ದಾವಣಗೆರೆ: 20 ರೂಪಾಯಿ ಕುರ್ ಕುರೆ ವಿಚಾರಕ್ಕೆ ಮಾರಾಮಾರಿ, ಬಂಧನ ಭೀತಿಯಿಂದ ಗ್ರಾಮ ತೊರೆದ 25 ಜನ
ಮಕ್ಕಳ ನೆಚ್ಚಿನ ಕುರ್ ಕುರೆ ದಾವಣಗೆರೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಎಂಬಲ್ಲಿ 25 ಜನ ಗ್ರಾಮ ತೊರೆಯುವಂತೆ ಮಾಡಿದೆ. ಅಷ್ಟೇ ಅಲ್ಲ, ಹತ್ತು ಜನ ಗಾಯಗೊಂಡು ಆಸ್ಪತ್ರೆ ಸೇರುವಂತೆ ಮಾಡಿದೆ. ಹಾಗಾದರೆ ಹೊನ್ನೆಬಾಗಿ ಗ್ರಾಮದಲ್ಲಿ ನಡೆದಿದ್ದೇನು? ಕುರ್ ಕುರೆ ಜಗಳ ವಿಕೋಪಕ್ಕೆ ಹೋಗಿದ್ದು ಹೇಗೆ? ವಿವರಗಳಿಗೆ ಮುಂದೆ ಓದಿ.
ದಾವಣಗೆರೆ, ಡಿಸೆಂಬರ್ 23: ಕೇವಲ 20 ರೂಪಾಯಿ ಕುರ್ ಕುರೆ ವಿಚಾರವಾಗಿ ನಡೆದ ಗಲಾಟೆಯಿಂದ 25 ಜನ ಊರು ಬಿಟ್ಟಿದ್ದಾರೆ! ದಾವಣಗೆರೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿದ್ದು, ಗಲಾಟೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಹೊನ್ನೇಬಾಗಿ ಗ್ರಾಮದಲ್ಲಿ ಅತೀಫ್ ಉಲ್ಲಾ ಎಂಬುವವರು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದೇ ಅಂಗಡಿಯಿಂದ ಸದ್ದಾಂ ಎಂಬುವವರ ಮಕ್ಕಳು ಕುರ್ ಕುರೆ ಖರೀದಿಸಿದ್ದಾರೆ. ಆದರೆ, ಕುರ್ ಕುರೆ ಎಕ್ಸ್‌ಪೈರಿ ಡೇಟ್ ಆಗಿದ್ದು ಬೇರೆ ಕುರ್ ಕುರೆ ನೀಡುವಂತೆ ಸದ್ದಾಂ ಮನೆಯವರು ಆಗ್ರಹಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದುಹೋಗಿದೆ.
ಅಷ್ಟಕ್ಕೇ ಗಲಾಟೆ ಮುಗಿಯಲಿಲ್ಲ. ಮಾರನೇ ದಿನ ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸದ್ದಾಂ, ಆತೀಫ್ ವಿರುದ್ಧ ದೂರು ನೀಡಿದ್ದಾರೆ. ದೂರು ನೀಡಿದ್ದಕ್ಕೆ ರೊಚ್ಚಿಗೆದ್ದ 30ಕ್ಕೂ ಹೆಚ್ಚು ಜನರು ಸದ್ದಾಂ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೋಟೆಲ್ ಧ್ವಂಸಗೊಳಿಸಿದ್ದಾರೆ ಎಂದೂ ದೂರಲಾಗಿದೆ. ಈ ಗಲಾಟೆ ಬಿಡಿಸಲು ಬಂದವರ ಮೇಲೂ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಬಂಧನ ಬೀತಿಯಿಂದ ಗ್ರಾಮದ 25 ಜನ ಊರು ತೊರೆದಿದ್ದಾರೆ.
ಇದನ್ನೂ ಓದಿ: ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಂಡು ಮನೆಯವರನ್ನು ನಂಬಿಸಿದ ಯುವಕ; ಕಾರಣ ಕೇಳಿದ್ರೆ ಶಾಕ್ ಆಗ್ತೀರ
ಸದ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಎರಡೂ ಕಡೆಯವರಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ