಟ್ಟಿಗೆಯಿಂದ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಿದ್ದರು. ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ಆತಂಕ ಮೂಡಿದೆ.
ಬಾಗಲಕೋಟೆ, ಡಿಸೆಂಬರ್ 23: ಅಬಕಾರಿ ಸಚಿವರ ತವರಲ್ಲಿ ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದಕ್ಕೆ ಐವರಿಂದ ಓರ್ವ ವ್ಯಕ್ತಿಯನ್ನು ಹತ್ಯೆ (kill) ಮಾಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೆಂಕರೆಡ್ಡಿ ಶೇಷಪ್ಪನವರ(40)ಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಲಾಗಿದೆ. ಸದ್ಯ ಈ ಕೊಲೆ ಕೇಸ್ನಲ್ಲಿ ಐವರು ಆರೋಪಿಗಳನ್ನು ಕೆರೂರು ಪೊಲೀಸರು ಬಂಧಿಸಿದ್ದಾರೆ. ಹನುಮಂತ ನೀಲರ್, ಪತ್ನಿ ಶೈಲಾ ನೀಲರ್, ಪರ್ವತಗೌಡ ಮುದಿಗೌಡ್ರ ಪುಟ್ಟಪ್ಪ ಮುದಿಗೌಡ್ರ, ಸಿದ್ದಪ್ಪ ನೀಲಗೌಡ್ರ ಬಂಧಿತರು.
ಬಂಧಿತ ಆರೋಪಿ ಹನುಮಂತ ನೀಲರ್ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಮದ್ಯ ಸೇವಿಸಿ ವೆಂಕರೆಡ್ಡಿ ಮನೆ ಮುಂದೆ ಪ್ಯಾಕೆಟ್ ಬಿಸಾಡಿ ಹೋಗುತ್ತಿದ್ದರು. ಜೊತೆಗೆ ಕುಡಿದ ಅಮಲಿನಲ್ಲಿ ಕೆಲವರು ವೆಂಕರೆಡ್ಡಿ ಮನೆ ಮುಂದೆ ಜಗಳವಾಡುತ್ತಿದ್ದರು. ಹೀಗಾಗಿ ನಮ್ಮ ಮನೆ ಬಳಿ ಮದ್ಯ ಮಾರಬೇಡಿ ಎಂದು ವೆಂಕರೆಡ್ಡಿ ಹೇಳಿದ್ದರು.
ಇದನ್ನೂ ಓದಿ: ದಾವಣಗೆರೆ: 20 ರೂಪಾಯಿ ಕುರ್ ಕುರೆ ವಿಚಾರಕ್ಕೆ ಮಾರಾಮಾರಿ, ಬಂಧನ ಭೀತಿಯಿಂದ ಗ್ರಾಮ ತೊರೆದ 25 ಜನ
ಈ ವಿಚಾರವಾಗಿ ಡಿ.21ರಂದು ವೆಂಕರೆಡ್ಡಿ ಮೇಲೆ ಐವರ ಗ್ಯಾಂಗ್ ಹಲ್ಲೆ ನಡೆಸಿ ಕರೆಂಟ್ ಶಾಕ್ ನೀಡಿದೆ. ಗಾಯಾಳು ವೆಂಕರೆಡ್ಡಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದರು, ಚಿಕಿತ್ಸೆ ಫಲಿಸದೆ ವೆಂಕರೆಡ್ಡಿ ಸಾವನ್ನಪ್ಪಿದ್ದಾರೆ.
ಬೆಂಕಿಪೊಟ್ಟಣ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ಇಬ್ಬರ ಬಂಧನ
ಮತ್ತೊಂದು ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ ಮಾಡಿದ್ದ ಇಬ್ಬರು ವ್ಯಕ್ತಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತ ಶಂಕರ್ ನಾಗ್ ಸ್ನೇಹಿತರಾದ ಲಕ್ಷ್ಮಣ್, ಗಣೇಶ್ ಬಂಧಿತರು.
ಇದನ್ನೂ ಓದಿ: ಬೆಂಗಳೂರು ಅಪಘಾತಗಳ ರಾಜಧಾನಿ: ನೆಲಮಂಗಲ ಸಂಚಾರಿ ಠಾಣೆ ರಾಜ್ಯದಲ್ಲೇ ನಂಬರ್ 1
ಡಿ.17ರಂದು ಕೋಲಾರ ತಾಲೂಕಿನ ಹರಟಿ ಗ್ರಾಮದಲ್ಲಿ ಕೊಲೆ ನಡೆದಿತ್ತು. ಕುಡಿದ ಅಮಲಿನಲ್ಲಿ ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೇಳಿದ್ದ ಇಬ್ಬರು, ಬೆಂಕಿ ಪೊಟ್ಟಣ ನೀಡಿಲ್ಲ ಎಂದು ಶಂಕರ್ನಾಗ್ ಮೇಲೆ ಬಿಯರ್ ಬಾಟಲ್ನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಬಳಿಕ ಕುತ್ತಿಗೆ ಹಿಸುಕಿ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.