ಡಿ 31ರಂದು ಸಾರಿಗೆ ನೌಕರರ ಮುಷ್ಕರ: ಸಂಘಟನೆಗಳಲ್ಲೇ ಗೊಂದಲ!
ಡಿಸೆಂಬರ್ 31 ರಂದು KSRTC ನೌಕರರ ಮುಷ್ಕರದ ಬಗ್ಗೆ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಅವರು ಹೇಳಿಕೆ ನೀಡಿದ್ದಾರೆ. ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಇಲ್ಲದಿರುವುದರಿಂದ ಮುಷ್ಕರಕ್ಕೆ ಸಿದ್ಧತೆ ನಡೆದಿದೆ. ಸರ್ಕಾರಿ ನೌಕರರಿಗಿಂತ ಹೆಚ್ಚಿನ ವೇತನವನ್ನು ಕೋರಿದ್ದು, ಸಮಾನ ವೇತನವನ್ನು ಬೇಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, KSRTC ನೌಕರರ ಕೂಟ ಮುಷ್ಕರಕ್ಕೆ ಬೆಂಬಲವಿಲ್ಲ ಎಂದು ಘೋಷಿಸಿದೆ.
ಬೆಂಗಳೂರು, ಡಿಸೆಂಬರ್ 22: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 31ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿದಂತೆ, ಒಟ್ಟು ಆರು ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಸದ್ಯ ಸಂಘಟನೆಗಳಲ್ಲೇ ಗೊಂದಲ ಸೃಷ್ಟಿಯಾಗಿದೆ. ರಾಜ್ಯ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ಶತಸಿದ್ಧ ಎಂದಿದ್ದರೆ, KSRTC ನೌಕರರ ಕೂಟ ಮುಷ್ಕರಕ್ಕೆ ಬೆಂಬಲವಿಲ್ಲ ಎಂದಿದ್ದಾರೆ. ಹಾಗಾಗಿ ಡಿ. 31ರಂದು ಮುಷ್ಕರ ನಡೆಯುತಾ, ಇಲ್ವಾ ಎನ್ನುವುದು ಅನುಮಾನ ಹುಟ್ಟಿಸಿದೆ.
ಡಿಸೆಂಬರ್ 31ರಂದು ಎಂದಿನಂತೆ ಸಾರಿಗೆ ಬಸ್ ಸಂಚಾರವಿರುತ್ತೆ: ಅಧ್ಯಕ್ಷ ಚಂದ್ರು
ಈ ಬಗ್ಗೆ KSRTC ನೌಕರರ ಕೂಟದ ಅಧ್ಯಕ್ಷ ಚಂದ್ರು ಹೇಳಿಕೆ ನೀಡಿದ್ದು, ಡಿಸೆಂಬರ್ 31ರಂದು ಸಾರಿಗೆ ನೌಕರರ ಮುಷ್ಕರಕ್ಕೆ KSRTC ಕಾರ್ಮಿಕ ಸಂಘಟನೆ ಜಂಟಿ ಕ್ರಿಯಾ ಸಮಿತಿ ಬೆಂಬಲವಿಲ್ಲ. ಡಿಸೆಂಬರ್ 31ರಂದು ಎಂದಿನಂತೆ ಸಾರಿಗೆ ಬಸ್ ಸಂಚಾರವಿರುತ್ತೆ. ಜಂಟಿ ಕ್ರಿಯಾ ಸಮಿತಿ ಕರೆದಿರುವ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 31ರಿಂದ ಸಾರಿಗೆ ಮುಷ್ಕರ: ಬೆಂಬಲ ನೀಡುವಂತೆ ಡ್ರೈವರ್, ಕಂಡಕ್ಟರ್ ಪ್ರಯಾಣಿಕರಿಗೆ ಕರಪತ್ರ ಹಂಚಿದ ಸಾರಿಗೆ ಮುಖಂಡರು
ಚೌಕಾಸಿ ಸೆಟ್ಲ್ಮೆಂಟ್ಗಾಗಿ ಮುಷ್ಕರಕ್ಕೆ ಕರೆನೀಡಿದ್ದು ಸರಿಯಲ್ಲ. ಸಾರಿಗೆ ಸಿಬ್ಬಂದಿಗೆ ಸರ್ಕಾರಿ ನೌಕರರಷ್ಟು ವೇತನ ಕೊಡಿಸಲಾಗಿಲ್ಲ. ಸಮಾನ ವೇತನ ಕೊಡಿಸಲು ಜಂಟಿ ಕ್ರಿಯಾ ಸಮಿತಿಗೆ ಆಗುತ್ತಿಲ್ಲ. ಜಂಟಿ ಕ್ರಿಯಾ ಸಮಿತಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಚುನಾವಣೆಗೂ ಮೊದಲು ಸಾರಿಗೆ ಸಿಬ್ಬಂದಿಗೆ ಭರವಸೆ ನೀಡಿತ್ತು. ಭರವಸೆ ಈಡೇರಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಕ್ರಮಕೈಗೊಂಡಿದೆ. ಡಿಸೆಂಬರ್ 31ರಂದು ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಲ್ಲ ಹಾಗಾಗಿ ಮುಷ್ಕರ ಶತಸಿದ್ಧ: ಅನಂತ್ ಸುಬ್ಬರಾವ್
ಇನ್ನು ಟಿವಿ9ಗೆ ರಾಜ್ಯ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಪ್ರತಿಕ್ರಿಯಿಸಿದ್ದು, ಸಾರಿಗೆ ನೌಕರರ ಬೇಡಿಕೆ ಈಡೇರಿಲ್ಲ ಹಾಗಾಗಿ ಮುಷ್ಕರ ಶತಸಿದ್ಧ. ನಾವು ಮುಷ್ಕರ ಮಾಡುತ್ತೇವೆ ಎಂದು ಸಚಿವರಿಗೆ ನೋಟಿಸ್ ಕೊಟ್ಟಿದ್ದೇವೆ. ಸಾರಿಗೆ ಇಲಾಖೆ ನೌಕರರು ಸಹ ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ಮುಷ್ಕರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾನ್ಸಿ ನಂಬರ್ ಹರಾಜಿನಿಂದ ಸರ್ಕಾರಕ್ಕೆ ಬರೋಬ್ಬರಿ 80 ಲಕ್ಷ ರೂಪಾಯಿ ಆದಾಯ: 0001 ನಂಬರ್ 4.35 ಲಕ್ಷಕ್ಕೆ ಹರಾಜು
ಸರ್ಕಾರ ಕರೆದು ಚರ್ಚಿಸಲಿ ಎಂದು ನೋಟಿಸ್ ನೀಡಿದ್ದೇವೆ. ಆದರೆ ಸರ್ಕಾರ ಈವರೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಬದಲಿಗೆ ಮುಷ್ಕರ ಮಾಡಿದರೆ ಎಸ್ಮಾ ಜಾರಿ ಮಾಡುತ್ತೇವೆ ಅಂದಿದ್ದಾರೆ. ಈ ಹಿಂದೆ ಎಸ್ಮಾ ಜಾರಿ ಮಾಡಿದ್ದ ಸರ್ಕಾರ ಭಸ್ಮ ಆಗೋಗಿದೆ. ಸಿದ್ದರಾಮಯ್ಯ ಅಂಥ ದುಸ್ಸಾಹಸಕ್ಕೆ ಕೈಹಾಕಲ್ಲ ಅಂದ್ಕೊಂಡಿದ್ದೇನೆ. ನಮ್ಮ ಬೇಡಿಕೆಗಳು ಈಡೇರಿಲ್ಲ ಹಾಗಾಗಿ ಮುಷ್ಕರ ಶತಸಿದ್ಧ. ಮುಷ್ಕರ ಮಾಡಿಸೋದು, ತಪ್ಪಿಸುವುದು ಸಿಎಂ ಕೈಯಲ್ಲಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.