ಬೆಂಗಳೂರು ಅಪಘಾತಗಳ ರಾಜಧಾನಿ: ನೆಲಮಂಗಲ ಸಂಚಾರಿ ಠಾಣೆ ರಾಜ್ಯದಲ್ಲೇ ನಂಬರ್ 1

ಬೆಂಗಳೂರು ಹೊರಹೊಲಯದ ತಿಪ್ಪಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತ ಆರು ಮಂದಿಯನ್ನ ಕಾರಿನಲ್ಲೇ ಸಮಾಧಿ ಮಾಡಿದೆ. ಚಾಲಕನ ಕಂಟ್ರೋಲ್ ತಪ್ಪಿ 51 ಟನ್ ತೂಕದ ಕಂಟೈನರ್ ಕಾರಿನ ಮೇಲೆ ಉರುಳಿ ಬೀಳುವ ಭಯಾನಕ ದೃಶ್ಯ ಎದೆ ಝಲ್ ಎನಿಸುವಂತಿದೆ. ಕಂಟೇನರ್​ ಬಿದ್ದ ರಭಸಕ್ಕೆ ಕಾರು ಗುರುತು ಸಿಗದಂತೆ ಅಪ್ಪಚ್ಚಿಯಾಗಿದೆ. ಇನ್ನು ಈ ಭಯಾನಕ ಅಪಘಾತದ ಬೆನ್ನಲ್ಲೇ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯ ಶಾಕಿಂಗ್ ವರದಿ ಬಹಿರಂಗವಾಗಿದೆ.

ಬೆಂಗಳೂರು ಅಪಘಾತಗಳ ರಾಜಧಾನಿ: ನೆಲಮಂಗಲ ಸಂಚಾರಿ ಠಾಣೆ ರಾಜ್ಯದಲ್ಲೇ ನಂಬರ್ 1
Nelamangala (1)
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on:Dec 22, 2024 | 4:28 PM

ಬೆಂಗಳೂರು, (ಡಿಸೆಂಬರ್ 22): ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಜಾಸ್ತಿಯಾದಷ್ಟೂ ಅವುಗಳ ಟೈರ್ ಕೆಳಗೆ ಸಿಲುಕಿ ಜೀವ ಬಿಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಟ್ರಾಫಿಕ್ ಜಾಸ್ತಿ ಇರುವ ಕಡೆ ವಾಹನ ಅಪಘಾತ ಹೆಚ್ಚು ಎಂದು ಭಾವಿಸಬೇಕಿಲ್ಲ, ಟ್ರಾಫಿಕ್ ಕಡಿಮೆ ಇರುವ ಕಡೆ ಭರ್ರನೆ ನುಗ್ಗುವ ವಾಹನಗಳು ಮಾರಣಾಂತಿಕವಾಗುತ್ತಿವೆ. ಬೆಂಗಳೂರು ಹೊರವಲಯದಲ್ಲೇ ಅಪಘಾತ, ಸಾವಿನ ಪ್ರಮಾಣ ಹೆಚ್ಚು ಎನ್ನುತ್ತಿವೆ ಅಂಕಿ ಅಂಶಗಳು. ಹೌದು…ಬೆಂಗಳೂರು-ತುಮಕೂರು ಹೈವೇನಲ್ಲಿ ಕಾರಿನ ಮೇಲೆ ಕಂಟೇನರ್ ಬಿದ್ದು ಆರು ಜನ ಮೃತಪಟ್ಟಿರುವ ಪ್ರಕರಣದ ಬೆನ್ನಲ್ಲೇ ನೆಲಮಂಗಲದ ಸಂಚಾರಿ ಪೊಲೀಸ್​ ಠಾಣೆಯ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಇಡೀ ಕರ್ನಾಟಕದಲ್ಲೇ ನೆಲಮಂಗಲ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಮಾಣದ ಅಪಘಾತಗಳು ಸಂಭವಿಸಿವೆ. ಈ ಮೂಲಕ ನೆಲಮಂಗಲ ಸಂಚಾರಿ ಠಾಣೆ ರಾಜ್ಯದಲ್ಲೇ ನಂಬರ್ 1 ಸ್ಥಾನದಲ್ಲಿದೆ.

ಕರ್ನಾಟಕದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಕ್ರೈಂನಲ್ಲಿ (1500ಕ್ಕೂ ಹೆಚ್ಚು ಕೇಸ್ ) ಮೊದಲ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಗೃಹ ಇಲಾಖೆಯ ಗಮನ ಸೆಳೆದಿತ್ತು. ಇದೀಗ ಇದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಂಚಾರಿ ಠಾಣೆಯಲ್ಲೇ ಅತಿ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕರ್ನಾಟಕದಲ್ಲೇ ಮಾದನಾಯಕನಹಳ್ಳಿ ಠಾಣೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!

144 ಅಪಘಾತ ಪ್ರಕರಣಗಳು

ಉದ್ಯಮಿ ಚಂದ್ರಮ್ ಐಷಾರಾಮಿ ಕಾರು ಅಪಘಾತದಲ್ಲಿ ಆರು ಜನರು ಸಾವಿಗೀಡಾದ ಘಟನೆ ಬೆನ್ನಲ್ಲೇ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯ ವರದಿ ರಾಜ್ಯದ ಗಮನ ಸೆಳೆದಿದೆ. 2024 ರ ಜನವರಿಯಿಂದ ಡಿಸೆಂಬರ್ ವರೆಗೆ 144 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ 148 ಜನರು ಸಾವನ್ನಪ್ಪಿದ್ದಾರೆ ಎನ್ನುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ನೆಲಮಂಗಲ ತಾಲೂಕು ರಾಜ್ಯದ ಪ್ರಮುಖ ಅಪಘಾತದ ಕೇಂದ್ರವಾಗಿ ಹೊರಹೊಮ್ಮಿದೆ. ನೆಲಮಂಗಲ ರಾಜ್ಯದ 23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಗೇಟ್‌ವೇ ಆಗಿದ್ದು, ರಾಷ್ಟ್ರೀಯ ಹೆದ್ದಾರಿ 48 (ಬೆಂಗಳೂರು-ತುಮಕೂರು) ಮತ್ತು (ಹಾಸನ-ನೆಲಮಂಗಲ) ಹೆದ್ದಾರಿ 75 ಎರಡು ಹೆದ್ದಾರಿಗಳನ್ನು ಸಂದಿಸುವ ಪ್ರಮುಖ ಕೇಂದ್ರ ಆಗಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗಿವೆ.

ಹೆಚ್ಚು ಅಪಘಾತಕ್ಕೆ ಕಾರಣಗಳೇನು?

ನೆಲಮಂಗಲ ತುಮಕೂರು ಹೆದ್ದಾರಿ ದಶಪಥ ರಸ್ತೆಯನ್ನಾಗಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಹೆದ್ದಾರಿ ಕಾಮಗಾರಿ ವಿಳಂಬದಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸುಮಾರು 70ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ, ಎರಡು ನಗರಗಳು ಒಂದು ಪಟ್ಟಣಕ್ಕೆ ಒಂದೇ ಸಂಚಾರಿ ಠಾಣೆ ಇದೆ. ಅಲ್ಲದೆ ಈ ಸಂಚಾರಿ ಠಾಣೆಯಲ್ಲಿ ಕಡಿಮೆ ಸಿಬ್ಬಂದಿ ಕಾರಣ ಹೆದ್ದಾರಿಗಳಲ್ಲಿ ಸಂಚಾರ ಮುಕ್ತ ಮಾಡಲು ಕಷ್ಟಸಹಜವಾಗಿದೆ. ಈ ನಡುವೆ ಹೆದ್ದಾರಿಗಳಲ್ಲಿ ರಾಜಕಾರಣಿಗಳು,ಸಚಿವರು, ಸೇರಿದಂತೆ ಗಣ್ಯರು ಸಂಚರಿಸುವುದರಿಂದ ಸಿಬ್ಬಂದಿ ಕೊರತೆ ಹೆಚ್ಚಳವಾಗಿದೆ. ಈ ನಡುವೆ ಸುಂಕ ವಸೂಲಿ ಮಾಡುತ್ತಿರುವ ಟೋಲ್ ಕಂಪನಿಗಳು ಬರೀ ಹಣ ಸಂಗ್ರಹ ಮಾಡುವುದು ಮಾತ್ರ ನಮ್ಮ ಕರ್ತವ್ಯ ಎಂದು ನಿರ್ಲಕ್ಷ್ಯ ತೋರುತ್ತಿವೆ.

ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶವು ದೇಶದ ನಂಬರ್ 1 ಅಪಘಾತದ ಹಾಟ್​ಸ್ಪಾಟ್​

ಗೃಹ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ

ಈ ಎಲ್ಲಾ ಗಂಭೀರ ಸಮಸ್ಯೆಗಳನ್ನು ಗೃಹ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರ ವರದಿ ಪಡೆದುಕೊಂಡಿದೆ. ಆದ್ರೆ ಇದಕ್ಕೂ ನಮಗೂ ಸಂಬಂಧವಿಲ್ಲ, ರಸ್ತೆಯಲ್ಲಿ ಜನ ಏನಾದ್ರೂ ಪರವಾಗಿಲ್ಲ ನಮ್ಮ ಕುಟುಂಬಸ್ಥರು ಚೆನ್ನಾಗಿದ್ರೆ ಸಾಕು ಎಂದು ಕೈ ಕಟ್ಟಿ ಕುಳಿತಿವೆ.

ತಕ್ಷಣ ಕ್ರಮದ ಅಗತ್ಯ

ಹೆದ್ದಾರಿ ಸುರಕ್ಷತೆ ಕ್ರಮಗಳನ್ನು ಹೆಚ್ಚಿಸಲು ಸರ್ಕಾರ, ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಬೇಕು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸೂಕ್ತ ಕ್ರಮ ಜರುಗಿಸಬೇಕು. ಮಾದನಾಯನಹಳ್ಳಿ ಹಾಗೂ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ಪ್ರತ್ಯೇಕ ನಿರ್ಮಾಣ ಮಾಡುವುದು, ಈಗಾಗಲೇ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಮಾಡುವುದು, ರಸ್ತೆ ಸುರಕ್ಷಿತ ಕ್ರಮಗಳನ್ನು ಹೆಚ್ಚೆಚ್ಚು ಅಳವಡಿಸುವುದು, ವಿಶಾಲವಾದ ರಸ್ತೆ ನಿರ್ಮಾಣ ಮಾಡುವುದರಿಂದ ಸಂಚಾರ ದಟ್ಟಣೆ ಕಡಿಮೆ ಆಗಬಹುದು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:16 pm, Sun, 22 December 24